29 ವರ್ಷಗಳ ಬಳಿಕ 6 ಮಂದಿಯನ್ನು ಸೊನ್ನೆ ಸುತ್ತಿಸಿದ ಟೀಮ್ ಇಂಡಿಯಾ
India vs England 2nd Test: ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ 587 ರನ್ಗಳಿಸಿದರೆ, ಇಂಗ್ಲೆಂಡ್ ಮೊದಲ ಇನಿಂಗ್ಸ್ನಲ್ಲಿ 407 ರನ್ಗಳಿಸಿ ಆಲೌಟ್ ಆಗಿದೆ. ಟೀಮ್ ಇಂಡಿಯಾ ಪರ ಮೊಹಮ್ಮದ್ ಸಿರಾಜ್ 6 ವಿಕೆಟ್ ಪಡೆದರೆ, ಆಕಾಶ್ ದೀಪ್ 4 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ಬರೋಬ್ಬರಿ 29 ವರ್ಷಗಳ ಟೀಮ್ ಇಂಡಿಯಾ ಬೌಲರ್ಗಳು ಟೆಸ್ಟ್ ಕ್ರಿಕೆಟ್ನಲ್ಲಿ ಪರಾಕ್ರಮ ಮರೆದಿದ್ದಾರೆ. ಅದು ಕೂಡ ಆತಿಥೇಯ ಇಂಗ್ಲೆಂಡ್ನ 6 ಬ್ಯಾಟರ್ಗಳನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ. ಹೌದು, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಭಾರತೀಯ ಬೌಲರ್ಗಳು ಇನಿಂಗ್ಸ್ವೊಂದರಲ್ಲಿ ಆರು ಮಂದಿಯನ್ನು ಸೊನ್ನೆಗೆ ಔಟ್ ಮಾಡಿರುವುದು ಕೇವಲ ಎರಡು ಬಾರಿ ಮಾತ್ರ.
1996 ರಲ್ಲಿ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರ್ಗಳು 6 ಮಂದಿಯನ್ನು ಶೂನ್ಯಕ್ಕೆ ಔಟ್ ಮಾಡಿದ್ದರು. ಅಹಮದಾಬಾದ್ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ 233 ರನ್ ಕಲೆಹಾಕಿದರೆ, ಸೌತ್ ಆಫ್ರಿಕಾ 244 ರನ್ ಗಳಿಸಿತು.
11 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ತಂಡವು ಕೇವಲ 190 ರನ್ಗಳಿಗೆ ಆಲೌಟ್ ಆಯಿತು. ಅದರಂತೆ ದ್ವಿತೀಯ ಇನಿಂಗ್ಸ್ನಲ್ಲಿ 180 ರನ್ಗಳ ಸುಲಭ ಗುರಿ ಪಡೆದ ಸೌತ್ ಆಫ್ರಿಕಾ ತಂಡವನ್ನು ಟೀಮ್ ಇಂಡಿಯಾ ಬೌಲರ್ಗಳು ಅಂದು ಕೇವಲ 105 ರನ್ಗಳಿಗೆ ಆಲೌಟ್ ಮಾಡಿದ್ದರು.
ಈ ವೇಳೆ ಸೌತ್ ಆಫ್ರಿಕಾದ ದಾಂಡಿಗರಾದ ಆ್ಯಂಡ್ರೊ ಹಡ್ಸನ್ (0), ಡೇರಿಲ್ ಕುಲ್ಲಿನನ್ (0), ಜಾಂಟಿ ರೋಡ್ಸ್ (0), ಪ್ಯಾಟ್ ಸಿಮೊಕ್ಸ್ (0), ಫ್ಯಾನಿ ಡಿವಿಲಿಯರ್ಸ್ (0) ಹಾಗೂ ಪೌಲ್ ಆ್ಯಡಮ್ಸ್ (0) ಶೂನ್ಯಕ್ಕೆ ವಿಕೆಟ್ ಒಪಿಸಿದ್ದರು.
ಕನ್ನಡಿಗರ ಕಮಾಲ್:
ಟೀಮ್ ಇಂಡಿಯಾದ ಈ ಐತಿಹಾಸಿಕ ಸಾಧನೆ ಹಿಂದಿರುವುದು ಕನ್ನಡಿಗರು ಎಂಬುದು ವಿಶೇಷ. ಅಂದರೆ ಅಂದು ಟೀಮ್ ಇಂಡಿಯಾ ಪರ ಬಿಗು ದಾಳಿ ಸಂಘಟಿಸಿದ ಜಾವಗಲ್ ಶ್ರೀನಾಥ್ 4 ಮಂದಿಯನ್ನು ಶೂನ್ಯಕ್ಕೆ ಔಟ್ ಮಾಡಿದರೆ, ಅನಿಲ್ ಕುಂಬ್ಳೆ ಇಬ್ಬರನ್ನು ಸೊನ್ನೆ ಸುತ್ತಿಸಿದ್ದರು. ಈ ಮೂಲಕ ಟೀಮ್ ಇಂಡಿಯಾ ಮೊದಲ ಬಾರಿಗೆ ಟೆಸ್ಟ್ ಇನಿಂಗ್ಸ್ವೊಂದರಲ್ಲಿ ಆರು ಮಂದಿಯನ್ನು ಶೂನ್ಯಕ್ಕೆ ಔಟ್ ಮಾಡಿದ ಸಾಧನೆ ಮಾಡಿದ್ದರು.
29 ವರ್ಷಗಳ ಹೊಸ ದಾಖಲೆ:
ಬರೋಬ್ಬರಿ 29 ವರ್ಷಗಳ ಬಳಿಕ ಭಾರತೀಯ ಬೌಲರ್ಗಳು ಮತ್ತೊಮ್ಮೆ ಇನಿಂಗ್ಸ್ವೊಂದರಲ್ಲಿ ಆರು ಮಂದಿಯನ್ನು ಸೊನ್ನೆಗೆ ಔಟ್ ಮಾಡಿದ್ದಾರೆ. ಈ ಬಾರಿ ಟೀಮ್ ಇಂಡಿಯಾ ಮುಂದೆ ಸೊನ್ನೆ ಸುತ್ತಿರುವುದು ಇಂಗ್ಲೆಂಡ್ನ ಆರಂಭಿಕ ದಾಂಡಿಗ ಬೆನ್ ಡಕೆಟ್ (0), ಸ್ಫೋಟಕ ಬ್ಯಾಟರ್ ಒಲೀ ಪೋಪ್ (0), ನಾಯಕ ಬೆನ್ ಸ್ಟೋಕ್ಸ್ (0), ಆಲ್ರೌಂಡರ್ ಬ್ರೈಡನ್ ಕಾರ್ಸೆ (0), ಜೋಶ್ ಟಂಗ್ (0) ಹಾಗೂ ಶೊಯೆಬ್ ಬಶೀರ್ (0).
ಈ ಆರು ಮಂದಿಯಲ್ಲಿ ನಾಲ್ವರನ್ನು ಮೊಹಮ್ಮದ್ ಸಿರಾಜ್ ಔಟ್ ಮಾಡಿದರೆ, ಮತ್ತಿಬ್ಬರನ್ನು ಆಕಾಶ್ ದೀಪ್ ಶೂನ್ಯದೊಂದಿಗೆ ಪೆವಿಲಿಯನ್ಗೆ ಕಳುಹಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ವೇಗಿಗಳು ಇದೇ ಮೊದಲ ಬಾರಿಗೆ ಟೆಸ್ಟ್ ಇನಿಂಗ್ಸ್ವೊಂದರಲ್ಲಿ ಆರು ಮಂದಿಯನ್ನು ಶೂನ್ಯಕ್ಕೆ ಔಟ್ ಮಾಡಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಇದನ್ನೂ ಓದಿ: ಯಶಸ್ವಿ ಜೈಸ್ವಾಲ್ ಆರ್ಭಟಕ್ಕೆ ದ್ರಾವಿಡ್, ಸೆಹ್ವಾಗ್ ದಾಖಲೆಗಳೇ ಧೂಳೀಪಟ
ಅಂದರೆ 1996 ರಲ್ಲಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಹಾಗೂ ಸ್ಪಿನ್ನರ್ ಅನಿಲ್ ಕುಂಬ್ಳೆ ಜೊತೆಗೂಡಿ ಈ ಸಾಧನೆ ಮಾಡಿದರೆ, ಈ ಬಾರಿ ಟೀಮ್ ಇಂಡಿಯಾ ವೇಗಿಗಳಾದ ಮೊಹಮ್ಮದ್ ಸಿರಾಜ್ ಹಾಗೂ ಆಕಾಶ್ ದೀಪ್ ಜೊತೆಗೂಡಿ 6 ಮಂದಿಯನ್ನು ಸೊನ್ನೆ ಸುತ್ತಿಸಿದ್ದಾರೆ. ಈ ಮೂಲಕ ಭಾರತೀಯ ವೇಗಿಗಳಿಬ್ಬರು ಜೊತೆಗೂಡಿ ಐತಿಹಾಸಿಕ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
