5,2,1,0,7,4,0,0,0 ಇದು ಫೋನ್ ನಂಬರ್ ಅಲ್ಲ; ಭಾರತದ 9 ಆಟಗಾರರು ಬಾರಿಸಿದ ರನ್
India vs Australia T20: ಮೆಲ್ಬೋರ್ನ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 126 ರನ್‌ಗಳ ಗುರಿ ನೀಡಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಆಸೀಸ್ ದಾಳಿಗೆ ಸಿಕ್ಕ ಭಾರತ, 18.4 ಓವರ್‌ಗಳಲ್ಲಿ 125 ರನ್‌ಗಳಿಗೆ ಆಲೌಟ್ ಆಯಿತು. ಅಭಿಷೇಕ್ ಶರ್ಮಾ (ಅರ್ಧಶತಕ) ಮತ್ತು ಹರ್ಷಿತ್ ರಾಣಾ (35 ರನ್) ಅವರ ನಿರ್ಣಾಯಕ ಜೊತೆಯಾಟದಿಂದಾಗಿ ಭಾರತ ಈ ಮೊತ್ತ ತಲುಪಲು ಸಾಧ್ಯವಾಯಿತು.

ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಎರಡನೇ ಟಿ20 ಪಂದ್ಯದಲ್ಲಿ ಭಾರತ, ಆಸ್ಟ್ರೇಲಿಯಾಕ್ಕೆ (India vs Australia) 126 ರನ್‌ಗಳ ಗುರಿ ನೀಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಆಸೀಸ್ ದಾಳಿಗೆ ತತ್ತರಿಸಿ ಪೂರ್ಣ 20 ಓವರ್‌ಗಳನ್ನು ಆಡಲಾಗದೆ 18.4 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 125 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಭಾರತದ ಪರ ಏಕಾಂಗಿ ಹೋರಾಟ ನಡೆಸಿದ ಅಭಿಷೇಕ್ ಶರ್ಮಾ (Abhishek Sharma) ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಈ ಮೊತ್ತಕ್ಕೆ ಕೊಂಡೊಯ್ದರು. ಇವರಿಗೆ ಸಾಥ್ ನೀಡಿದ ಹರ್ಷಿತ್ ರಾಣಾ ಕೂಡ 35 ರನ್‌ಗಳ ಕಾಣಿಕೆ ನೀಡಿದರು. ಇವರಿಬ್ಬರು ಅರ್ಧಶತಕದ ಜೊತೆಯಾಟವನ್ನು ಆಡಿ, ತಂಡವನ್ನು 100 ರನ್‌ಗಳ ಗಡಿ ದಾಟಿಸಿದರು.
ಬ್ಯಾಟಿಂಗ್ ವಿಭಾಗದ ಕಳಪೆ ಪ್ರದರ್ಶನ
ಈ ಪಂದ್ಯದಲ್ಲಿ ಭಾರತ ತಂಡದ ಬ್ಯಾಟಿಂಗ್ ಎಷ್ಟು ಕೆಟ್ಟಾದಾಗಿತ್ತು ಎಂದರೆ, ಅಭಿಷೇಕ್ ಶರ್ಮಾ ಹಾಗೂ ಹರ್ಷಿತ್ ರಾಣಾ ಕೂಡ ಒಂದಂಕಿಗೆ ಔಟಾಗಿದ್ದರೆ, ತಂಡವು ಕೇವಲ 20 ರನ್ ಒಳಗೆ ಆಲೌಟ್ ಆಗುವ ಸಾಧ್ಯತೆ ಇತ್ತು. ಆಸೀಸ್ ವೇಗಿಗಳ ಎದುರು ರನ್ ಗಳಿಸುವುದಿರಲಿ, ಟೀಂ ಇಂಡಿಯಾ ಆಟಗಾರರಿಗೆ ನೆಲ ಕಚ್ಚಿ ನಿಲ್ಲುವುದಕ್ಕೂ ಕಷ್ಟವಾಯಿತು. ಹೀಗಾಗಿಯೇ ತಂಡದ 9 ಬ್ಯಾಟ್ಸ್ಮನ್ಗಳು ಕ್ರಮವಾಗಿ 5,2,1,0,7,4,0,0,0 ರನ್ ಬಾರಿಸಿದರು. ಅಂದರೆ ತಂಡದ 9 ಆಟಗಾರರು ಒಟ್ಟಾಗಿ 19 ರನ್ ಕಲೆಹಾಕಲಷ್ಟೇ ಶಕ್ತರಾದರು. ಉಳಿದ ರನ್ಗಳು ಅಭಿಷೇಕ್ ಶರ್ಮಾ ಬಾರಿಸಿದ 68 ರನ್ ಹಾಗೂ ಹರ್ಷಿತ್ ರಾಣಾ ಬಾರಿಸಿದ 35 ರನ್ಗಳಿಂದ ಬಂದವು.
ಭಾರತದ ಪೆವಿಲಿಯನ್ ಪರೇಡ್
ಆರಂಭಿಕರಾದ ಅಭಿಷೇಕ್ ಶರ್ಮಾ ಹಾಗೂ ಶುಭ್ಮನ್ ಗಿಲ್ಗೆ ಒಂದೊಳ್ಳೆ ಆರಂಭ ನೀಡಲು ಸಾಧ್ಯವಾಗಲಿಲ್ಲ. ಗಿಲ್ 5 ರನ್ ಬಾರಿಸಿ ಔಟಾದರೆ, ಆ ಬಳಿಕ ಬ್ಯಾಟಿಂಗ್ನಲ್ಲಿ ಬಡ್ತಿ ಪಡೆದು ಕ್ರಿಸ್ಗೆ ಬಂದ ಸಂಜು ಸ್ಯಾಮನ್ ಆಟವೂ 2 ರನ್‌ಗಳಿಗೆ ಅಂತ್ಯವಾಯಿತು. ನಾಲ್ಕನೇ ಕ್ರಮಾಂಕದಲ್ಲಿ ಬಂದ ನಾಯಕ ಸೂರ್ಯಕುಮಾರ್ ಯಾದವ್ರಿಂದ ಒಂದೊಳ್ಳೆ ಇನ್ನಿಂಗ್ಸ್ ನಿರೀಕ್ಷೆ ಮಾಡಲಾಗಿತ್ತು. ಆದರೆ ಸಿಕ್ಕ ಜೀವದಾನವನ್ನು ಬಳಸಿಕೊಳ್ಳುವಲ್ಲಿ ವಿಫಲರಾದ ಸೂರ್ಯ 1 ರನ್ಗೆ ಔಟಾದರೆ, ಆ ನಂತರ ಬಂದ ತಿಲಕ್ ವರ್ಮಾ ಬೇಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ ಸೊನ್ನಗೆ ವಿಕೆಟ್ ಒಪ್ಪಿಸಿದರು. ಇಲ್ಲದ ರನ್ ಕದಿಯಲು ಹೋಗಿ ಅಕ್ಷರ್ ಪಟೇಲ್ ಕೂಡ ರನ್ಔಟ್ಗೆ ಬಲಿಯಾದರು.
ಅಭಿಷೇಕ್- ಹರ್ಷಿತ್ ಹೋರಾಟ
ಅಗ್ರ ಐವರು ವೈಫಲ್ಯದಿಂದಾಗಿ ಟೀಂ ಇಂಡಿಯಾ 49 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿತು. ಆದಾಗ್ಯೂ ಒಂದೆಡೆ ಏಕಾಂಗಿ ಹೋರಾಟ ನಡೆಸುತ್ತಿದ್ದ ಅಭಿಷೇಕ್ ಶರ್ಮಾಗೆ ಜೊತೆಯಾದ ಹರ್ಷಿತ್ ರಾಣಾ ತಂಡವನ್ನು ಮುಜುಗರದಿಂದ ಪಾರು ಮಾಡುವ ಕೆಲಸ ಮಾಡಿದರು. ಇವರಿಬ್ಬರು ಒಟ್ಟಿಗೆ ಅರ್ಧಶತಕದ ಜೊತೆಯಾಟವನ್ನು ನಡೆಸಿದರು. ಇದೇ ವೇಳೆ ಅಭಿಷೇಕ್ ಶರ್ಮಾ ಏಳು ಬೌಂಡರಿಗಳು ಮತ್ತು ಒಂದು ಸಿಕ್ಸರ್ ಸಹಿತ ತಮ್ಮ ಅರ್ಧಶತಕ ಪೂರೈಸಿದರು. ಇವರಿಬ್ಬರು ಸೇರಿ ತಂಡವನ್ನು 100 ರನ್‌ಗಳ ಗಡಿ ದಾಟಿಸಿದರು. ಆದರೆ 35 ರನ್ ಬಾರಿಇಸ ಆಡುತ್ತಿದ್ದ ಹರ್ಷಿತ್ ರಾಣಾ ಔಟಾಗುವ ಮೂಲಕ ಇವರಿಬ್ಬರ ಜೊತೆಯಾಟ ಮುರಿದುಬಿತ್ತು.
ಹರ್ಷಿತ್ ರಾಣಾ ಔಟಾದ ಬಳಿಕ ಬಂದ ಶಿವಂ ದುಬೆ ಕೂಡ 1 ಬೌಂಡರಿ ಬಾರಿಸಿ ಬ್ಯಾಟ್ ಎತ್ತಿಟ್ಟರು. ದುಬೆ ವಿಕೆಟ್ ಬಳಿಕ ಇನ್ನಿಂಗ್ಸ್ ನಿಭಾಯಿಸುವ ಜವಬ್ದಾರಿ ಹೊತ್ತ ಅಭಿಷೇಕ್ ಕೆಲವು ಬೌಂಡರಿಗಳನ್ನು ಬಾರಿಸಿದರು. ಅಂತಿಮವಾಗಿ 19ನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದ ಅಭಿಷೇಕ್ 37 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 68 ರನ್ ಬಾರಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:44 pm, Fri, 31 October 25
