IND vs ENG: ಅಜೇಯ 179 ರನ್ ಸಿಡಿಸಿದ ಜೈಸ್ವಾಲ್; ಮೊದಲ ದಿನದಾಟಕ್ಕೆ ಭಾರತ 336/6
IND vs ENG: ವಿಶಾಖಪಟ್ಟಣಂನ ವೈಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಮೊದಲ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 336 ರನ್ ಕಲೆಹಾಕಿದೆ.
ವಿಶಾಖಪಟ್ಟಣಂನ ವೈಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ (Team India) ಮೊದಲ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 336 ರನ್ ಕಲೆಹಾಕಿದೆ. ತಂಡದ ಪರ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ (Yashasvi Jaiswal) ಅಜೇಯ 179 ರನ್ ಕಲೆಹಾಕಿದ್ದರೆ, ಅನುಭವಿ ಆರ್ ಅಶ್ವಿನ್ (R Ashwin) 5 ರನ್ ಕಲೆಹಾಕಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್ ಪರ ಚೊಚ್ಚಲ ಪಂದ್ಯವನ್ನಾಡುತ್ತಿರುವ ಶೋಯೆಬ್ ಬಸೀರ್ ಹಾಗೂ ರೆಹಾನ್ ಅಹ್ಮದ್ ತಲಾ 2 ವಿಕೆಟ್ ಪಡೆದರೆ, ಅನುಭವಿ ಬೇಗಿ ಜೇಮ್ಸ್ ಅಂಡರ್ಸನ್ ಹಾಗೂ ಕಳೆದ ಪಂದ್ಯದ ಹೀರೋ ಟಾಮ್ ಹಾರ್ಟ್ಲಿ ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಮತ್ತೆ ಎಡವಿದ ತಂಡದ ಟಾಪ್ ಆರ್ಡರ್
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ಪರ ಆರಂಭಿಕ ಯಶಸ್ವಿ ಜೈಸ್ವಾಲ್ 257 ಎಸೆತಗಳಲ್ಲಿ 17 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ 179 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ಆದರೆ ತಂಡದ ಟಾಪ್ ಆರ್ಡರ್ ಈ ಪಂದ್ಯದಲ್ಲೂ ಕೈಕೊಟ್ಟಿತು. ಜೈಸ್ವಾಲ್ ಹೊರತುಪಡಿಸಿ ತಂಡದ ಇತರ ಬ್ಯಾಟ್ಸ್‌ಮನ್‌ಗಳು ಉತ್ತಮ ಆರಂಭ ಪಡೆದ ನಂತರವೂ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ವಿಫಲರಾದರು. ಈ ಸರಣಿಯಲ್ಲಿ ರನ್ ಬರ ಎದುರಿಸುತ್ತಿರುವ ನಾಯಕ ರೋಹಿತ್ ಶರ್ಮಾ 14 ರನ್ ಗಳಿಸಿ ಔಟಾದರೆ, ಮೂರನೇ ಕ್ರಮಾಂಕದಲ್ಲಿ ಬಂದ ಶುಭ್ಮನ್ ಗಿಲ್ ಕೂಡ 34 ರನ್ಗಳಿಗೆ ಸುಸ್ತಾದರು. ಶ್ರೇಯಸ್ ಅಯ್ಯರ್ ಕೂಡ 27 ರನ್ ಗಳಿಸಿ, 30ಕ್ಕಿಂತ ಕಡಿಮೆ ರನ್ ಕಲೆಹಾಕುವ ತಮ್ಮ ಎಂದಿನ ಸಂಪ್ರದಾಯವನ್ನು ಮುಂದುವರೆಸಿದರು.
ದಿನದಾಟದಂತ್ಯಕ್ಕೆ ಭಾರತ
Stumps on Day 1 of the 2nd Test.
Yashasvi Jaiswal batting beautifully on 179*
Scorecard – https://t.co/X85JZGt0EV #INDvENG @IDFCFIRSTBank pic.twitter.com/XlRqDI8Sgt
— BCCI (@BCCI) February 2, 2024
ಜೈಸ್ವಾಲ್ ಅಜೇಯ 179 ರನ್
ಆದರೆ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ರಜತ್ ಪಾಟಿದಾರ್, ಶತಕ ವೀರ ಜೈಸ್ವಾಲ್ಗೆ ಉತ್ತಮ ಸಾಥ್ ನೀಡಿದಲ್ಲದೆ, 32 ರನ್ ಕಲೆಹಾಕಿ ದುರಾದೃಷ್ಟಕರ ರೀತಿಯಲ್ಲಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಅಕ್ಷರ್ ಪಟೇಲ್ 27 ರನ್ಗಳಿಗೆ ವಿಕೆಟ್ ಒಪ್ಪಿಸಿದರೆ, ವಿಕೆಟ್ ಕೀಪರ್ ಬ್ಯಾಟ್ಸನ್ ಶ್ರೀಕರ್ ಭರತ್ ಬೇಡದ ಶಾಟ್ ಆಡಿ 17 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು. ಆದರೆ ತಂಡದ ಪರ ಏಕಾಂಗಿ ಹೋರಾಟ ನಡೆಸುತ್ತಿರುವ ಜೈಸ್ವಾಲ್ ದ್ವಿಶತಕದಂಚಿನಲ್ಲಿದ್ದು, 179 ರನ್ ಕಲೆಹಾಕುವ ಮೂಲಕ 172 ರನ್ಗಳ ತಮ್ಮ ಹಳೆಯ ದಾಖಲೆಯನ್ನೂ ಸಹ ಮುರಿದಿದ್ದಾರೆ. ಈ ಹಿಂದೆ ವೆಸ್ಟ್ ಇಂಡೀಸ್ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 172 ರನ್ಗಳ ಅತ್ಯಧಿಕ ಇನ್ನಿಂಗ್ಸ್ ಆಡಿದ್ದ ಜೈಸ್ವಾಲ್, ಈ ಪಂದ್ಯದಲ್ಲಿ ಅಜೇಯ 179 ರನ್ ಸಿಡಿಸಿ ತಮ್ಮದೆ ಹಳೆಯ ದಾಖಲೆಯನ್ನು ಮುರಿದಿದ್ದಾರೆ.
ಉಭಯ ತಂಡಗಳು
ಇಂಗ್ಲೆಂಡ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಝಾಕ್ ಕ್ರೌಲಿ, ಬೆನ್ ಡಕೆಟ್, ಒಲ್ಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋ, ಬೆನ್ ಫೋಕ್ಸ್ (ವಿಕೆಟ್ ಕೀಪರ್), ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ, ಶೋಯೆಬ್ ಬಶೀರ್ ಮತ್ತು ಜೇಮ್ಸ್ ಆಂಡರ್ಸನ್.
ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ಶ್ರೀಕರ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ಮುಖೇಶ್ ಕುಮಾರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:35 pm, Fri, 2 February 24