
ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ನಡುವಿನ ಏಕದಿನ ಸರಣಿ ಅಂತಿಮ ಹಂತದಲ್ಲಿದ್ದು, ಉಭಯ ತಂಡಗಳ ನಡುವಿನ ಮೂರನೇ ಮತ್ತು ಅಂತಿಮ ಪಂದ್ಯ ಡಿಸೆಂಬರ್ 6 ರ ಶನಿವಾರ ವಿಶಾಖಪಟ್ಟಣದಲ್ಲಿ ನಡೆಯಲಿದೆ. 3 ಪಂದ್ಯಗಳ ಸರಣಿ 1-1 ರಲ್ಲಿ ಸಮಬಲಗೊಂಡಿರುವುದರಿಂದ ಮೂರನೇ ಪಂದ್ಯವು ಸರಣಿ ನಿರ್ಣಾಯಕವಾಗಿದೆ. ಎರಡೂ ತಂಡಗಳು ಸರಣಿಯನ್ನು ಗೆಲ್ಲುವ ಸಮಾನ ಅವಕಾಶವನ್ನು ಹೊಂದಿವೆ. ಹೀಗಾಗಿ ಸರಣಿ ಯಾವ ತಂಡದ ಪಾಲಾಗುತ್ತದೆ ಎಂಬುದನ್ನು ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ಪ್ರವಾಸದಲ್ಲಿ ಸತತ ಎರಡನೇ ಸರಣಿಯನ್ನು ಗೆಲ್ಲಲು ದಕ್ಷಿಣ ಆಫ್ರಿಕಾ ಮೈದಾನಕ್ಕಿಳಿಯಲಿದೆ. ಮತ್ತೊಂದೆಡೆ, ಮೂರನೇ ಮತ್ತು ಅಂತಿಮ ಪಂದ್ಯವನ್ನು ಗೆಲ್ಲುವ ಮೂಲಕ ಟೆಸ್ಟ್ ಸರಣಿಯಲ್ಲಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ಸವಾಲು ಟೀಂ ಇಂಡಿಯಾದ ಮುಂದಿದೆ.
ವಾಸ್ತವವಾಗಿ ರಾಂಚಿಯಲ್ಲಿ ನಡೆದ ಮೊದಲ ಪಂದ್ಯವನ್ನು ಭಾರತ 17 ರನ್‌ಗಳಿಂದ ಗೆದ್ದುಕೊಂಡಿತು. ಆದರೆ ಎರಡನೇ ಪಂದ್ಯದಲ್ಲಿ 359 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ದಕ್ಷಿಣ ಆಫ್ರಿಕಾ ತಂಡ ಗೆಲುವು ಸಾಧಿಸಿತ್ತು. ಇದರೊಂದಿಗೆ ದಕ್ಷಿಣ ಆಫ್ರಿಕಾ ಸರಣಿಯನ್ನು 1-1 ರಿಂದ ಸಮಬಲಗೊಳಿಸಿತು. ಆದ್ದರಿಂದ, ಮೂರನೇ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟವನ್ನು ನಿರೀಕ್ಷಿಸಬಹುದು. ಆದಾಗ್ಯೂ ಮಳೆ ಅಥವಾ ಇತರ ಕಾರಣಗಳಿಂದ ಮೂರನೇ ಪಂದ್ಯ ರದ್ದಾದರೆ, ಯಾವ ತಂಡ ಸರಣಿ ವಿಜೇತರಾಗಲಿದೆ? ಅಲ್ಲದೆ, ವಿಶಾಖಪಟ್ಟಣದಲ್ಲಿ ಹವಾಮಾನ ಹೇಗಿರುತ್ತದೆ? ಎಂಬುದರ ವಿವರ ಇಲ್ಲಿದೆ.
ಅಕ್ಯೂವೆದರ್ ಪ್ರಕಾರ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಪಂದ್ಯದ ಸಮಯದಲ್ಲಿ ಮೋಡ ಕವಿದ ವಾತಾವರಣವಿರುತ್ತದೆ. ಆದರೆ ಮಳೆ ಬರುವ ಸಾಧ್ಯತೆ ಇಲ್ಲ. ವಿಶಾಖಪಟ್ಟಣದಲ್ಲಿ ಪಂದ್ಯದ ಸಮಯದಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ. ರಾತ್ರಿಯಲ್ಲಿ ತಾಪಮಾನವು 19 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ನಿರೀಕ್ಷೆಯಿದೆ.
ವಿಶಾಖಪಟ್ಟಣದಲ್ಲಿ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಮತ್ತು ಕೊನೆಯ ಪಂದ್ಯ ಮಳೆ ಅಥವಾ ಇನ್ನಾವುದೇ ಕಾರಣದಿಂದಾಗಿ ರದ್ದಾದರೆ ಸರಣಿಯನ್ನು ಯಾರು ಗೆಲ್ಲುತ್ತಾರೆ ಎಂಬುದು ಕ್ರಿಕೆಟ್ ಅಭಿಮಾನಿಗಳ ಕುತೂಹಲವಾಗಿದೆ. ಈ ಪಂದ್ಯ ರದ್ದಾದರೆ, ಸರಣಿ 1-1 ರಿಂದ ಸಮಬಲಗೊಳ್ಳುತ್ತದೆ. ದ್ವಿಪಕ್ಷೀಯ ಸರಣಿಗೆ ಸೂಪರ್ ಓವರ್ ಅಥವಾ ರಿಸರ್ವ್ ಡೇ ನಂತಹ ಯಾವುದೇ ನಿಯಮಗಳಿಲ್ಲ.
IND vs SA: ಭಾರತ- ಆಫ್ರಿಕಾ ನಡುವಿನ ಕೊನೆಯ ಏಕದಿನ ಪಂದ್ಯ ಯಾವಾಗ ಎಲ್ಲಿ ನಡೆಯಲಿದೆ?
ಏತನ್ಮಧ್ಯೆ, ಇದು ವಿಶಾಖಪಟ್ಟಣದಲ್ಲಿ ಟೀಂ ಇಂಡಿಯಾದ 11 ನೇ ಏಕದಿನ ಪಂದ್ಯವಾಗಲಿದೆ. ಈ ಮೈದಾನದಲ್ಲಿ ಭಾರತ ಇದುವರೆಗೆ 10 ಪಂದ್ಯಗಳಲ್ಲಿ 7 ರಲ್ಲಿ ಗೆದ್ದಿದ್ದು, 2 ರಲ್ಲಿ ಸೋತಿದೆ. ಒಂದೇ ಒಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:25 pm, Fri, 5 December 25