ಯುಎಇನಲ್ಲಿ ನಡೆಯಲಿರುವ ಏಷ್ಯಾಕಪ್ಗಾಗಿ (Asia Cup 2022) ಭಾರತ ತಂಡವನ್ನು ಪ್ರಕಟಿಸಲಾಗಿದೆ. ಆಗಸ್ಟ್ 27 ರಿಂದ ಶುರುವಾಗಲಿರುವ ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ (Team India) ತನ್ನ ಮೊದಲ ಪಂದ್ಯವನ್ನು ಆಗಸ್ಟ್ 28 ರಂದು ಆಡಲಿದೆ. ಭಾರತ ತಂಡದ ಮೊದಲ ಎದುರಾಳಿ ಪಾಕಿಸ್ತಾನ್ ಎಂಬುದು ಇಲ್ಲಿ ವಿಶೇಷ. ಹೀಗಾಗಿಯೇ ಕ್ರಿಕೆಟ್ ಪ್ರೇಮಿಗಳು ಈ ರೋಚಕ ಕದನವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ಇತ್ತ ಪಾಕ್ ವಿರುದ್ದ ಟಿ20 ವಿಶ್ವಕಪ್ 2021 ರ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿರುವ ಟೀಮ್ ಇಂಡಿಯಾ ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸಲಿದೆ. ಏಕೆಂದರೆ ತಂಡದಲ್ಲಿ ಆಲ್ರೌಂಡರ್ಗಳ ದಂಡೇ ಇದ್ದು, ಹೀಗಾಗಿ ಸಮತೋಲನದಿಂದ ಕೂಡಿರುವ ಪ್ಲೇಯಿಂಗ್ ಇಲೆವೆನ್ ಅನ್ನು ರೂಪಿಸಿಕೊಳ್ಳಬಹುದು.
ಏಕೆಂದರೆ ಏಷ್ಯಾಕಪ್ಗಾಗಿ ಆಯ್ಕೆ ಮಾಡಲಾದ ಭಾರತ ತಂಡದಲ್ಲಿ ನಾಲ್ವರು ಬ್ಯಾಟ್ಸ್ಮನ್ಗಳಿದ್ದಾರೆ. ಅದರಂತೆ ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಟೀಮ್ ಇಂಡಿಯಾದ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿದ್ದರೂ ಅವರನ್ನು ಕೇವಲ ಬ್ಯಾಟ್ಸ್ಮನ್ ಕೋಟಾದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಆಯ್ಕೆ ಸಮಿತಿ ತಿಳಿಸಿದೆ. ಹೀಗಾಗಿಯೇ ಇಬ್ಬರು ವಿಕೆಟ್ ಕೀಪರ್ಗಳಿಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ. ಅದರಂತೆ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ಗಳಾಗಿ ರಿಷಭ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ಕಾಣಿಸಿಕೊಂಡಿದ್ದಾರೆ.
ಹಾಗೆಯೇ ಆಲ್ರೌಂಡರ್ಗಳಾಗಿ ತಂಡದಲ್ಲಿ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ದೀಪಕ್ ಹೂಡಾ ಸ್ಥಾನ ಪಡೆದಿದ್ದಾರೆ. ಇಲ್ಲಿ ಮೂವರು ಸ್ಪಿನ್ ಆಲ್ರೌಂಡರ್ಗಳಿದ್ದರೆ, ಏಕೈಕ ವೇಗದ ಬೌಲರ್ ಆಲ್ರೌಂಡರ್ ಆಗಿ ಹಾರ್ದಿಕ್ ಪಾಂಡ್ಯ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ಗಳಾಗಿ ಯುಜುವೇಂದ್ರ ಚಹಲ್ ಹಾಗೂ ರವಿ ಬಿಷ್ಣೋಯ್ಗೆ ಚಾನ್ಸ್ ನೀಡಲಾಗಿದೆ. ಅತ್ತ ಮೂವರು ಸ್ಪಿನ್ನರ್ ಆಲ್ರೌಂಡರ್ಗಳಿರುವ ಕಾರಣ ಇಬ್ಬರು ಸ್ಪಿನ್ನರ್ಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಹಾಗೆಯೇ ತಂಡದ ಬೌಲಿಂಗ್ ವಿಭಾಗವನ್ನು ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಮುನ್ನಡೆಸಲಿದ್ದಾರೆ. ಇವರೊಂದಿಗೆ ಇನ್ನಿತರ ವೇಗಿಗಳಾಗಿ ಅವೇಶ್ ಖಾನ್ ಹಾಗೂ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ.
ಅಂದರೆ ಇಲ್ಲಿ 15 ಸದಸ್ಯರ ಬಳಗವನ್ನು ಆಯ್ಕೆ ಮಾಡಿಕೊಂಡಿರುವ ಬಿಸಿಸಿಐ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಅನ್ನು ರೂಪಿಸಲು ಹೆಚ್ಚಿನ ಆಲ್ರೌಂಡರ್ಗಳಿಗೆ ಮಣೆಹಾಕಿದೆ. ಏಕೆಂದರೆ ಪ್ಲೇಯಿಂಗ್ ಇಲೆವೆನ್ನಲ್ಲಿ ಆರಂಭಿಕ ಆಟಗಾರರಾಗಿ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಕಾಣಿಸಿಕೊಳ್ಳುವುದು ಖಚಿತ. ಇನ್ನು ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಆಡಿದರೆ, ನಾಲ್ಕನೇ ಕ್ರಮಾಂಕವು ಸೂರ್ಯಕುಮಾರ್ ಯಾದವ್ ಅವರಿಗೆ ಫಿಕ್ಸ್ ಎನ್ನಬಹುದು.
ಇದಾದ ಬಳಿಕ ಆಲ್ರೌಂಡರ್ಗಳಾಗಿ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಕಣಕ್ಕಿಳಿಯಬಹುದು. ಹಾಗೆಯೇ ವಿಕೆಟ್ ಕೀಪರ್ ಕೋಟಾದಲ್ಲಿ ರಿಷಭ್ ಪಂತ್ ಅವಕಾಶ ಪಡೆದರೆ, ಫಿನಿಶರ್ ಆಗಿ ದಿನೇಶ್ ಕಾರ್ತಿಕ್ ಕಾಣಿಸಿಕೊಳ್ಳಬಹುದು. ಈ ಮೂಲಕ 8ನೇ ಕ್ರಮಾಂಕದವರೆಗೆ ಬಲಿಷ್ಠ ಬ್ಯಾಟಿಂಗ್ ಲೈನಪ್ ಹೊಂದುವಂತಹ ತಂಡವನ್ನು ರೂಪಿಸಿಕೊಳ್ಳಬಹುದಾಗಿದೆ. ಇದೇ ಕಾರಣದಿಂದಾಗಿ ಈ ಹಿಂದಿಗಿಂತಲೂ ಈ ಬಾರಿಯ ಟೀಮ್ ಇಂಡಿಯಾ ಮತ್ತಷ್ಟು ಬಲಿಷ್ಠವಾಗಿದೆ ಎನ್ನಬಹುದು.
ಏಷ್ಯಾಕಪ್ಗಾಗಿ ಟೀಮ್ ಇಂಡಿಯಾ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.
ಮೀಸಲು ಆಟಗಾರರು: ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್ ಹಾಗೂ ದೀಪಕ್ ಚಹರ್.