CCL 10: ಫೆ.23ರಂದು ಸಿನಿ ತಾರೆಯರ ಕ್ರಿಕೆಟ್ ಹಬ್ಬ ಸಿಸಿಎಲ್ ಶುರು; ‘ಜಿಯೋ ಸಿನಿಮಾ’ ಮೂಲಕ ಪ್ರಸಾರ
ಕ್ರಿಕೆಟ್ ಮತ್ತು ಮನರಂಜನೆಯ ಅಪರೂಪದ ಕಾಂಬಿನೇಷನ್ ಆಗಿರುವ ‘ಸೆಲೆಬ್ರಿಟಿ ಕ್ರಿಕೆಟ್ ಲೀಗ್’ (ಸಿಸಿಎಲ್) ಪಂದ್ಯಗಳನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ. 10ನೇ ಸೀಸನ್ ‘ಸಿಸಿಎಲ್’ ಫೆಬ್ರವರಿ 23ರಿಂದ ಶುರುವಾಗಲಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಇದು ಪ್ರಸಾರ ಆಗಲಿದೆ. ಭಾರತದ ಎಂಟು ಭಾಷೆಗಳ ಚಿತ್ರರಂಗದ ಸೆಲೆಬ್ರಿಟಿಗಳು ಸಿಸಿಎಲ್‌ನಲ್ಲಿ ಆಟ ಆಡಲಿದ್ದಾರೆ. ಆ ಕುರಿತು ಇಲ್ಲಿದೆ ವಿವರ..
ಭಾರತೀಯ ಚಿತ್ರರಂಗದ ಖ್ಯಾತ ನಟರನ್ನು ಒಂದೆಡೆ ಸೇರಿಸುವ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (Celebrity Cricket League) ಎಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಕ್ರೇಜ್. ಈ ಬಾರಿ ಸಿಸಿಎಲ್ (CCL) ಜೊತೆ ಒಟಿಟಿ ಪ್ಲಾಟ್ಫಾರ್ಮ್ ‘ಜಿಯೋ ಸಿನಿಮಾ’ ಕೈ ಜೋಡಿಸಿದೆ. ಅಂದರೆ, ಫೆಬ್ರವರಿ 23ರಿಂದ ಶುರುವಾಗಲಿರುವ ಸಿಸಿಎಲ್ನ ಎಲ್ಲ ಪಂದ್ಯಗಳು ‘ಜಿಯೋ ಸಿನಿಮಾ’ (Jio Cinema) ಮೂಲಕ ನೇರವಾಗಿ ಪ್ರಸಾರ ಆಗಲಿವೆ. 4 ವೀಕೆಂಡ್ಗಳಲ್ಲಿ ನಡೆಯುವ ‘ಸಿಸಿಎಲ್ 10ನೇ ಸೀಸನ್’ನಲ್ಲಿ 20 ಪಂದ್ಯಗಳು ಇರಲಿವೆ. ಕ್ರಿಕೆಟ್ ಪ್ರಿಯರು ಮಾತ್ರವಲ್ಲದೇ, ಸಿನಿಮಾಸಕ್ತರು ಕುತೂಹಲದಿಂದ ವೀಕ್ಷಿಸುವ ಈ ಕ್ರಿಕೆಟ್ ಲೀಗ್ ಅನ್ನು ಪ್ರೇಕ್ಷಕರಿಗೆ ನೇರವಾಗಿ ತಲುಪಿಸಲು ‘ಜಿಯೋ ಸಿನಿಮಾ’ ಒಟಿಟಿ ಸಜ್ಜಾಗಿದೆ.
2011ರಲ್ಲಿ ಪ್ರಾರಂಭವಾದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಂತರದ ವರ್ಷಗಳಲ್ಲಿ ಬಹಳ ಜನಪ್ರಿಯತೆ ಪಡೆಯಿತು. ಈಗ ಈ ಪಂದ್ಯಗಳಿಗೆ ದೊಡ್ಡ ವೀಕ್ಷಕವರ್ಗ ಇದೆ. ಇದು ಕ್ರೀಡೆ ಮತ್ತು ಮನರಂಜನೆಯ ಸಮ್ಮಿಲನದ ರೀತಿ ಇದೆ. ಕಳೆದ ವರ್ಷ ಟಿವಿ ಹಾಗೂ ಡಿಜಿಟಲ್ ಮಾಧ್ಯಮದ ಮೂಲಕ ಪ್ರಸಾರ ಕಂಡಿದ್ದ ಸಿಸಿಎಲ್ ಪಂದ್ಯಗಳನ್ನು ದೇಶದಾದ್ಯಂತ 25 ಕೋಟಿಗೂ ಅಧಿಕ ಜನರು ವೀಕ್ಷಿಸಿದ್ದರು. ಸಿಸಿಎಲ್ಗೆ ಎಷ್ಟು ಜನಪ್ರಿಯತೆ ಇದೆ ಎಂಬುದಕ್ಕೆ ಈ ಸಂಖ್ಯೆಯೇ ಸಾಕ್ಷಿಯಾಗಿದೆ.
ಇದನ್ನೂ ಓದಿ: CCL 2024: ಸಿಸಿಎಲ್‌ನಲ್ಲಿ ಅಬ್ಬರಿಸಲು ಸಜ್ಜಾದ ಪಂಜಾಬ್ ದಿ ಶೇರ್
ಭಾರತೀಯ ಚಿತ್ರರಂಗ ಎಂದರೆ ಬಾಲಿವುಡ್ ಮಾತ್ರವಲ್ಲ. ಹಲವು ಭಾಷೆಯ ಚಿತ್ರರಂಗಗಳು ಸಕ್ರಿಯವಾಗಿವೆ. ಆ ಎಲ್ಲ ಚಿತ್ರರಂಗವನ್ನು ಒಂದುಗೂಡಿಸುವ ಪಂದ್ಯವೇ ಸಿಸಿಎಲ್. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಪಂಜಾಬ್, ಭೋಜಪುರಿ, ಬೆಂಗಾಲಿ ಸೇರಿ 8 ತಂಡಗಳು ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಭಾಗವಹಿಸಲಿವೆ. 200ಕ್ಕೂ ಅಧಿಕ ಜನಪ್ರಿಯ ಸೆಲೆಬ್ರಿಟಿಗಳು ಇದರಲ್ಲಿ ಭಾಗಿಯಾಗಿ ಪ್ರೇಕ್ಷಕರಿಗೆ ಮನರಂಜನೆ ನೀಡಲಿದ್ದಾರೆ. ಸ್ಟಾರ್ ನಟರು ಕ್ರಿಕೆಟ್ ಮೈದಾನಕ್ಕೆ ಇಳಿಯಲು ಸಜ್ಜಾಗುತ್ತಿದ್ದಾರೆ.
ಸೆಲೆಬ್ರಿಟಿ ಕ್ರಿಕೆಟ್ ಲೀಗ್ ತಂಡಗಳ ವಿವರ:
‘ಮುಂಬೈ ಹೀರೋಸ್’ ತಂಡಕ್ಕೆ ನಟ ಸಲ್ಮಾನ್ ಖಾನ್ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು, ರಿತೇಶ್ ದೇಶಮುಖ್ ಕ್ಯಾಪ್ಟನ್ ಆಗಿದ್ದಾರೆ. ಸೋಹೈಲ್ ಖಾನ್ ಅವರು ಈ ತಂಡದ ಮಾಲೀಕ. ‘ತೆಲುಗು ವಾರಿಯರ್ಸ್’ ಟೀಮ್ಗೆ ವೆಂಕಟೇಶ್ ಅವರು ಬ್ರ್ಯಾಂಡ್ ಅಂಬಾಸಿಡರ್. ಆ ತಂಡಕ್ಕೆ ಅಖಿಲ್ ಅಕ್ಕಿನೇನಿ ನಾಯಕನಾಗಿದ್ದಾರೆ. ‘ಕರ್ನಾಟಕ ಬುಲ್ಡೋಜರ್ಸ್’ ಟೀಮ್ಗೆ ಕಿಚ್ಚ ಸುದೀಪ್ ಕ್ಯಾಪ್ಟನ್ ಆಗಿದ್ದಾರೆ. ಮೋಹನ್‌ಲಾಲ್ ಸಹ-ಮಾಲೀಕರಾಗಿರುವ ‘ಕೇರಳ ಸ್ಟ್ರೈಕರ್ಸ್’ ತಂಡವನ್ನು ಕ್ಯಾಪ್ಟನ್ ಇಂದ್ರಜಿತ್ ಮುನ್ನಡೆಸಲಿದ್ದಾರೆ. ‘ಭೋಜಪುರಿ ದಬಾಂಗ್ಸ್’ ಟೀಮ್ಗೆ ಮನೋಜ್ ತಿವಾರಿ ನಾಯಕ. ಸೋನು ಸೂದ್ ಅವರು ‘ಪಂಜಾಬ್ ದೆ ಶೇರ್’ ತಂಡಕ್ಕೆ ನಾಯಕರಾಗಿದ್ದಾರೆ. ಬೋನಿ ಕಪೂರ್ ಒಡೆತನದ ‘ಬೆಂಗಾಲ್ ಟೈಗರ್ಸ್’ ಟೀಮ್ಗೆ ಜಿಸ್ಸು ಸೇನ್‌ಗುಪ್ತ ಕ್ಯಾಪ್ಟನ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ