ಅಶ್ವಿನ್ ಆಡ್ತಾರಾ? ಸುದ್ದಿಗೋಷ್ಠಿಯಲ್ಲಿ ರೋಹಿತ್ ಶರ್ಮಾ ಹೇಳಿದ್ದೇನು?

India vs Australia Final: ಏಕದಿನ ವಿಶ್ವಕಪ್​ನ ಫೈನಲ್ ಪಂದ್ಯವು ನವೆಂಬರ್ 19 ರಂದು ಭಾನುವಾರ ನಡೆಯಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಫೈಟ್​ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಲಿದೆ.

ಅಶ್ವಿನ್ ಆಡ್ತಾರಾ? ಸುದ್ದಿಗೋಷ್ಠಿಯಲ್ಲಿ ರೋಹಿತ್ ಶರ್ಮಾ ಹೇಳಿದ್ದೇನು?
Rohit Sharma
Edited By:

Updated on: Nov 18, 2023 | 6:57 PM

ಭಾರತ-ಆಸ್ಟ್ರೇಲಿಯಾ ಏಕದಿನ ವಿಶ್ವಕಪ್​ ಫೈನಲ್ ಪಂದ್ಯಕ್ಕಾಗಿ ಕೌಂಟ್ ಡೌನ್ ಶುರುವಾಗಿದೆ. ಈ ಫೈನಲ್ ಪಂದ್ಯಕ್ಕೂ ಮುನ್ನ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಲವು ವಿಷಯಗಳನ್ನು ಹಂಚಿಕೊಂಡರು. ನಾನು ನಾಯಕನಾದ ಬಳಿಕ ಇಂತಹದೊಂದು ದಿನಕ್ಕಾಗಿ ಕಾಯುತ್ತಿದ್ದೆ. ಇದಕ್ಕಾಗಿ ಕಳೆದ 2 ವರ್ಷಗಳಲ್ಲಿ ಸಾಕಷ್ಟು ತಯಾರಿಗಳನ್ನು ನಡೆಸಿದ್ದೇವೆ. ಪ್ರತಿಯೊಬ್ಬರ ಪಾತ್ರದ ಸ್ಪಷ್ಟತೆ ಬಗ್ಗೆ ಮತ್ತು ಕೋಚ್ ನಡುವೆ ಸಾಕಷ್ಟು ಚರ್ಚೆಗಳನ್ನು ನಡೆಸಲಾಗಿತ್ತು. ಅದರ ಫಲವಾಗಿ ಇಲ್ಲಿಯವರೆಗೆ ಉತ್ತಮವಾಗಿಯೇ ನಡೆದಿದೆ. ಹಾಗೆಯೇ ನಾಳೆಯೂ ಸಹ ಆಶಾದಾಯಕವಾಗಿದೆ ರೋಹಿತ್ ಹೇಳಿದರು.

ಇನ್ನು ಆಸ್ಟ್ರೇಲಿಯಾ ಕೊನೆಯ 8 ಪಂದ್ಯಗಳಲ್ಲಿ 8 ರಲ್ಲಿ ಗೆದ್ದಿದೆ. ಅವರು ಉತ್ತಮ ಕ್ರಿಕೆಟ್ ಆಡಿದ್ದಾರೆ. ಎರಡೂ ತಂಡಗಳು ಫೈನಲ್‌ಗೆ ಅರ್ಹವಾಗಿವೆ. ಆಸ್ಟ್ರೇಲಿಯಾ ಏನು ಮಾಡಬಹುದೆಂದು ನಮಗೆ ತಿಳಿದಿದೆ. ಅವರು ಯಾವ ರೀತಿಯ ಫಾರ್ಮ್‌ನಲ್ಲಿದ್ದಾರೆ ಎಂಬ ಬಗ್ಗೆ ಚಿಂತಿಸಲು ನಾವು ಬಯಸುವುದಿಲ್ಲ. ಬದಲಿಗೆ ನಮ್ಮ ಕ್ರಿಕೆಟ್ ಮತ್ತು ಯೋಜನೆಗಳ ಮೇಲೆ ನಾವು ಸಂಪೂರ್ಣ ಗಮನವನ್ನು ಕೇಂದ್ರೀಕರಿಸುತ್ತೇವೆ ಎಂದು ಟೀಮ್ ಇಂಡಿಯಾ ನಾಯಕ ಹೇಳಿದರು.

ಇದೇ ವೇಳೆ ಪ್ಲೇಯಿಂಗ್ ಇಲೆವೆನ್ ಬಗ್ಗೆ ರೋಹಿತ್ ಶರ್ಮಾ ಅವರನ್ನು ಪ್ರಶ್ನಿಸಲಾಯಿತು. ಇದಕ್ಕೆ ಸದ್ಯಕ್ಕೆ ನಾವು ಆಡುವ ಬಳಗವನ್ನು ನಿರ್ಧರಿಸಿಲ್ಲ. 15 ಮಂದಿಯಲ್ಲಿ ಯಾರು ಬೇಕಾದರೂ ಕೂಡ ಪ್ಲೇಯಿಂಗ್ ಇಲೆವೆನ್​ನ ಭಾಗವಾಗಬಹುದು ಎಂದರು.

ರವಿಚಂದ್ರನ್ ಅಶ್ವಿನ್ ಆಡ್ತಾರಾ?

ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಹಿರಿಯ ಸ್ಪಿನ್ನರ್​ ರವಿಚಂದ್ರನ್ ಆಡಲಿದ್ದಾರಾ ಎಂಬ ಪ್ರಶ್ನೆಗೆ, ನಾವು ಅದರ ಬಗ್ಗೆ ಕೂಡ ನಿರ್ಧರಿಸಿಲ್ಲ ಎಂಬ ಉತ್ತರ ನೀಡಿದರು. ನಾಳೆ ನಾವು ಪಿಚ್​ ಅನ್ನು ಮೌಲ್ಯಮಾಪನ ಮಾಡುತ್ತೇವೆ. ಆ ಬಳಿಕವಷ್ಟೇ 12-13 ಆಟಗಾರರನ್ನು ಆಯ್ಕೆ ಮಾಡಿ, ಪ್ಲೇಯಿಂಗ್ ಇಲೆವೆನ್ ನಿರ್ಧರಿಸಲಿದ್ದೇವೆ ಎಂದು ರೋಹಿತ್ ಶರ್ಮಾ ತಿಳಿಸಿದರು.

ಇದೇ ವೇಳೆ ಮೊಹಮ್ಮದ್ ಶಮಿಯನ್ನು ಆರಂಭಿಕ ಪಂದ್ಯಗಳಲ್ಲಿ ಕಣಕ್ಕಿಳಿಸದಿರುವ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ, ವಿಶ್ವಕಪ್‌ನ ಮೊದಲೆರಡು ಪಂದ್ಯಗಳಲ್ಲಿ ಆಡದಿರುವುದು ಶಮಿಗೆ ಕಠಿಣವಾಗಿತ್ತು. ಆದರೆ ಅವರು ಸಿರಾಜ್ ಮತ್ತು ಬುಮ್ರಾ ಅವರ ನೆರವಿಗೆ ನಿಂತಿದ್ದರು. ಇದು ಅವರು ತಂಡದ ಆಟಗಾರ ಎಂಬುದನ್ನು ತೋರಿಸುತ್ತದೆ ಎಂದು ರೋಹಿತ್ ಶರ್ಮಾ ಶಮಿಯನ್ನು ಹೊಗಳಿದರು.

ಇನ್ನು ಏಕದಿನ ವಿಶ್ವಕಪ್​ನ ಫೈನಲ್​ ಪಂದ್ಯವು ನನ್ನ ವೃತ್ತಿಜೀವನದ ಅತ್ಯಂತ ದೊಡ್ಡ ಕ್ಷಣ ಎಂದಿರುವ ರೋಹಿತ್ ಶರ್ಮಾ, ಅಂತಿಮ ಪಂದ್ಯದಲ್ಲಿ ಗೆದ್ದು ಚಾಂಪಿಯನ್ ಪಟ್ಟಕ್ಕೇರುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಫೈನಲ್ ಪಂದ್ಯದ ವೇಳೆ ಮಳೆ ಬಂದರೆ ಫಲಿತಾಂಶ ನಿರ್ಧರಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್​ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.