IND vs AUS: ಬೃಹತ್ ಮೊತ್ತ ಕಲೆಹಾಕಿ ಆಸ್ಟ್ರೇಲಿಯಾ ಆಲೌಟ್
India vs Australia: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯವು ಬ್ರಿಸ್ಬೇನ್‌ನಲ್ಲಿ ನಡೆಯುತ್ತಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 295 ರನ್ಗಳ ಜಯ ಸಾಧಿಸಿದರೆ, ದ್ವಿತೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ 10 ವಿಕೆಟ್ಗಳ ಗೆಲುವು ಕಂಡಿದೆ. ಇದೀಗ ಮೂರನೇ ಪಂದ್ಯದಲ್ಲಿ ಗೆಲ್ಲುವ ತಂಡ 5 ಮ್ಯಾಚ್ಗಳ ಸರಣಿಯಲ್ಲಿ ಮುನ್ನಡೆ ಸಾಧಿಸಲಿದೆ.
ಬ್ರಿಸ್ಬೇನ್‌ನಲ್ಲಿ ನಡೆಯುತ್ತಿರುವ ಟೀಮ್ ಇಂಡಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ತಂಡ 445 ರನ್ಗಳಿಸಿ ಆಲೌಟ್ ಆಗಿದೆ. ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾದ ಉಸ್ಮಾನ್ ಖ್ವಾಜಾ (21) ಹಾಗೂ ನಾಥನ್ ಮೆಕ್ ಸ್ವೀನಿ (9) ಬೇಗನೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಮಾರ್ನಸ್ ಲಾಬುಶೇನ್ 15 ರನ್ ಗಳಿಸಿ ಔಟಾದರು.
ಆದರೆ ನಾಲ್ಕನೇ ವಿಕೆಟ್ಗೆ ಜೊತೆಗೂಡಿದ ಟ್ರಾವಿಸ್ ಹೆಡ್ ಹಾಗೂ ಸ್ಟೀವ್ ಸ್ಮಿತ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಒಂದೆಡೆ ಸ್ಮಿತ್ ರಕ್ಷಣಾತ್ಮಕ ಬ್ಯಾಟಿಂಗ್ ಪ್ರದರ್ಶಿಸಿದರೆ, ಮತ್ತೊಂದೆಡೆ ಹೆಡ್ ವಿಸ್ಪೋಟಕ ಇನಿಂಗ್ಸ್ ಆಡಿದರು.
ಪರಿಣಾಮ ಟ್ರಾವಿಸ್ ಹೆಡ್ ಬ್ಯಾಟ್ ನಿಂದ 115 ಎಸೆತಗಳಲ್ಲಿ ಶತಕ ಮೂಡಿಬಂದರೆ, ಸ್ಮಿತ್ 185 ಎಸೆತಗಳಲ್ಲಿ ಸೆಂಚುರಿ ಪೂರೈಸಿದರು. ಈ ಶತಕಗಳೊಂದಿಗೆ ತಂಡದ ಮೊತ್ತವನ್ನು 300ರ ಗಡಿದಾಟಿಸಿದರು. ಇನ್ನು ಶತಕದ ಬೆನ್ನಲ್ಲೇ ಸ್ಟೀವ್ ಸ್ಮಿತ್ (101) ಬುಮ್ರಾ ಎಸೆತದಲ್ಲಿ ಔಟಾದರು. ಆ ಬಳಿಕ ಬಂದ ಮಿಚೆಲ್ ಮಾರ್ಷ್ (5) ಬಂದ ವೇಗದಲ್ಲೇ ಹಿಂತಿರುಗಿದರು.
ಇದಾಗ್ಯೂ ಮತ್ತೊಂದೆಡೆ ಆರ್ಭಟ ಮುಂದುವರೆಸಿದ ಟ್ರಾವಿಸ್ ಹೆಡ್ 160 ಎಸೆತಗಳಲ್ಲಿ 18 ಫೋರ್ ಗಳೊಂದಿಗೆ 152 ರನ್ ಸಿಡಿಸಿದರು. ಈ ಹಂತದಲ್ಲಿ ಮತ್ತೆ ದಾಳಿಗಿಳಿದ ಬುಮ್ರಾ ಹೆಡ್ ವಿಕೆಟ್ ಪಡೆದರು. ಈ ಮೂಲಕ ಜಸ್ಪ್ರೀತ್ ಬುಮ್ರಾ 5 ವಿಕೆಟ್ಗಳ ಸಾಧನೆ ಮಾಡಿದರು.
ಇನ್ನು 7ನೇ ಕ್ರಮಾಂಕದಲ್ಲಿ ಅಲೆಕ್ಸ್ ಕ್ಯಾರಿ 70 ರನ್ ಬಾರಿಸಿದರೂ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಸಾಥ್ ಸಿಕ್ಕಿರಲಿಲ್ಲ. ಪರಿಣಾಮ ಆಸ್ಟ್ರೇಲಿಯಾ ತಂಡವು 445 ರನ್ಗಳಿಸಿ ಆಲೌಟ್ ಆಗಿದೆ. ಟೀಮ್ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ 6 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 2 ವಿಕೆಟ್ ಕಬಳಿಸಿದರು. ಇನ್ನು ಆಕಾಶ್ ದೀಪ್ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಟೀಮ್ ಇಂಡಿಯಾಗೆ ಆರಂಭಿಕ ಆಘಾತ:
ಆಸ್ಟ್ರೇಲಿಯಾ ಇನಿಂಗ್ಸ್ ಮುಕ್ತಾಯದ ಬೆನ್ನಲ್ಲೇ ಪ್ರಥಮ ಇನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ ಮೊದಲ ಓವರ್ನ ಎರಡನೇ ಎಸೆತದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿದೆ. ಮಿಚೆಲ್ ಸ್ಟಾರ್ಕ್ ಎಸೆದ ಈ ಓವರ್ನಲ್ಲಿ ಯಶಸ್ವಿ ಜೈಸ್ವಾಲ್ (4) ವಿಕೆಟ್ ಒಪ್ಪಿಸಿದ್ದಾರೆ. ಇನ್ನು ಮೂರನೇ ಓವರ್ನಲ್ಲಿ ಶುಭ್ಮನ್ ಗಿಲ್ (1) ಕೂಡ ಔಟಾಗಿದ್ದಾರೆ. ಸದ್ಯ ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್ ಮಾಡುತ್ತಿದ್ದು, 3 ಓವರ್ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ 2 ವಿಕೆಟ್ ಕಳೆದುಕೊಂಡು 7 ರನ್ ಕಲೆಹಾಕಿದೆ.
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಕೆಎಲ್ ರಾಹುಲ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಇದನ್ನೂ ಓದಿ: IPL 2025 vs PSL 2025: ಐಪಿಎಲ್ಗೆ ಟಕ್ಕರ್ ಕೊಡಲು ಪಿಎಸ್ಎಲ್ ರೆಡಿ..!
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಉಸ್ಮಾನ್ ಖ್ವಾಜಾ, ನಾಥನ್ ಮೆಕ್‌ಸ್ವೀನಿ, ಮಾರ್ನಸ್ ಲ್ಯಾಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಝಲ್‌ವುಡ್.