Viral Video: ಕೇವಲ 6 ಸೆಕೆಂಡ್ನಲ್ಲಿ ರಣರೋಚಕ ಕ್ಯಾಚ್: ವಿಡಿಯೋ ವೈರಲ್
The Hundred: ಈ ಮ್ಯಾಚ್ ವಿನ್ನಿಂಗ್ ಕ್ಯಾಚ್ನ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಾಸನ್ ಕ್ರೇನ್ ಅವರ ಅತ್ಯಾದ್ಭುತ ಫೀಲ್ಡಿಂಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಲೀಗ್ (The Hundred) ಅದ್ಭುತ ಕ್ಯಾಚ್ವೊಂದಕ್ಕೆ ಸಾಕ್ಷಿಯಾಗಿದೆ. ಸೋಮವಾರ ನಡೆದ 6ನೇ ಪಂದ್ಯದಲ್ಲಿ ಲಂಡನ್ ಸ್ಪಿರಿಟ್ ಹಾಗೂ ಮ್ಯಾಂಚೆಸ್ಟರ್ ಒರಿಜಿನಲ್ಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಂಡನ್ ಸ್ಪಿರಿಟ್ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕ ಆಟಗಾರ ಜಾನ್ ಕ್ರಾವ್ಲಿ (41) ಉತ್ತಮ ಆರಂಭ ಒದಗಿಸಿದರೆ, ಅಂತಿಮ ಹಂತದಲ್ಲಿ ಕೀರನ್ ಪೊಲಾರ್ಡ್ 11 ಎಸೆತಗಳಲ್ಲಿ 34 ರನ್ ಬಾರಿಸಿ ಅಬ್ಬರಿಸಿದ್ದರು. ಪರಿಣಾಮ ಲಂಡನ್ ಸ್ಪಿರಿಟ್ ತಂಡವು 100 ಎಸೆತಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್ ಕಲೆಹಾಕಿತು.
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಮ್ಯಾಂಚೆಸ್ಟರ್ ಒರಿಜಿನಲ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ಲಂಡನ್ ಸ್ಪಿರಿಟ್ ಬೌಲರ್ಗಳು ಎದುರಾಳಿ ಬ್ಯಾಟ್ಸ್ಮನ್ಗಳನ್ನು ಕಾಡಿದರು. ಅಷ್ಟೇ ಅಲ್ಲದೆ ಕೇವಲ 67 ರನ್ಗಳಿಸುವಷ್ಟರಲ್ಲಿ ಪ್ರಮುಖ 7 ವಿಕೆಟ್ಗಳನ್ನು ಉರುಳಿಸಿದ್ದರು.
ಅದರಲ್ಲೂ ಡೇಂಜರಸ್ ಬಾಟ್ಸ್ಮನ್ ಜೋಸ್ ಬಟ್ಲರ್ ಥಾಂಪ್ಸನ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿದ್ದರು. ಅಲ್ಲದೆ ಚೆಂಡು ಬ್ಯಾಟ್ ತಗುಲಿ ಆಕಾಶದೆತ್ತರಕ್ಕೆ ಚಿಮ್ಮಿತ್ತು. ಅತ್ತ ಬೌಲರ್ ಕ್ಯಾಚ್ ಎಂದು ಕೂಗುತ್ತಿದ್ದರೆ, ಇತ್ತ ಕಡೆಯಿಂದ ಫೀಲ್ಡರ್ ಮಾಸನ್ ಕ್ರೇನ್ ಚೆಂಡನ್ನು ಹಿಡಿಯಲು ಹಿಮ್ಮುಖವಾಗಿ ಓಡಿದರು.
ಅತೀ ವೇಗದಲ್ಲಿ ಆಕಾಶದತ್ತ ಚಿಮ್ಮಿದ ಚೆಂಡು ಅಷ್ಟೇ ವೇಗದಲ್ಲಿ ಹಿಂತಿರುಗಿತ್ತು. ಅಂದರೆ ಕೇವಲ 6 ಸೆಕೆಂಡ್ಗಳ ಅವಧಿಯೊಳಗೆ ಮಾಸನ್ ಕ್ರೇನ್ ಅದ್ಭುತ ಡೈವಿಂಗ್ ಕ್ಯಾಚ್ ಮೂಲಕ ಚೆಂಡನ್ನು ಹಿಡಿದರು. ಈ ಅದ್ಭುತ ಕ್ಯಾಚ್ ನೋಡಿದ ಪ್ರತಿಯೊಬ್ಬರಿಂದಲೂ ಮೂಡಿಬಂದಿದ್ದು ಒಂದೇ ಉದ್ಗಾರ…ವಾಟ್ ಎ ಕ್ಯಾಚ್.
View this post on Instagram
ಈ ಮ್ಯಾಚ್ ವಿನ್ನಿಂಗ್ ಕ್ಯಾಚ್ನ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಾಸನ್ ಕ್ರೇನ್ ಅವರ ಅತ್ಯಾದ್ಭುತ ಫೀಲ್ಡಿಂಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಇನ್ನು ಈ ಪಂದ್ಯದಲ್ಲಿ ಲಂಡನ್ ಸ್ಪಿರಿಟ್ ತಂಡ ನೀಡಿದ 161 ರನ್ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಮ್ಯಾಂಚೆಸ್ಟರ್ ಒರಿಜಿನಲ್ಸ್ ತಂಡವು 108 ರನ್ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಮಾಸನ್ ಕ್ರೇನ್ ಅವರ ಲಂಡನ್ ಸ್ಪಿರಿಟ್ ತಂಡವು 52 ರನ್ಗಳ ಭರ್ಜರಿ ಜಯ ಸಾಧಿಸಿತು.