KL Rahul: ಇಲ್ಲಿ ನಮ್ಮ ಒಬ್ಬ ಆಟಗಾರನನ್ನು ಕೆಣಕಿದ್ರೆ ನಾವು 11 ಆಟಗಾರರು ತಿರುಗಿ ಬೀಳುತ್ತೇವೆ: ಕೆ.ಎಲ್ ರಾಹುಲ್

ಹೌದು, ಲಾರ್ಡ್ಸ್ ಟೆಸ್ಟ್‌ನ ಕೊನೆಯ ದಿನವೂ ಉಭಯ ತಂಡಗಳ ಆಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು. ಜಸ್​ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಕ್ರೀಸ್ ನಲ್ಲಿದ್ದಾಗ, ಆಂಗ್ಲ ಆಟಗಾರರು ಇಬ್ಬರ ಬಗ್ಗೆ ಮೌಖಿಕ ಟೀಕೆಗಳನ್ನು ಮಾಡಿದರು.

KL Rahul: ಇಲ್ಲಿ ನಮ್ಮ ಒಬ್ಬ ಆಟಗಾರನನ್ನು ಕೆಣಕಿದ್ರೆ ನಾವು 11 ಆಟಗಾರರು ತಿರುಗಿ ಬೀಳುತ್ತೇವೆ: ಕೆ.ಎಲ್ ರಾಹುಲ್
KL Rahul
Follow us
TV9 Web
| Updated By: Vinay Bhat

Updated on: Aug 17, 2021 | 8:34 AM

India vs England: ವೇಗಿಗಳ ಬ್ಯಾಟಿಂಗ್ ಮತ್ತು ಬೌಲರ್​ಗಳ ಅಮೋಘ ಪ್ರದರ್ಶನದಿಂದ ಟೀಮ್ ಇಂಡಿಯಾ (Team India) ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯದಲ್ಲಿ 151 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಟಾಪ್ ಆರ್ಡರ್ ಬ್ಯಾಟ್ಸ್​ಮನ್​ಗಳೂ ನಾಚುವಂತೆ ಬ್ಯಾಟ್ ಬೀಸಿದ ಮೊಹಮ್ಮದ್ ಶಮಿ (Mohammed Shami) ಮತ್ತು ಜಸ್​ಪ್ರೀತ್ ಬುಮ್ರಾ (Jasprit Bumrah) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಮೂಲಕ ಕ್ರಿಕೆಟ್ ಕಾಶಿ ಲಾರ್ಡ್ಸ್ (Lords) ಮೈದಾನದಲ್ಲಿ ತನ್ನ 3ನೇ ಟೆಸ್ಟ್ ಹಾಗೂ 7 ವರ್ಷಗಳ ಬಳಿಕ ಜಯ ದಾಖಲಿಸಿತು. ಇದರ ನಡುವೆ ಭಾರತೀಯ ಆಟಗಾರರಿಗೆ ಇಂಗ್ಲೆಂಡ್ ಪ್ಲೇಯರ್ಸ್ ಸ್ಲೆಡ್ಜಿಂಗ್ ಮೂಲಕ ಕಾಟ ಕೊಟ್ಟಿದ್ದು ಅಷ್ಟಿಟ್ಟಲ್ಲ.

ಹೌದು, ಲಾರ್ಡ್ಸ್ ಟೆಸ್ಟ್‌ನ ಕೊನೆಯ ದಿನವೂ ಉಭಯ ತಂಡಗಳ ಆಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು. ಜಸ್​ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಕ್ರೀಸ್ ನಲ್ಲಿದ್ದಾಗ, ಆಂಗ್ಲ ಆಟಗಾರರು ಇಬ್ಬರ ಬಗ್ಗೆ ಮೌಖಿಕ ಟೀಕೆಗಳನ್ನು ಮಾಡಿದರು. ಆದರೆ, ಇವರಿಬ್ಬರು ಮಾತಿನ ಜೊತೆಗೆ ಬ್ಯಾಟ್ ಮೂಲಕ ಪ್ರತಿಕ್ರಿಯಿಸಿದರು. ಬುಮ್ರಾ ಮತ್ತು ಶಮಿ ಬಗ್ಗೆ ಮೌಖಿಕ ಟೀಕೆಗಳನ್ನು ನೋಡಿದ ನಾಯಕ ವಿರಾಟ್ ಕೊಹ್ಲಿ ಕೂಡ ಡ್ರೆಸ್ಸಿಂಗ್ ರೂಮಿನಲ್ಲೇ ಅಸಮಾಧಾನಗೊಂಡಿರುವುದು ಕಂಡುಬಂತು.

ಪಂದ್ಯ ಮುಗಿದ ಬಳಿಕ ಸ್ಲೆಡ್ಜಿಂಗ್ ಬಗ್ಗೆ ಮಾತನಾಡಿದ ಟೀಮ್ ಇಂಡಿಯಾ ಓಪನರ್ ಕೆ. ಎಲ್ ರಾಹುಲ್, “ನಮಗೆ ಸ್ಲೆಡ್ಜಿಂಗ್ ಬಗ್ಗೆ ಯಾವುದೇ ಭಯವಿಲ್ಲ. ಇಲ್ಲಿ ನಮ್ಮ ಒಬ್ಬ ಆಟಗಾರನನ್ನು ಕೆಣಕಿದ್ರೆ ನಾವು 11 ಆಟಗಾರರು ತಿರುಗಿ ಬೀಳುತ್ತೇವೆ” ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.

ಎರಡನೇ ಟೆಸ್ಟ್‌ ಪಂದ್ಯದ ಮೂರನೇ ದಿನವೂ ಇಂಗ್ಲೆಂಡ್​ನ ಸ್ಥಳೀಯ ಅಭಿಮಾನಿಗಳ ಗುಂಪೊಂದು ಅನುಚಿತ ವರ್ತನೆ ತೋರಿತ್ತು. ಥರ್ಡ್‌ ಮ್ಯಾನ್‌ ಬೌಂಡರಿ ಬಳಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ರಾಹುಲ್‌ ಮೇಲೆ ಪ್ರೇಕ್ಷಕರು ಬಾಟಲ್‌ ಕಾರ್ಕ್‌ಗಳನ್ನು ಎಸೆದು ದುರ್ವರ್ತನೆ ಮೆರೆದಿದ್ದರು.

ಈ ಲಾರ್ಡ್ಸ್ ಟೆಸ್ಟ್ ಪಂದ್ಯ ಭಾರತೀಯರ ಮನದಲ್ಲಿ ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿದೆ. ಅಂತಿಮ ದಿನದಾಟದಲ್ಲಿ ಹೆಚ್ಚಿನ ಅಪಾಯದಲ್ಲಿದ್ದ ಭಾರತವನ್ನು ಪಾರುಮಾಡಿದ್ದು ಶಮಿ ಮತ್ತು ಬುಮ್ರಾ. 6ಕ್ಕೆ 181 ರನ್‌ ಮಾಡಿ ತೀವ್ರ ಸಂಕಟದಲ್ಲಿದ್ದ ಕೊಹ್ಲಿ ಪಡೆ ಅಂತಿಮ ದಿನ ರಿಷಭ್‌ ಪಂತ್‌ ಮೇಲೆ ಭಾರೀ ನಿರೀಕ್ಷೆ ಇರಿಸಿತ್ತು. ಆದರೆ ಸ್ಕೋರ್‌ 197 ತಲುಪಿದಾಗ ಪಂತ್‌ (22) ಆಟ ಮುಗಿಸಿ ವಾಪಸಾದರು. ಇಶಾಂತ್‌ ಶರ್ಮ (16) ಕೂಡ ಇವರ ಹಾದಿ ಹಿಡಿದರು. 209ಕ್ಕೆ ಭಾರತದ 8 ವಿಕೆಟ್‌ ಬಿದ್ದಾಗ ಇಂಗ್ಲೆಂಡ್‌ ಕೈ ಮೇಲಾಗಿತ್ತು.

ಆದರೆ ಈ ಸಂದರ್ಭ ಯಾರೂ ಊಹಿಸಿರದ ರೀತಿ ಇನ್ನಿಂಗ್ಸ್ ಕಟ್ಟಿ ಭಾರತದ ಮಾನ ಉಳಿಸಿದ್ದು ಶಮಿ-ಬುಮ್ರಾ ಬ್ಯಾಟಿಂಗ್. 120 ಎಸೆತಗಳನ್ನು ನಿಭಾಯಿಸಿದ ಈ ಜೋಡಿ ಇಂಗ್ಲೆಂಡ್‌ ಬೌಲಿಂಗಿನ ಎಲ್ಲ ರೀತಿಯ ತಂತ್ರಕ್ಕೂ ತಕ್ಕ ಉತ್ತರ ಕೊಟ್ಟಿತು; ಮುರಿಯದ 9ನೇ ವಿಕೆಟಿಗೆ 89 ರನ್‌ ಪೇರಿಸಿತು. ಈ ಅದ್ಭುತವಾಗ ಜೊತೆಯಾಟದ ವೇಳೆ ಶಮಿ ದ್ವಿತೀಯ ಅರ್ಧ ಶತಕದ ಸಂಭ್ರಮ ಆಚರಿಸಿದರು. 70 ಎಸೆತ ಎದುರಿಸಿದ ಶಮಿ 5 ಫೋರ್‌ ಹಾಗೂ ಒಂದು ಸಿಕ್ಸರ್‌ ಸಿಡಿಸಿ ಅಜೇಯ 56 ರನ್‌ ಕೊಡುಗೆ ಸಲ್ಲಿಸಿದರು. ಬುಮ್ರಾ ಗಳಿಕೆ 64 ಎಸೆತಗಳಿಂದ ಅಜೇಯ 34 ರನ್‌.

ಭಾರತ 272 ರನ್​ಗಳ ಟಾರ್ಗೆಟ್ ನೀಡಿತು. ಆದರೆ, ಇಂಗ್ಲೆಂಡ್ ಭಾರತೀಯ ಬೌಲಿಂಗ್ ದಾಳಿಗೆ ನಲುಗಿ ಹೋಯಿತು. ಕನಿಷ್ಠ ಡ್ರಾ ಮಾಡುವಲ್ಲೂ ಯಶಸ್ವಿಯಾಗದ ರೂಟ್ ಪಡೆ 120 ರನ್​ಗೆ ಸರ್ವಪತನ ಕಂಡಿತು. ಭಾರತ 151 ರನ್​ಗಳ ಅಮೋಘ ಜಯದೊಂದಿಗೆ 1-0 ಮುನ್ನಡೆ ಸಾಧಿಸಿ ಲಾರ್ಡ್ಸ್​ನಲ್ಲಿ ಐತಿಹಾಸಿಕ ಜಯ ಸಾಧಿಸಿತು.

India vs England: ವಿರಾಟ್ ಕೊಹ್ಲಿ ತೆಗೆದುಕೊಂಡ ಆ ಒಂದು ನಿರ್ಧಾರ ಪಂದ್ಯದ ಗತಿಯನ್ನೇ ಬದಲಾಯಿಸಿತು

ಇಂಗ್ಲೆಂಡ್ ಅಳವಡಿಸಿದ ತಂತ್ರಗಾರಿಕೆ ಆಘಾತಕಾರಿಯಾಗಿದೆ, ಟೆಸ್ಟ್ ಗೆಲ್ಲಲು ಕೇವಲ ಇಂಡಿಯಾಗೆ ಮಾತ್ರ ಚಾನ್ಸಿದೆ: ವಾರ್ನ್

(India vs England 2nd Test Opener KL Rahul spoke about on Indian players sledging in England)