AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಮೂವರಿಂದ 145 ರನ್; ಉಳಿದವರಿಂದ ಕೇವಲ 48 ರನ್

India's 2nd Innings Struggle: ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ ಜೈಸ್ವಾಲ್ ಸೊನ್ನೆಗೆ ಔಟಾದರು. ರಾಹುಲ್ (35), ಪಡಿಕ್ಕಲ್ (44) ಹಾಗೂ ಪಂತ್ (ವೇಗದ ರನ್) ಉತ್ತಮ ಪ್ರದರ್ಶನ ನೀಡಿದರೂ, ಉಳಿದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ತಂಡ 200 ರನ್ ಗಡಿ ಮುಟ್ಟಲಿಲ್ಲ. ಮೊದಲ ಇನ್ನಿಂಗ್ಸ್ ಮುನ್ನಡೆಯಿಂದಾಗಿ ಶ್ರೀಲಂಕಾಗೆ ಸವಾಲಿನ ಗುರಿ ನೀಡಿದ್ದು, ಇದೀಗ ಭಾರತದ ಬೌಲರ್‌ಗಳು ಎದುರಾಳಿ ತಂಡವನ್ನು ಬೇಗ ಕಟ್ಟಿಹಾಕುವ ಜವಾಬ್ದಾರಿ ಇದೆ.

IND vs SL: ಮೂವರಿಂದ 145 ರನ್; ಉಳಿದವರಿಂದ ಕೇವಲ 48 ರನ್
Ind Vs Sl
ಪೃಥ್ವಿಶಂಕರ
|

Updated on:Aug 18, 2026 | 3:28 PM

Share

ಗ್ಯಾಲೆ ಟೆಸ್ಟ್‌ನಲ್ಲಿ ಭಾರತದ ಎರಡನೇ ಇನ್ನಿಂಗ್ಸ್ ಕೇವಲ 193 ರನ್‌ಗಳಿಗೆ ಅಂತ್ಯವಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 178 ರನ್‌ಗಳ ಮುನ್ನಡೆ ಪಡೆದುಕೊಂಡಿದ್ದ ಟೀಂ ಇಂಡಿಯಾ, ಇದೀಗ ಶ್ರೀಲಂಕಾ ತಂಡಕ್ಕೆ 371 ರನ್‌ಗಳ ಗುರಿ ನೀಡಿದೆ. ಈ ಗುರಿ ಬೆನ್ನಟ್ಟುವುದು ಆತಿಥೇಯ ಲಂಕಾ ತಂಡಕ್ಕೂ ಅಷ್ಟು ಸುಲಭವಲ್ಲ. ಏಕೆಂದರೆ ಗಾಲೆ ಮೈದಾನದಲ್ಲಿ ನಾಲ್ಕನೇ ಇನ್ನಿಂಗ್ಸ್ ಬ್ಯಾಟಿಂಗ್‌ ಮಾಡುವುದು ಅಷ್ಟು ಸುಲಭದ ಮಾತಲ್ಲ. ಅಲ್ಲದೆ 371 ರನ್​ಗಳ ಈ ಬೃಹತ್ ಗುರಿಯನ್ನು ಶ್ರೀಲಂಕಾ ತಂಡ ಈ ಮೈದಾನದಲ್ಲಿ ಇದುವರೆಗೆ ಬೆನ್ನಟ್ಟಿದ ಇತಿಹಾಸವಿಲ್ಲ. ಹೀಗಾಗಿ ಭಾರತ ಮೇಲುಗೈ ಸಾಧಿಸಿದೆ ಎನ್ನಬಹುದು. ಆದರೆ ಎರಡನೇ ಇನ್ನಿಂಗ್ಸ್​ನಲ್ಲಿ ಭಾರತದ ಬ್ಯಾಟಿಂಗ್‌ ವಿಭಾಗದ ನಿರಸ ಪ್ರದರ್ಶನ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

ಭಾರತಕ್ಕೆ ಕಳಪೆ ಆರಂಭ

ಮೊದಲ ಇನ್ನಿಂಗ್ಸ್​ನಲ್ಲಿ ಅನಿರೀಕ್ಷಿತ ರನೌಟ್​ಗೆ ಬಲಿಯಾಗಿದ್ದ ಜೈಸ್ವಾಲ್ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಮೊದಲ ಇನ್ನಿಂಗ್ಸ್​ನಲ್ಲಿ 35 ರನ್​ಗಳ ಇನ್ನಿಂಗ್ಸ್ ಆಡಿದ್ದ ಜೈಸ್ವಾಲ್​ಗೆ ಎರಡನೇ ಇನ್ನಿಂಗ್ಸ್​ನಲ್ಲಿ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಟೀಂ ಇಂಡಿಯಾ ಸೊನ್ನೆಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಆ ಬಳಿಕ ಜೊತೆಯಾದ ರಾಹುಲ್ ಹಾಗೂ ಪಡಿಕ್ಕಲ್ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಇವರಿಬ್ಬರು ಎರಡನೇ ವಿಕೆಟ್​ಗೆ 65 ರನ್​ಗಳ ಜೊತೆಯಾಟ ನೀಡಿದರು.

ಗಿಲ್ ಸಪ್ಪೆ ಪ್ರದರ್ಶನ

ರಾಹುಲ್ 47 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 35 ರನ್ ಬಾರಿಸಿ ಔಟಾದರು. ನಂತರ ಬಂದ ನಾಯಕ ಶುಭ್​ಮನ್ ಗಿಲ್​ಗೂ ರನ್ ಬರವಿತ್ತು. ಏಕೆಂದರೆ ಮೊದಲ ಇನ್ನಿಂಗ್ಸ್​ನಲ್ಲೂ ಗಿಲ್ ಕೇವಲ 16 ರನ್​ಗಳಿಗೆ ಔಟಾಗಿದ್ದರು. ಆದರೆ ಎರಡನೇ ಇನ್ನಿಂಗ್ಸ್​ನಲ್ಲಿ ಗಿಲ್​ಗೆ ಒಂದಂಕಿ ಮೊತ್ತ ದಾಟುವುದು ಕಷ್ಟಕರವಾಯಿತು. ಎರಡನೇ ಇನ್ನಿಂಗ್ಸ್​ನಲ್ಲಿ ನಾಯಕ ಆಟ 8 ರನ್​ಗಳಿಗೆ ಅಂತ್ಯವಾಯಿತು. ಮೊದಲ ಇನ್ನಿಂಗ್ಸ್​ನಲ್ಲಿ 167 ರನ್​ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದ್ದ ಕನ್ನಡಿಗ ಪಡಿಕ್ಕಲ್ 2ನೇ ಇನ್ನಿಂಗ್ಸ್​ನಲ್ಲೂ ತಮ್ಮ ಅದ್ಭುತ ಫಾರ್ಮ್​ ಮುಂದುವರೆಸಿ 44 ರನ್​ಗಳ ಕಾಣಿಕೆ ನೀಡಿದರು.

ಕೆಳ ಮಧ್ಯಮ ಕ್ರಮಾಂಕದ ವೈಫಲ್ಯ

ಪಡಿಕ್ಕಲ್ ವಿಕೆಟ್ ಬಳಿಕ ಇನ್ನಿಂಗ್ಸ್ ಜವಾಬ್ದಾರಿ ಹೊತ್ತ ಪಂತ್ ತಂಡದ ಸ್ಕೋರ್ ಬೋರ್ಡ್​ ವೇಗ ಹೆಚ್ಚಿಸಿದರು. ಆದರೆ ಇನ್ನೊಂದು ತುದಿಯಿಂದ ಪಂತ್​ಗೆ ಸಾಥ್ ಸಿಗಲಿಲ್ಲ. ಮೊದಲ ಇನ್ನಿಂಗ್ಸ್​ನಲ್ಲಿ ಅರ್ಧಶತಕ ಬಾರಿಸಿದ್ದ ಜುರೇಲ್ 7 ರನ್​ಗಳಿಗೆ ಔಟಾದರೆ, ಆಲ್‌ರೌಂಡರ್ ಜಡೇಜಾ ಎರಡನೇ ಇನ್ನಿಂಗ್ಸ್​ನಲ್ಲಿ ವಿಫಲರಾಗಿ ಕೇವಲ 9 ರನ್​ಗೆ ಸುಸ್ತಾದರು. ಯುವ ಆಲ್‌ರೌಂಡರ್ ಮಾನವ್ ಸುತಾರ್ 7 ರನ್ ಬಾರಿಸಿದರೆ, ಬಾಲಂಗೋಚಿಗಳಾದ ಕುಲ್ದೀಪ್ (5), ಸಿರಾಜ್ (2), ಪ್ರಸಿದ್ಧ್ (2) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.

ಮೂವರಿಂದ 145 ರನ್

ಇದರರ್ಥ ರಾಹುಲ್, ಪಡಿಕ್ಕಲ್ ಹಾಗೂ ಪಂತ್ ಈ ಮೂವರು ಒಟ್ಟಾರೆಯಾಗಿ 145 ರನ್ ಕಲೆಹಾಕಿದರೆ, ತಂಡದ ಉಳಿದ 8 ಆಟಗಾರರಿಂದ ಮೂಡಿಬಂದಿದ್ದು ಕೇವಲ 48 ರನ್. ಇದೇ ಕಾರಣದಿಂದಾಗಿ ಟೀಂ ಇಂಡಿಯಾ 2ನೇ ಇನ್ನಿಂಗ್ಸ್​ನಲ್ಲಿ 200 ರನ್​ಗಳ ಗಡಿ ಮುಟ್ಟುವುದಕ್ಕೂ ಸಾಧ್ಯವಾಗಲಿಲ್ಲ. ಆದಾಗ್ಯೂ ಮೊದಲ ಇನ್ನಿಂಗ್ಸ್​ನಲ್ಲಿ ಮುನ್ನಡೆ ಪಡೆದಿರುವ ಟೀಂ ಇಂಡಿಯಾ, ಶ್ರೀಲಂಕಾಕ್ಕೆ ಸವಾಲಿನ ಗುರಿಯನ್ನೇ ನೀಡಿದೆ. ಇದೀಗ ಲಂಕಾ ಬೌಲರ್​ಗಳಂತೆ ಭಾರತದ ಬೌಲರ್​ಗಳು ಕೂಡ ಎದುರಾಳಿ ತಂಡವನ್ನು ಬಹುಬೇಗ ಕಟ್ಟಿಹಾಕುವ ಕೆಲಸ ಮಾಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:26 pm, Tue, 18 August 26

Follow Us