IND vs AFG: ಏಕದಿನ ಸರಣಿಯಿಂದ ಕೊಹ್ಲಿ ಔಟ್..! ಬದಲಿ ಆಟಗಾರನನ್ನು ಘೋಷಿಸಿದ ಬಿಸಿಸಿಐ

BCCI Confirms Kohli Out of IND vs AFG ODI Series: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕದಿನ ಸರಣಿಗೆ ಬಿಸಿಸಿಐ ತಂಡ ಪ್ರಕಟಿಸಿದ್ದು, ವಿರಾಟ್ ಕೊಹ್ಲಿ ಮಂಡಿರಜ್ಜು ಗಾಯದಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಕೊಹ್ಲಿ ಚೇತರಿಕೆಗೆ ಸಮಯಾವಕಾಶ ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಸಿಸಿಐ ಅಧಿಕೃತವಾಗಿ ಘೋಷಿಸಿದೆ. ಇದು ಜೈಸ್ವಾಲ್‌ಗೆ ಉತ್ತಮ ಅವಕಾಶವಾಗಿದೆ.

IND vs AFG: ಏಕದಿನ ಸರಣಿಯಿಂದ ಕೊಹ್ಲಿ ಔಟ್..! ಬದಲಿ ಆಟಗಾರನನ್ನು ಘೋಷಿಸಿದ ಬಿಸಿಸಿಐ
Virat Kohli

Updated on: Jun 06, 2026 | 4:23 PM

ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಏಕೈಕ ಟೆಸ್ಟ್ ಪಂದ್ಯ ಇಂದಿನಿಂದ ಆರಂಭವಾಗಿದೆ. ಇದಾದ ಬಳಿಕ ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಈ ಸರಣಿಗಾಗಿ ಬಿಸಿಸಿಐ ತಂಡವನ್ನು ಪ್ರಕಟಿಸಿತ್ತು. ಆದರೀಗ ಆ ತಂಡಕ್ಕೆ ಬದಲಿ ಆಟಗಾರನಾಗಿ ಯಶಸ್ವಿ ಜೈಸ್ವಾಲ್ (Yashasvi Jaiswal) ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ. ವಾಸ್ತವವಾಗಿ ತಂಡದ ಅನುಭವಿ ಆಟಗಾರ ವಿರಾಟ್ ಕೊಹ್ಲಿ (Virat Kohli) ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರನ್ನು ಈ ಸರಣಿಯಿಂದ ಹೊರಗಿಡಲಾಗಿದೆ. ಅವರ ಬದಲಿಯಾಗಿ ಜೈಸ್ವಾಲ್​ಗೆ ಅವಕಾಶ ನೀಡಲಾಗಿದೆ. ಕೊಹ್ಲಿ ಸರಣಿಯಲ್ಲಿ ಆಡುತ್ತಿಲ್ಲ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿತ್ತು. ಆದರೀಗ ಅಧಿಕೃತ ಮಾಹಿತಿ ನೀಡಿರುವ ಬಿಸಿಸಿಐ, ಕೊಹ್ಲಿ ಚೇತರಿಕೆಗೆ ಸಮಯಾವಕಾಶ ಮಾಡಿಕೊಟ್ಟಿದೆ.

ಮಂಡಿರಜ್ಜು ಗಾಯಕ್ಕೆ ತುತ್ತಾದ ಕೊಹ್ಲಿ

2026 ರ ಐಪಿಎಲ್‌ನಲ್ಲಿ ಆರ್​ಸಿಬಿ ತಂಡ ಚಾಂಪಿಯನ್‌ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ ವಿರಾಟ್ ಕೊಹ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ನಿರ್ಣಾಯಕ ಇನ್ನಿಂಗ್ಸ್ ಆಡಿದರು. 75 ರನ್​ಗಳ ಅಜೇಯ ಇನ್ನಿಂಗ್ಸ್ ಆಡಿದ್ದ ಕೊಹ್ಲಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಆದರೆ ಇದೇ ಪಂದ್ಯದಲ್ಲಿ ಕೊಹ್ಲಿ ಗಾಯಕ್ಕೆ ತುತ್ತಾಗಬೇಕಾಯಿತು. ಬ್ಯಾಟಿಂಗ್‌ ಮಾಡುವ ವೇಳೆ ಕೊಹ್ಲಿ ಮಂಡಿರಜ್ಜು ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಪಂದ್ಯವನ್ನು ಹಲವಾರು ಬಾರಿ ನಿಲ್ಲಿಸಬೇಕಾಯಿತು. ಈ ನೋವಿನ ನಡುವೆಯೂ ಕ್ರೀಸ್​ನಲ್ಲಿ ನೆಲೆ ನಿಂತಿದ್ದ ಕೊಹ್ಲಿ ಕೊನೆಯವರೆಗೂ ಉಳಿದು ತಂಡಕ್ಕೆ ಅಮೋಘ ಜಯ ತಂದುಕೊಟ್ಟಿದ್ದರು.

ಇಂಗ್ಲೆಂಡ್ ಸರಣಿ ವೇಳೆಗೆ ಫಿಟ್?

ಇದೀಗ ಅಫ್ಘನ್ ವಿರುದ್ಧದ ಏಕದಿನ ಸರಣಿಯಿಂದ ಹೊರಬಿದ್ದಿರುವ ವಿರಾಟ್ ಕೊಹ್ಲಿ, ಮುಂದಿನ ಇಂಗ್ಲೆಂಡ್ ಪ್ರವಾಸದಲ್ಲಿ ಏಕದಿನ ಸರಣಿಯನ್ನು ಆಡುವ ಸಾಧ್ಯತೆಗಳಿವೆ. ಜುಲೈನಲ್ಲಿ ನಡೆಯಲಿರುವ ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ನಂತರ ಈ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಬಿಸಿಸಿಐ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಕೇಳಿದಾಗ, ಇದಕ್ಕೆ ಉತ್ತರಿಸಿದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್, ಕೊಹ್ಲಿ ಇಂಗ್ಲೆಂಡ್ ಸರಣಿ ವೇಳೆಗೆ ಫಿಟ್ ಆಗುತ್ತಾರೆ ಎಂಬ ನಿರೀಕ್ಷೆ ಇದೆ. ಐಪಿಎಲ್ ಫೈನಲ್‌ನಲ್ಲಿ ಕೊಹ್ಲಿ ಗಾಯಗೊಂಡಿದ್ದರು. ಅವರು ಗಾಯಗೊಂಡು ಕೇವಲ ಒಂದು ವಾರವಾಗಿದೆ. ಹೀಗಾಗಿ ಅವರು ಚೇತರಿಸಿಕೊಳ್ಳಲು ಎಷ್ಟು ಸಮಯ ಬೇಕು ಎಂಬುದು ನನಗೆ ತಿಳಿದಿಲ್ಲ, ಆದರೆ ಅವರು ಇಂಗ್ಲೆಂಡ್ ಏಕದಿನ ಸರಣಿಗೆ ಫಿಟ್ ಆಗುವ ಸಾಧ್ಯತೆ ಇದೆ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:06 pm, Sat, 6 June 26

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us