Rohit Sharma: ಕೊಹ್ಲಿ ಫಾರ್ಮ್​ ಬಗ್ಗೆ ನಾಯಕನಾಗಿ ತುಟಿ ಬಿಚ್ಚಿದ ರೋಹಿತ್ ಶರ್ಮಾ: ಏನಂದ್ರು ಗೊತ್ತೇ?

| Updated By: Vinay Bhat

Updated on: Feb 15, 2022 | 7:36 AM

Virat Kohli: ಬ್ಯಾಟಿಂಗ್ ಕಡೆ ಹೆಚ್ಚು ಗಮನ ಹರಿಸುವ ಉದ್ದೇಶದಿಂದ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದರು. ಆದರೆ, ಇದರಿಂದ ದೊಡ್ಡ ಮಟ್ಟದ ವ್ಯತ್ಯಾಸವೇನು ಕಾಣುತ್ತಿಲ್ಲ ಎಂದು ಕ್ರಿಕೆಟ್ ಪಂಡಿತರು ಮಾತನಾಡುತ್ತಿರುವಾಗಲೇ ಭಾರತದ ನಾಯಕನಾಗಿರುವ ರೋಹಿತ್ ಶರ್ಮಾ ಖಡಕ್ ಆಗಿ ಎಲ್ಲರಿಗೂ ಸಂದೇಶವೊಂದನ್ನು ರವಾನಿಸಿದ್ದಾರೆ.

Rohit Sharma: ಕೊಹ್ಲಿ ಫಾರ್ಮ್​ ಬಗ್ಗೆ ನಾಯಕನಾಗಿ ತುಟಿ ಬಿಚ್ಚಿದ ರೋಹಿತ್ ಶರ್ಮಾ: ಏನಂದ್ರು ಗೊತ್ತೇ?
Virat Kohli and Rohit Sharma
Follow us on

ಕಳೆದ ಎರಡು ವರ್ಷಗಳಿಂದ ಟೀಮ್ ಇಂಡಿಯಾ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಫಾರ್ಮ್ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬರುತ್ತಲೇ ಇದೆ. ಸತತವಾಗಿ ಶತಕ ಸಿಡಿಸುತ್ತಿದ್ದ ಕಿಂಗ್ ಕೊಹ್ಲಿ ಬತ್ತಳಿಕೆಯಿಂದ ಸೆಂಚುರಿ ನೋಡಿ ಕೂಡ ಎರಡು ವರ್ಷ ಕಳೆದಿವೆ. ಬ್ಯಾಟಿಂಗ್ ಕಡೆ ಹೆಚ್ಚು ಗಮನ ಹರಿಸುವ ಉದ್ದೇಶದಿಂದ ನಾಯಕತ್ವದಿಂದಲೂ ಕೆಳಗಿಳಿದರು. ಆದರೆ, ಇದರಿಂದ ದೊಡ್ಡ ಮಟ್ಟದ ವ್ಯತ್ಯಾಸವೇನು ಕಾಣುತ್ತಿಲ್ಲ ಎಂದು ಕ್ರಿಕೆಟ್ ಪಂಡಿತರು ಮಾತನಾಡುತ್ತಿರುವಾಗಲೇ ಭಾರತದ ನಾಯಕನಾಗಿರುವ ರೋಹಿತ್ ಶರ್ಮಾ (Rohit Sharma) ಖಡಕ್ ಆಗಿ ಎಲ್ಲರಿಗೂ ಸಂದೇಶವೊಂದನ್ನು ರವಾನಿಸಿದ್ದಾರೆ. ಕೊಹ್ಲಿ ಪರ ಬ್ಯಾಟ್ ಬೀಸಿರುವ ಹಿಟ್​ಮ್ಯಾನ್ ಫಾರ್ಮ್​ ಬಗ್ಗೆ ಮಾತನಾಡುವವರ ಬಾಯಿ ಮುಚ್ಚಿಸಿದ್ದಾರೆ. ಕೊಹ್ಲಿ ಫಾರ್ಮ್ ವಿಷಯದಲ್ಲಿ ನನಗೆ ಯಾವುದೇ ರೀತಿಯ ತಪ್ಪು ಕಾಣಿಸುತ್ತಿಲ್ಲ ಎಂದು ರೋಹಿತ್ ಸುದ್ದಿಗೋಷ್ಠಿಯಲ್ಲಿ ಎದುರಾದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಕೊಹ್ಲಿ ಸಾಲುಸಾಲು ಕಳಪೆ ಪ್ರದರ್ಶನವನ್ನು ನೀಡುತ್ತಿದ್ದು ಆತ್ಮ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ, ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆ ರೋಹಿತ್​​ಗೆ ಸುದ್ದಿಗೋಷ್ಠಿಯಲ್ಲಿ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಅವರು, “ವಿರಾಟ್ ಕೊಹ್ಲಿಗೆ ವಿಶ್ವಾಸ ಪಡೆದುಕೊಳ್ಳಬೇಕಾದ ಅಗತ್ಯವಿದೆ? ನೀವೇನು ಮಾತಾಡುತ್ತಿದ್ದೀರಿ, ಆತ ಶತಕ ಬಾರಿಸದೇ ಇರುವುದು ಸಮಸ್ಯೆಯಲ್ಲ ಎಂದು ನಾನು ಭಾವಿಸುತ್ತೇನೆ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಸರಣಿಯಲ್ಲಿ 3 ಪಂದ್ಯಗಳ ಪೈಕಿ 2 ಅರ್ಧಶತಕಗಳನ್ನು ಕೊಹ್ಲಿ ಬಾರಿಸಿದ್ದಾರೆ. ಕೊಹ್ಲಿ ಫಾರ್ಮ್ ವಿಷಯದಲ್ಲಿ ನನಗೆ ಯಾವುದೇ ರೀತಿಯ ತಪ್ಪು ಕಾಣಿಸುತ್ತಿಲ್ಲ ಮತ್ತು ಟೀಮ್ ಮ್ಯಾನೇಜ್‌ಮೆಂಟ್ ಕೂಡ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ,” ಎಂದು ಉತ್ತರಿಸಿದ್ದಾರೆ.

ಇನ್ನು ಭಾರತ ತಂಡದ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋರ್ ಕೂಡ ಕೊಹ್ಲಿಯವರನ್ನು ಬೆಂಬಲಿಸಿ ಮಾತನಾಡಿದ್ದಾರೆ. ವಿರಾಟ್ ಅವರು ವೃತ್ತಿ ಬದುಕಿನ ಕಠಿಣ ಹಂತದಲ್ಲಿ ಇದ್ದಾರೆಯೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ವಿಕ್ರಂ, “ಕೊಹ್ಲಿ ಕಠಿಣ ಹಂತದಲ್ಲಿದ್ದಾರೆ ಎಂದು ನಾನು ಭಾವಿಸಿಲ್ಲ. ವೆಸ್ಟ್ ಇಂಡೀಸ್ ವಿರುದ್ಧದ ವಿರಾಟ್ ಪಾಲಿಗೆ ಕೆಟ್ಟದಾಗಿತ್ತು ಎಂಬುದು ಗೊತ್ತು. ಆದರೆ ಆ ಬಗ್ಗೆ ಹೆಚ್ಚೇನೂ ಚರ್ಚಿಸಿಲ್ಲ. ಅವರು ನೆಟ್ಸ್‌ನಲ್ಲಿ ತುಂಬಾ ಚೆನ್ನಾಗಿಯೇ ಆಡುತ್ತಿದ್ದಾರೆ. ಕಠಿಣ ಅಭ್ಯಾಸ ಮುಂದುವರಿದಿದೆ. ನಾವೂ ಕಾಯುತ್ತಿದ್ದೇವೆ… ಈ ವಿಂಡೀಸ್ ವಿರುದ್ಧದ ಸರಣಿಯಲ್ಲಿ ಅಂತಹದೊಂದು ಇನಿಂಗ್ಸ್‌ನೊಂದಿಗೆ ರನ್‌ ಗಳಿಕೆಯ ಹಾದಿಗೆ ಕೊಹ್ಲಿ ಮರಳಲಿದ್ದಾರೆ,” ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಕೋಲ್ಕತ್ತಾಕ್ಕೆ ಬಂದಿಳಿದ ಭಾರತ:

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಆಡಲು ಟೀಮ್ ಇಂಡಿಯಾ ಕೋಲ್ಕೊತ್ತಾಕ್ಕೆ ಬಂದಿಳಿದಿದೆ. ಬುಧವಾರದಿಂದ ಈಡನ್ ಗಾರ್ಡನ್​​ನಲ್ಲಿ ಮೂರು ಪಂದ್ಯಗಳ ಟಿ20 ಸರಣಿ ಪೈಕಿ ಮೊದಲ ಪಂದ್ಯ ಆಯೋಜಿಸಲಾಗಿದೆ. ಇಂದು ರೋಹಿತ್ ಪಡೆ ಅಭ್ಯಾಸ ಆರಂಭಿಸಲಿದೆ.

ಸುಂದರ್ ಔಟ್:

ಗಾಯದ ಸಮಸ್ಯೆಗೆ ತುತ್ತಾಗಿದ್ದ ಯುವ ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌, ಸುದೀರ್ಘಾವಧಿಯ ವಿರಾಮದ ಬಳಿಕ ವೆಸ್ಟ್‌ ಇಂಡೀಸ್‌ ವಿರುದ್ಧದ ಒಡಿಐ ಸರಣಿಯಲ್ಲಿ ಕಮ್‌ಬ್ಯಾಕ್‌ ಮಾಡಿದ್ದರು. ಆದರೆ, ಇದೀಗ ವಿಂಡೀಸ್‌ ವಿರುದ್ಧದ ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿ ಶುರುವಾಗುವ ಮೊದಲೇ ವಾಷಿಂಗ್ಟನ್‌ ಮತ್ತೊಮ್ಮೆ ಗಾಯಕ್ಕೆ ತುತ್ತಾಗಿದ್ದಾರೆ. ಗಂಭೀರ ಸ್ವರೂಪದ ಸ್ನಾಯು ಸೆಳೆತದ ಸಮಸ್ಯೆಗೆ ತುತ್ತಾಗಿದ್ದಾರೆ. ಹೀಗಾಗಿ ವೆಸ್ಟ್‌ ಇಂಡೀಸ್‌ ಮತ್ತು ಶ್ರೀಲಂಕಾ ವಿರುದ್ಧದ ಸರಣಿಗಳಿಂದಲೂ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ.