
ಪಹಲ್ಗಾಮ್ ಭಯೋತ್ಪಾದಕ ದಾಳಿಯ (Pahalgam terror attack) ನಂತರ ಭಾರತ ಸರ್ಕಾರವು, ಪಾಕಿಸ್ತಾನದ ವಿರುದ್ಧ ಉಗ್ರ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆ ಪ್ರಕಾರ ಪಾಕಿಸ್ತಾನದೊಂದಿಗಿನ ಎಲ್ಲಾ ಸಂಬಂಧಗಳನ್ನು ಮುರಿದುಕೊಂಡಿರುವ ಭಾರತ, ಇದು ಮಾತ್ರವಲ್ಲದೆ ಡಿಜಿಟಲ್ ದಾಳಿಯನ್ನು ಮಾಡಿತ್ತು. ಅಂದರೆ ಪಾಕಿಸ್ತಾನದ ಪ್ರಮುಖ ವ್ಯಕ್ತಿಗಳ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರ ಸೋಶಿಯಲ್ ಮೀಡಿಯಾ ಖಾತೆಯನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿತ್ತು. ಹಾಗೆಯೇ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪಾಕಿಸ್ತಾನ ಸೂಪರ್ ಲೀಗ್ (PSL) ಪ್ರಸಾರವನ್ನು ಭಾರತದಲ್ಲಿ ನಿಷೇಧಿಸಲಾಗಿತ್ತು. ಇದೀಗ ಪಾಕಿಸ್ತಾನ ಕೂಡ ಭಾರತದ ವಿರುದ್ಧ ಡಿಜಿಟಲ್ ದಾಳಿ ನಡೆಸಿದ್ದು, ಐಪಿಎಲ್ (IPL) ಪಂದ್ಯಾವಳಿಯನ್ನು ಪಾಕಿಸ್ತಾನದಲ್ಲಿ ಪ್ರಸಾರ ಮಾಡುವುದನ್ನು ನಿಷೇಧಿಸಿದ ಎಂದು ವರದಿಯಾಗಿದೆ.
ಮೇಲೆ ಹೇಳಿದಂತೆ ಪಾಕಿಸ್ತಾನ ಸೂಪರ್ ಲೀಗ್ ಪ್ರಸಾರವನ್ನು ಭಾರತ ನಿರ್ಬಂಧಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ, ಪಾಕ್ ಸೂಪರ್ ಲೀಗ್ ಪ್ರಸಾರವನ್ನು ನಿಷೇಧಿಸಿತ್ತು. ಹಾಗಾಗಿ ಏಪ್ರಿಲ್ 24 ರಂದು, ಪಿಎಸ್‌ಎಲ್ ಪಂದ್ಯಗಳ ಅಧಿಕೃತ ಸ್ಟ್ರೀಮಿಂಗ್ ಹಕ್ಕುಗಳನ್ನು ಹೊಂದಿದ್ದ ಭಾರತೀಯ ಸ್ಟ್ರೀಮಿಂಗ್ ವೇದಿಕೆಯಾದ ಫ್ಯಾನ್‌ಕೋಡ್, ತಕ್ಷಣದಿಂದ ಜಾರಿಗೆ ಬರುವಂತೆ ಪಿಎಸ್‌ಎಲ್ ಪ್ರಸಾರವನ್ನು ನಿಲ್ಲಿಸುವುದಾಗಿ ಘೋಷಿಸಿತ್ತು.
ಇದೀಗ ಪಾಕಿಸ್ತಾನದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ ಅಧಿಕೃತ ಸ್ಟ್ರೀಮಿಂಗ್ ಹಕ್ಕುಗಳನ್ನು ಹೊಂದಿದ್ದ ಟ್ಯಾಪ್‌ಮಾಡ್, ಮೇ 3 ರಂದು ಐಪಿಎಲ್ ಪ್ರಸಾರವನ್ನು ನಿಲ್ಲಿಸುವುದಾಗಿ ಘೋಷಿಸಿದೆ. ಪಾಕಿಸ್ತಾನದ ಈ ನಿರ್ಧಾರದಿಂದ ಐಪಿಎಲ್ಗೆ ಯಾವುದೇ ನಷ್ಟವಿಲ್ಲದಿದ್ದರೂ, ಪಿಎಸ್‌ಎಲ್ ನಿಷೇಧದಿಂದ ಪಾಕಿಸ್ತಾನಕ್ಕೆ ಭಾರಿ ನಷ್ಟವುಂಟಾಗಲಿದೆ. ಏಕೆಂದರೆ, ಪಿಎಸ್‌ಎಲ್ ಪಂದ್ಯಗಳನ್ನು ವೀಕ್ಷಿಸಲು ಪ್ರೇಕ್ಷಕರೇ ಮೈದಾನಕ್ಕೆ ಬರುತ್ತಿಲ್ಲ. ಹೀಗಾಗಿ ಡಿಜಿಟಲ್ ಪ್ರಸಾರದಿಂದ ಕೊಂಚ ಆದಾಯ ಗಳಿಸುತ್ತಿದ್ದ ಆಯೋಜಕರಿಗೆ ಆಘಾತ ಎದುರಾಗಿದೆ.
RCB vs CSK Highlights, IPL 2025: ರಣರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಆರ್ಸಿಬಿ
ಪ್ರಸ್ತುತ ಎರಡೂ ದೇಶಗಳಿಂದ ವಿಧಿಸಲಾಗಿರುವ ನಿಷೇಧದ ಶಿಕ್ಷೆ ಎಷ್ಟು ಕಾಲ ಉಳಿಯುತ್ತವೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಐಸಿಸಿ ಮತ್ತು ಎಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನದ ವಿರುದ್ಧ ಆಡುವುದನ್ನು ನಿಲ್ಲಿಸುವ ಮೂಲಕ ಬಿಸಿಸಿಐ, ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಸಂಪೂರ್ಣವಾಗಿ ಕೊನೆಗೊಳಿಸಬಹುದು ಎಂಬ ವರದಿಳಗಳಿವೆ. ಅಲ್ಲದೆ, ಈ ವರ್ಷ ಭಾರತದಲ್ಲಿ ನಡೆಯಲಿರುವ ಏಷ್ಯಾಕಪ್ ಕೂಡ ಇದರಿಂದಾಗಿ ರದ್ದಾಗುವ ಸಾಧ್ಯತೆ ಇದೆ ಎಂತಲೂ ಹೇಳಲಾಗುತ್ತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:06 pm, Sun, 4 May 25