
2026 ರ ಟಿ20 ವಿಶ್ವಕಪ್‌ಗಾಗಿ (T20 World Cup 2026) ಹಾಲಿ ಚಾಂಪಿಯನ್ ಟೀಂ ಇಂಡಿಯಾವನ್ನು ಘೋಷಿಸಲಾಗಿದೆ. ಡಿಸೆಂಬರ್ 20 ರಂದು, ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಮತ್ತು ಆ ನಂತರ ನಡೆಯಲಿರುವ ಟಿ20 ವಿಶ್ವಕಪ್‌ಗೆ 15 ಸದಸ್ಯರ ಬಲಿಷ್ಠ ತಂಡವನ್ನು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಪ್ರಕಟಿಸಿದೆ. ಆಯ್ಕೆಯಾದ ತಂಡದಲ್ಲಿ ಭಾಗಶಃ ಎಲ್ಲರೂ ನಿರೀಕ್ಷಿಸಿದ್ದ ಆಟಗಾರರೇ ಇದ್ದು, ಈ ಬಾರಿಯೂ ಭಾರತವೇ ಚಾಂಪಿಯನ್ ಆಗುವ ಲಕ್ಷಣಗಳು ಗೋಚರಿಸುತ್ತಿವೆ. ಆದಾಗ್ಯೂ ಈ ಟೂರ್ನಿಗೆ ಆಯ್ಕೆಯಾದ ಆಟಗಾರರಲ್ಲಿ ಆರ್‌ಸಿಬಿ (RCB) ಸೇರಿದಂತೆ ಮೂರು ಐಪಿಎಲ್ ತಂಡಗಳ ಆಟಗಾರರು ಆಯ್ಕೆಯಾಗದಿರುವುದು ಗಮನಿಸಬೇಕಾದ ಸಂಗತಿಯಾಗಿದೆ. ಇದರರ್ಥ 10 ಐಪಿಎಲ್ (IPL) ತಂಡಗಳಲ್ಲಿ, ಏಳು ತಂಡಗಳ ಆಟಗಾರರು ಮಾತ್ರ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಆ ಮೂರು ತಂಡಗಳಲ್ಲಿ ಆರ್‌ಸಿಬಿ, ಲಕ್ನೋ ಸೂಪರ್ಜೈಂಟ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳಿಂದ ಒಬ್ಬರು ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿಲ್ಲ. ಈ ಮೂರು ತಂಡಗಳನ್ನು ಹೊರತುಪಡಿಸಿ ಉಳಿದ 7 ತಂಡಗಳಲ್ಲಿ ಒಬ್ಬರಾದರೂ ಆಟಗಾರರು ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
2026 ರ ಟಿ20 ವಿಶ್ವಕಪ್‌ಗೆ ಆಯ್ಕೆಯಾದ ಟೀಂ ಇಂಡಿಯಾದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ಪಾರುಪತ್ಯ ಮೇರೆದಿದ್ದಾರೆ. ಈ ತಂಡದಿಂದ ನಾಲ್ವರು ಆಟಗಾರು ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದಿಂದ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಮತ್ತು ತಿಲಕ್ ವರ್ಮಾ ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿದ್ದಾರೆ.
ಮುಂಬೈ ಇಂಡಿಯನ್ಸ್ ನಂತರ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಮೂವರು ಆಟಗಾರರು ಆಯ್ಕೆಯಾಗಿದ್ದಾರೆ. ಅವರಲ್ಲಿ ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ ಮತ್ತು ರಿಂಕು ಸಿಂಗ್ ಸೇರಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಿಂದ ತಲಾ ಇಬ್ಬರು ಆಟಗಾರರನ್ನು ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಸನ್‌ರೈಸರ್ಸ್ ಹೈದರಾಬಾದ್‌ನಿಂದ ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಆಯ್ಕೆಯಾಗಿದ್ದರೆ, ಸಿಎಸ್‌ಕೆ ತಂಡದಿಂದ ಸಂಜು ಸ್ಯಾಮ್ಸನ್ ಮತ್ತು ಶಿವಂ ದುಬೆ ಆಯ್ಕೆಯಾಗಿದ್ದಾರೆ.
ಹಾಗೆಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಅಕ್ಷರ್ ಪಟೇಲ್ ಹಾಗೂ ಕುಲ್ದೀಪ್ ಯಾದವ್ 2026 ರ ಟಿ20 ವಿಶ್ವಕಪ್‌ನಲ್ಲಿ ಆಡಲು ಅವಕಾಶ ಪಡೆದಿದ್ದಾರೆ. ಇವರೆಲ್ಲರ ಹೊರತಾಗಿ, ಪಂಜಾಬ್ ಕಿಂಗ್ಸ್ ತಂಡದಿಂದ ಅರ್ಷದೀಪ್ ಸಿಂಗ್ ಮತ್ತು ಗುಜರಾತ್ ಟೈಟಾನ್ಸ್ ತಂಡದಿಂದ ವಾಷಿಂಗ್ಟನ್ ಸುಂದರ್ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮಾ, ಅಕ್ಷರ್ ಪಟೇಲ್ (ಉಪನಾಯಕ), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್‌ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:18 pm, Sun, 21 December 25