ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿಗೆ ಶೀಘ್ರದಲ್ಲೇ ಟೀಮ್ ಇಂಡಿಯಾವನ್ನು (Team India) ಆಯ್ಕೆ ಮಾಡಲಾಗುತ್ತದೆ. 5 ಪಂದ್ಯಗಳ ಈ ಸರಣಿಯಿಂದ ಟೀಮ್ ಇಂಡಿಯಾದ ಇಬ್ಬರು ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗುತ್ತದೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಅದರಂತೆ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ವಿಂಡೀಸ್ ವಿರುದ್ದದ ಸರಣಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಹಾಗೆಯೇ ಇಂಗ್ಲೆಂಡ್ ವಿರುದ್ದದ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿರುವ ಜಸ್ಪ್ರೀತ್ ಬುಮ್ರಾ ಕೂಡ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.
ಟಿ20 ವಿಶ್ವಕಪ್ ಅನ್ನು ಗಮನದಲ್ಲಿರಿಸಿ ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲು ಟೀಮ್ ಇಂಡಿಯಾ ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇತ್ತ ಇಂಗ್ಲೆಂಡ್ ವಿರುದ್ದದ ಏಕದಿನ ಸರಣಿಯ ವೇಳೆ ಗಾಯಗೊಂಡಿರುವ ಕೊಹ್ಲಿ ಮೊದಲ ಪಂದ್ಯವನ್ನು ಆಡಿರಲಿಲ್ಲ. ಹಾಗೆಯೇ 2ನೇ ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ವೆಸ್ಟ್ ಇಂಡೀಸ್ ವಿರುದ್ದದ ಸರಣಿಯಿಂದಲೂ ಕೊಹ್ಲಿಗೆ ವಿಶ್ರಾಂತಿ ಪಡೆಯಲಿದ್ದಾರೆ ಎನ್ನುವ ಸುದ್ದಿಯೊಂದು ಹೊರಬಿದ್ದಿದೆ.
ಇನ್ನು ವಿರಾಟ್ ಕೊಹ್ಲಿಯ ಸ್ಥಾನದಲ್ಲಿ ಕೆಎಲ್ ರಾಹುಲ್ ಕಂಬ್ಯಾಕ್ ಮಾಡಲಿದ್ದಾರೆ ಎಂದು ತಿಳಿಸಲಾಗಿದೆ. ಸೌತ್ ಆಫ್ರಿಕಾ ವಿರುದ್ದದ ಸರಣಿಯ ವೇಳೆ ಗಾಯಗೊಂಡಿದ್ದ ರಾಹುಲ್ ಇಂಗ್ಲೆಂಡ್ ವಿರುದ್ದದ ಸರಣಿಯಿಂದ ಹೊರಗುಳಿದಿದ್ದರು. ಇದೀಗ ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿಯ ಮೂಲಕ ಟೀಮ್ ಇಂಡಿಯಾಗೆ ಮರಳಲು ಸಿದ್ದತೆಯನ್ನು ಆರಂಭಿಸಿದ್ದಾರೆ.
ಹಾಗೆಯೇ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ಗೆ ಮತ್ತೆ ಅವಕಾಶ ಸಿಗುವ ಸಾಧ್ಯತೆಯಿದೆ. ಏಕೆಂದರೆ ಸೌತ್ ಆಫ್ರಿಕಾ ವಿರುದ್ದದ ಟಿ20 ಸರಣಿಗೆ ಆಯ್ಕೆಯಾಗಿದ್ದ ಕುಲ್ದೀಪ್ ಅಭ್ಯಾಸದ ವೇಳೆ ಗಾಯಗೊಂಡಿದ್ದರು. ಇದೀಗ ಪೂರ್ಣ ಗುಣಮುಖರಾಗಿರುವ ಕುಲ್ದೀಪ್ ಯಾದವ್ ವೆಸ್ಟ್ ಇಂಡೀಸ್ ವಿರುದ್ದದ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಇನ್ನು ಈಗಾಗಲೇ ವೆಸ್ಟ್ ಇಂಡೀಸ್ ವಿರುದ್ದದ 3 ಪಂದ್ಯಗಳ ಏಕದಿನ ಸರಣಿಗೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಗಿದೆ. ಈ ತಂಡದಿಂದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಸೇರಿದಂತೆ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ.
ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಗೆ ಟೀಮ್ ಇಂಡಿಯಾ ಹೀಗಿದೆ:
ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ (ಉಪ ನಾಯಕ) ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್