IND vs AFG: ಭಾರತ- ಅಫ್ಘಾನ್ ಪಂದ್ಯಕ್ಕೆ ಮಳೆಯ ಆತಂಕ? ಇಲ್ಲಿದೆ ದೆಹಲಿಯ ಹವಾಮಾನ ವರದಿ
IND vs AFG Weather Update: ಬುಧವಾರದಂದು ದೆಹಲಿಯಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಈ ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆಯಿಲ್ಲ, ಆದರೆ ಮೋಡ ಕವಿದ ವಾತಾವರಣವಿರಲಿದೆ. ಹವಾಮಾನ ಇಲಾಖೆಯ ಪ್ರಕಾರ ಈ ಮೋಡ ಕವಿದ ವಾತಾವರಣ ಪಂದ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ವರದಿಯಾಗಿದೆ.
ವಿಶ್ವಕಪ್ (ICC world cup 2023) ಮೊದಲ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಸೋಲಿಸಿದ ನಂತರ, ಇದೀಗ ಟೀಂ ಇಂಡಿಯಾ ತನ್ನ ಎರಡನೇ ಪಂದ್ಯವನ್ನು ಆಡಲು ಸಿದ್ಧವಾಗಿದೆ. ಅಫ್ಘಾನಿಸ್ತಾನ ವಿರುದ್ಧ ಟೀಂ ಇಂಡಿಯಾ (India Vs Afghanistan) ತನ್ನ ಎರಡನೇ ಪಂದ್ಯವನ್ನು ಆಡಲಿದ್ದು, ಈ ಪಂದ್ಯವನ್ನು ಗೆಲ್ಲುವ ಮೂಲಕ ಗೆಲುವಿನ ಓಟವನ್ನು ಮುಂದುವರೆಸಲು ರೋಹಿತ್ (Rohit Sharma) ಪಡೆ ಪ್ರಯತ್ನಿಸಲಿದೆ. ಇತ್ತೆ ಬಾಂಗ್ಲಾದೇಶದ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ ಸೋತಿದ್ದ ಅಫ್ಘಾನಿಸ್ತಾನ ಗೆಲುವಿನ ಖಾತೆ ತೆರೆಯುವ ಪ್ರಯತ್ನದಲ್ಲಿದೆ. ದೆಹಲಿಯ ಅರುಣ್ ಜೇಟ್ಲಿ (Arun Jaitley Stadium) ಕ್ರೀಡಾಂಗಣದಲ್ಲಿ (ಹಿಂದಿನ ಫಿರೋಜ್ ಷಾ ಕೋಟ್ಲಾ) ಪಂದ್ಯ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಅದಕ್ಕೂ ಮುನ್ನ ದೆಹಲಿಯ ಹವಾಮಾನ ಈ ಪಂದ್ಯಕ್ಕೆ ಅಡ್ಡಿಪಡಿಸುತ್ತಾ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ 2 ಅಭ್ಯಾಸ ಪಂದ್ಯಗಳು ಮಳೆಯಿಂದಾಗಿ ರದ್ದಾಗಿವೆ. ಹೀಗಾಗಿ ಟೀಂ ಇಂಡಿಯಾ ಅಭ್ಯಾಸ ಪಂದ್ಯಗಳನ್ನಾಡದೆ ವಿಶ್ವಕಪ್ ರಣರಂಗಕ್ಕೆ ಇಳಿಯಬೇಕಾಯಿತು. ಮಳೆಯ ಆತಂಕದ ನಡುವೆಯೂ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಪಂದ್ಯ ಯಾವುದೇ ಅಡೆತಡೆಗಳಿಲ್ಲದೆ ಮುಗಿದಿತ್ತು. ಇದೀಗ ಹೊಸದಿಲ್ಲಿಯಲ್ಲಿ ನಡೆಯಲಿರುವ ಟೀಂ ಇಂಡಿಯಾ-ಅಫ್ಘಾನಿಸ್ತಾನ ಪಂದ್ಯಕ್ಕೂ ಯಾವುದೇ ಅಡಿತಡೆಗಳು ಬಾರದಿರಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.
ಭಾರತಕ್ಕೆ ಅಫ್ಘಾನ್ ಸವಾಲು; ಕೊಹ್ಲಿ- ನವೀನ್ ಮುಖಾಮುಖಿ ನೋಡಲು ಅಭಿಮಾನಿಗಳು ಕಾತುರ
ಹವಾಮಾನ ಹೇಗಿರುತ್ತದೆ?
ಪಂದ್ಯ ಆರಂಭಕ್ಕೂ ಮುನ್ನ ದೆಹಲಿಯಿಂದ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ ಸಿಕ್ಕಿದೆ. ಇಂದು ದೆಹಲಿಯಲ್ಲಿ ಮೋಡ ಕವಿದ ವಾತಾವರಣ ಇರುತ್ತದೆ. ಆದರೆ ಮಳೆ ಬರುವ ಸಾಧ್ಯತೆ ಇಲ್ಲ. ಪ್ರಸ್ತುತ, ದೆಹಲಿಯಲ್ಲಿ ಬೆಳಿಗ್ಗೆ ಮೋಡ ಕವಿದ ವಾತಾವರಣ ಏರ್ಪಟ್ಟಿದೆ. ಈ ವಾತಾವರಣ ದಿನವಿಡೀ ಇರುವ ಸಾಧ್ಯತೆಯಿದೆ. ಆದರೆ ಹವಾಮಾನ ಇಲಾಖೆಯ ಪ್ರಕಾರ ಈ ಮೋಡ ಕವಿದ ವಾತಾವರಣ ಪಂದ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ವರದಿಯಾಗಿದೆ. ಇದೇ ವೇಳೆ ದೆಹಲಿಯಲ್ಲಿ ಬಿಸಿ ವಾತಾವರಣವೂ ಇರಲ್ಲಿದ್ದು, ಹಗಲಿನಲ್ಲಿ ಗರಿಷ್ಠ ತಾಪಮಾನವು 35 ಡಿಗ್ರಿ ಸೆಲ್ಸಿಯಸ್‌ಗೆ ಏರುವ ಸಾಧ್ಯತೆಯಿದೆ. ಹೀಗಾಗಿ ಆಟಗಾರರ ಜತೆಗೆ ಕ್ರಿಕೆಟ್ ಅಭಿಮಾನಿಗಳು ಸಹ ಬೆವರು ಹರಿಸಬೇಕಾಗಬಹುದು.
ಉಭಯ ತಂಡಗಳು
ಅಫ್ಘಾನಿಸ್ತಾನ ತಂಡ: ಹಶ್ಮತುಲ್ಲಾ ಶಾಹಿದಿ (ನಾಯಕ), ರೆಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ರಿಯಾಜ್ ಹಸನ್, ರಹಮತ್ ಶಾ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ಅಜ್ಮತುಲ್ಲಾ ಉಮರ್ಜಾಯ್, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ನೂರ್ ಅಹ್ಮದ್, ಫಝುಲ್ ಹಕ್ವಿನ್, ಫಜಲ್ಹಾ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ