
ದುಬೈನಲ್ಲಿ ನಡೆದ 19 ವರ್ಷದೊಳಗಿನವರ ಏಷ್ಯಾಕಪ್ (U19 Asia Cup) ಪಂದ್ಯಾವಳಿಯಲ್ಲಿ ಬದ್ಧವೈರಿ ಪಾಕಿಸ್ತಾನ ತಂಡವನ್ನು 90 ರನ್ಗಳಿಗೆ ಮಣಿಸಿದ ಭಾರತ ಯುವ ಪಡೆ (India vs Pakistan) ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 240 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ 150 ರನ್ಗಳಿಗೆ ಆಲೌಟ್ ಆಯಿತು. ಇದು ಪಂದ್ಯದ ಸಾರಾಂಶವಾದರೆ, ಇನ್ನು ಇದೇ ಪಂದ್ಯದಲ್ಲಿ ಭಾರತೀಯ ಆಟಗಾರನೊಬ್ಬ ಕ್ರೀಡಾ ಸ್ಫೂರ್ತಿ ಮೆರೆದ ಘಟನೆಯೂ ನಡೆಯಿತು.
ವಾಸ್ತವವಾಗಿ ಪಹಲ್ಗಾಮ್ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧಕ್ಕೆ ಫುಲ್ ಸ್ಟಾಪ್ ಇಡಲಾಗಿದೆ. ಇದರ ಪರಿಣಾಮ ಕ್ರೀಡೆಯ ಮೇಲೂ ಬೀರಿದ್ದು, ಉಭಯ ದೇಶಗಳ ಕ್ರಿಕೆಟ್ ತಂಡಗಳ ಆಟಗಾರರು ಪರಸ್ಪರ ಎದುರಾದಾಗ ಹಸ್ತಲಾಘವ ಮಾಡುವುದಾಗಲಿ ಅಥವಾ ಪರಸ್ಪರ ಮಾತನಾಡುವುದಾಗಲಿ ನಡೆಯುತ್ತಿಲ್ಲ. ಪಾಕ್ ತಂಡದ ಆಟಗಾರರೊಂದಿಗೆ ಯಾವ ರೀತಿಯ ಮಾತುಕತೆಯನ್ನು ನಡೆಸಬಾರದೆಂಬ ಬಿಸಿಸಿಐ ಕಟ್ಟಾಜ್ಞೆಯನ್ನು ಶಿರಸಾವಹಿಸಿ ಪಾಲಿಸುತ್ತಿರುವ ಭಾರತದ ಆಟಗಾರರು, ಪಾಕ್ ಆಟಗಾರರಿಂದ ಮೈದಾನದಲ್ಲಿ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.
ಇದೆಲ್ಲದರ ನಡುವೆಯೂ ಇಂದು ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತದ ಬೌಲರ್ ಕಿಶನ್ ಸಿಂಗ್, ಪಾಕಿಸ್ತಾನದ ಇನ್ನಿಂಗ್ಸ್ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಹುಜೈಫಾ ಎಹ್ಸಾನ್ ಅವರ ಶೂಲೇಸ್‌ಗಳನ್ನು ಕಟ್ಟುವ ಮೂಲಕ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ. ಒಂದೆಡೆ ಆಟಗಾರರು ಪರಸ್ಪರ ಹಸ್ತಲಾಘವ ಮಾಡದಿರುವಾಗ ಭಾರತದ ಆಟಗಾರನೊಬ್ಬ ಪಾಕ್ ಆಟಗಾರನ ಶೂಲೇಸ್ ಕಟ್ಟಿರುವುದು ಕ್ರೀಡಾ ಲೋಕದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
During the Pakistan Vs India clash in the Under-19 Asia Cup,@BCCI
player Kishan Singh tied the shoelaces of
@TheRealPCB batter Huzaifa Ahsan, displaying excellent sportsmanship. Truly, athletes are ambassadors of their countries. pic.twitter.com/7FZ1RcsyUA— Syed Yahya Hussaini (@SYahyaHussaini) December 14, 2025
ಅಷ್ಟಕ್ಕೂ ನಡೆದಿದ್ದು ಏನೆಂದರೆ, ಪಾಕಿಸ್ತಾನದ ಇನ್ನಿಂಗ್ಸ್‌ನ 36 ನೇ ಓವರ್ ಮುಗಿದ ಬಳಿಕ ಬ್ಯಾಟ್ಸ್‌ಮನ್ ಹುಜೈಫಾ ಎಹ್ಸಾನ್ ಅವರ ಬಲಗಾಲಿನ ಶೂಲೇಸ್ ಕಳಚಿತ್ತು. ಇದನ್ನು ಗಮನಿಸಿದ ಅವರು, ಭಾರತದ ಬೌಲರ್ ಕಿಶನ್ ಸಿಂಗ್ ಅವರನ್ನು ಸಹಾಯಕ್ಕಾಗಿ ಕೇಳಿದರು. ಕಿಶನ್ ಸಿಂಗ್ ಮಿನಾಮೇಷ ಏಣಿಸದೆ ಹುಜೈಫಾ ಎಹ್ಸಾನ್ ಅವರ ಶೂಲೇಸ್‌ಗಳನ್ನು ಕಟ್ಟಿದರು. ಇದೀಗ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದೀಗ ಭಾರತೀಯ ಆಟಗಾರನ ಹೃದಯವಂತಿಕೆಗೆ ಇಡೀ ಕ್ರಿಕೆಟ್ ಜಗತ್ತು ಸಲಾಂ ಹೊಡಿದಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:38 pm, Sun, 14 December 25