6,6,6,6,6: ಒಂದೇ ಓವರ್ನಲ್ಲಿ 34 ರನ್ ಚಚ್ಚಿದ ವಿಮಲ್ ಕುಮಾರ್
TNPL 2025: ತಮಿಳುನಾಡು ಪ್ರೀಮಿಯರ್ ಲೀಗ್ 2025 ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ದ್ವಿತೀಯ ಕ್ವಾಲಿಫೈಯರ್ನಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ದಿಂಡಿಗಲ್ ಡ್ರಾಗನ್ಸ್ ತಂಡವು ಫೈನಲ್ಗೆ ಪ್ರವೇಶಿಸಿದೆ. ಅದರಂತೆ ಭಾನುವಾರ ನಡೆಯುವ ಫೈನಲ್ನಲ್ಲಿ ತಿರುಪ್ಪೂರ್ ತಮಿಳನ್ಸ್ ಹಾಗೂ ದಿಂಡಿಗಲ್ ಡ್ರಾಗನ್ಸ್ ತಂಡಗಳು ಮುಖಾಮುಖಿಯಾಗಲಿದೆ.

ತಮಿಳುನಾಡು ಪ್ರೀಮಿಯರ್ ಲೀಗ್ನ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ದಿಂಡಿಗಲ್ ಡ್ರಾಗನ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ದಿಂಡಿಗಲ್ನ ಎನ್ಪಿಆರ್ ಕಾಲೇಜು ಮೈದಾನದಲ್ಲಿ ನಡೆದ ಚೆಪಾಕ್ ಸೂಪರ್ ಗಿಲ್ಲೀಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ದಿಂಡಿಗಲ್ ಡ್ರಾಗನ್ಸ್ ತಂಡದ ನಾಯಕ ರವಿಚಂದ್ರನ್ ಅಶ್ವಿನ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಚೆಪಾಕ್ ಸೂಪರ್ ಗಿಲ್ಲೀಸ್ ಪರ ನಾಯಕ ಬಾಬಾ ಅಪರಜಿತ್ 44 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 67 ರನ್ ಬಾರಿಸಿದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಇನಿಂಗ್ಸ್ ಆಡಿದ ವಿಕೆಟ್ ಕೀಪರ್ ಬ್ಯಾಟರ್ ಎನ್ ಜಗದೀಸನ್ 6 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ ಕೇವಲ 41 ಎಸೆತಗಳಲ್ಲಿ 81 ರನ್ ಚಚ್ಚಿದರು. ಈ ಮೂಲಕ ಚೆಪಾಕ್ ಸೂಪರ್ ಗಿಲ್ಲೀಸ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 178 ರನ್ ಕಲೆಹಾಕಿತು.
179 ರನ್ಗಳ ಟಾರ್ಗೆಟ್:
ಫೈನಲ್ಗೇರಲು 179 ರನ್ಗಳ ಗುರಿ ಪಡೆದ ದಿಂಡಿಗಲ್ ಡ್ರಾಗನ್ಸ್ ತಂಡವು ಪವರ್ಪ್ಲೇನಲ್ಲಿ 51 ರನ್ ಕಲೆಹಾಕಿ ಉತ್ತಮ ಆರಂಭ ಪಡೆಯಿತು. ಆದರೆ ಆ ಬಳಿಕ ರನ್ ಗತಿಯು ನಿಧಾನ ಗತಿಯತ್ತ ಸಾಗಿತು. ಈ ಹಂತದಲ್ಲಿ ಕಣಕ್ಕಿಳಿದ ಬಾಬಾ ಇಂದ್ರಜಿತ್ 31 ಎಸೆತಗಳಲ್ಲಿ 41 ರನ್ಗಳಿಸಲಷ್ಟೇ ಶಕ್ತರಾದರು. ಪರಿಣಾಮ ಮೊದಲ 10 ಓವರ್ಗಳಲ್ಲಿ ದಿಂಡಿಗಲ್ ಡ್ರಾಗನ್ಸ್ ತಂಡ ಕಲೆಹಾಕಿದ್ದು ಕೇವಲ 78 ರನ್ಗಳು ಮಾತ್ರ.
ಕೊನೆಯ 10 ಓವರ್ಗಳಲ್ಲಿ 101 ರನ್ಗಳ ಗುರಿ ಪಡೆದ ದಿಂಡಿಗಲ್ ಡ್ರಾಗನ್ಸ್ ಪರ ವಿಮಲ್ ಕುಮಾರ್ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದರು. ಕ್ರೀಸ್ಗೆ ಆಗಮಿಸುತ್ತಿದ್ದಂತೆ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ವಿಮಲ್ ರನ್ ಗತಿ ಹೆಚ್ಚಿಸುವ ಕಾಯಕಕ್ಕೆ ಕೈ ಹಾಕಿದರು. ಪರಿಣಾಮ 15 ಓವರ್ ವೇಳೆಗೆ ತಂಡದ ಮೊತ್ತ 123 ಕ್ಕೆ ಬಂದು ನಿಂತಿತು.
ನಿರ್ಣಾಯಕವಾಗಿದ್ದ ಕೊನೆಯ 5 ಓವರ್ಗಳ ವೇಳೆ ವಿಮಲ್ ಕುಮಾರ್ ಅವರ ಭರ್ಜರಿ ಬ್ಯಾಟಿಂಗ್ ಮುಂದುವರೆಯಿತು. ಅದರಲ್ಲೂ ರೋಹಿತ್ ಸುತಾರ್ ಎಸೆದ 17ನೇ ಓವರ್ನಲ್ಲಿ ಫೋರ್ ಹಾಗೂ 5 ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ವಿಮಲ್ ಬರೋಬ್ಬರಿ 34 ರನ್ ಚಚ್ಚಿದರು. ಪರಿಣಾಮ ದಿಂಡಿಗಲ್ ಡ್ರಾಗನ್ಸ್ ತಂಡವು 18.4 ಓವರ್ಗಳಲ್ಲಿ 182 ರನ್ಗಳಿಸುವ ಮೂಲಕ 4 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು.
ಕೇವಲ 30 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 65 ರನ್ ಬಾರಿಸುವ ಮೂಲಕ ವಿಮಲ್ ಕುಮಾರ್ ಗೆಲುವಿನ ರೂವಾರಿ ಎನಿಸಿಕೊಂಡರು. ಈ ಗೆಲುವಿನೊಂದಿಗೆ ದಿಂಡಿಗಲ್ ಡ್ರಾಗನ್ಸ್ ತಂಡವು ತಮಿಳುನಾಡು ಪ್ರೀಮಿಯರ್ ಲೀಗ್ 2025 ರಲ್ಲಿ ಫೈನಲ್ಗೆ ಎಂಟ್ರಿ ಕೊಟ್ಟಿದೆ.
ವಿಮಲ್ ಕುಮಾರ್ ಬ್ಯಾಟಿಂಗ್:
The over that changed the game 💥
Dindigul needed 52 off 4, then Khumar unleashed mayhem as he scored 34 runs in the 17th over to power them into the #TNPL2025 Final 🏆#TNPLOnFanCode pic.twitter.com/9mbp5uKD9t
— FanCode (@FanCode) July 4, 2025
ದಿಂಡಿಗಲ್ ಡ್ರಾಗನ್ಸ್: ರವಿಚಂದ್ರನ್ ಅಶ್ವಿನ್ (ನಾಯಕ) , ಬಾಬಾ ಇಂದ್ರಜಿತ್ ( ವಿಕೆಟ್ ಕೀಪರ್ ) , ವಿಮಲ್ ಕುಮಾರ್ , ದಿನೇಶ್ ಎಚ್ , ಹುನ್ನಿ ಸೈನಿ , ಮಾನ್ ಬಾಫ್ನಾ , ಕಾರ್ತಿಕ್ ಸರನ್ , ಭುವನೇಶ್ವರ್ ವೆಂಕಟೇಶ್ , ವರುಣ್ ಚಕ್ರವರ್ತಿ , ಶಶಿಧರನ್ ರವಿಚಂದ್ರನ್ , ಗಣೇಶನ್ ಪೆರಿಯಸ್ವಾಮಿ.
ಇದನ್ನೂ ಓದಿ: ಯಶಸ್ವಿ ಜೈಸ್ವಾಲ್ ಆರ್ಭಟಕ್ಕೆ ದ್ರಾವಿಡ್, ಸೆಹ್ವಾಗ್ ದಾಖಲೆಗಳೇ ಧೂಳೀಪಟ
ಚೆಪಾಕ್ ಸೂಪರ್ ಗಿಲ್ಲೀಸ್: ಕೆ. ಆಶಿಕ್ , ಆರ್ ಎಸ್ ಮೋಕಿತ್ ಹರಿಹರನ್ , ಬಾಬಾ ಅಪರಜಿತ್ (ನಾಯಕ) , ವಿಜಯ್ ಶಂಕರ್ , ಎನ್ ಜಗದೀಸನ್ (ವಿಕೆಟ್ ಕೀಪರ್ ) , ಸ್ವಪ್ನಿಲ್ ಸಿಂಗ್ , ಎಸ್ ದಿನೇಶ್ ರಾಜ್ , ಅಭಿಷೇಕ್ ತನ್ವರ್ , ಲೋಕೇಶ್ ರಾಜ್ , ಎಂ ಸಿಲಂಬರಸನ್ , ಜೆ ಪ್ರೇಮ್ ಕುಮಾರ್.
Published On - 11:57 am, Sat, 5 July 25
