
ಲೀಡ್ಸ್ ಟೆಸ್ಟ್ ಪಂದ್ಯ ಸೋತಿರುವ ಟೀಂ ಇಂಡಿಯಾ (Team India) ಇದೀಗ ಎರಡನೇ ಟೆಸ್ಟ್ ಮೇಲೆ ಗಮನ ಹರಿಸುತ್ತಿದೆ. ಉಭಯ ತಂಡಗಳ ನಡುವೆ ಜುಲೈ 2 ರಂದು ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್ (Edgbaston Test Match) ಮೈದಾನದಲ್ಲಿ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್ ತಂಡವನ್ನು ಯಾವುದೇ ಬೆಲೆ ತೆತ್ತಾದರೂ ಸೋಲಿಸಬೇಕಾದ ಒತ್ತಡದಲಿದೆ. ಆದಾಗ್ಯೂ, ತಂಡದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಈ ಪಂದ್ಯದಲ್ಲಿ ಆಡುವುದಿಲ್ಲ ಎಂದು ಹೇಳಲಾಗುತ್ತಿದೆ. ಕೆಲಸದ ಹೊರೆ ನಿರ್ವಹಣೆಗಾಗಿ ಬುಮ್ರಾಗೆ ಈ ಪಂದ್ಯದಿಂದ ವಿಶ್ರಾಂತಿ ನೀಡಲಾಗುತ್ತಿದೆ ಎಂಬುದು ಸುದ್ದಿ. ಆದರೆ ಬುಮ್ರಾ ಹೊರತಾಗಿ, ಮತ್ತೊಬ್ಬ ವೇಗದ ಬೌಲರ್ ಕನ್ನಡಿಗ ಪ್ರಸಿದ್ಧ್ ಕೃಷ್ಣ (Prasidh Krishna) ಕೂಡ ಈ ಪಂದ್ಯದಿಂದ ಹೊರಗುಳಿಯಬಹುದು ಎಂದು ವರದಿಯಾಗಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಜುಲೈ 2 ರಿಂದ ಎಡ್ಜ್‌ಬಾಸ್ಟನ್‌ನಲ್ಲಿ ಆರಂಭವಾಗಲಿದೆ. ಇದಕ್ಕಾಗಿ ಟೀಂ ಇಂಡಿಯಾ ಈಗಾಗಲೇ ತಯಾರಿ ಆರಂಭಿಸಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಮೇಲ್ವಿಚಾರಣೆಯಲ್ಲಿ, ಇಡೀ ತಂಡವು ಟೆಸ್ಟ್ ಪಂದ್ಯಕ್ಕೆ 5-6 ದಿನಗಳ ಮೊದಲು ಎಡ್ಜ್‌ಬಾಸ್ಟನ್‌ನಲ್ಲಿ ಬೆವರು ಸುರಿಸಲಾರಂಭಿಸಿದೆ. ಜೂನ್ 27, ಶುಕ್ರವಾರದಂದು ಟೀಂ ಇಂಡಿಯಾದ ಮೊದಲ ಅಭ್ಯಾಸ ಅವಧಿಯಲ್ಲಿ, ಫೀಲ್ಡಿಂಗ್ ಜೊತೆಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ಅಭ್ಯಾಸ ನಡೆಸಿತು. ಇದರೊಂದಿಗೆ, ಫಿಟ್‌ನೆಸ್ ತರಬೇತಿಯನ್ನು ಸಹ ಮಾಡಲಾಯಿತು.
ಆದರೆ ರೆವ್‌ಸ್ಪೋರ್ಟ್ಸ್ ವರದಿಯ ಪ್ರಕಾರ, ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಟೀಂ ಇಂಡಿಯಾದ ಮೊದಲ ಅಭ್ಯಾಸದ ಸಮಯದಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಕಾಣಿಸಿಕೊಂಡಿಲ್ಲ. ಕೃಷ್ಣ ಜೊತೆಗೆ ಬುಮ್ರಾ ಕೂಡ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಲಿಲ್ಲ. ಈ ಇಬ್ಬರೂ ಆಟಗಾರರು ಫಿಟ್‌ನೆಸ್ ಡ್ರಿಲ್‌ಗಳಲ್ಲಿ ಮಾತ್ರ ನಿರತರಾಗಿದ್ದರು ಎಂದು ವರದಿಯಾಗಿದೆ. ಈ ಇಬ್ಬರನ್ನು ಹೊರತುಪಡಿಸಿ, ಮೊಹಮ್ಮದ್ ಸಿರಾಜ್ ಕೂಡ ಬೌಲಿಂಗ್ ಬಿಟ್ಟು ಬ್ಯಾಟಿಂಗ್ ಅಭ್ಯಾಸ ಮಾಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮೊದಲ ಅಭ್ಯಾಸಕ್ಕೆ ಬುಮ್ರಾ ಜೊತೆಗೆ ಪ್ರಸಿದ್ಧ್ ಕೂಡ ಗೈರಾಗಿರುವುದು ಮುಂದಿನ ಟೆಸ್ಟ್ ಪಂದ್ಯದಿಂದ ಇವರಿಬ್ಬರು ಹೊರಗುಳಿಯುತ್ತಾರಾ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬುಮ್ರಾ ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಿಂದ ಹೊರಗುಳಿಯುವುದು ಖಚಿತ. ಏಕೆಂದರೆ ಇದು ಈಗಾಗಲೇ ಅವರ ಕೆಲಸದ ಹೊರೆಯನ್ನು ನಿರ್ವಹಿಸುವ ಯೋಜನೆಯ ಭಾಗವಾಗಿದೆ. ಹೀಗಾಗಿ ಬುಮ್ರಾ ಅಭ್ಯಾಸದಿಂದ ಹೊರಗುಳಿದರೆ ಯಾವುದೇ ಅಚ್ಚರಿಯಿಲ್ಲ. ಆದರೆ ಪ್ರಸಿದ್ಧ್ ಬೌಲಿಂಗ್ ಮಾಡದಿರುವುದು ಅವರನ್ನು ಆಡುವ 11 ರ ಬಳಗದಿಂದ ಕೈಬಿಡಬಹುದೇ ಎಂಬ ಅನುಮಾನವನ್ನು ಖಂಡಿತವಾಗಿಯೂ ಹುಟ್ಟುಹಾಕುತ್ತದೆ.
IND vs ENG: ಬೇಡ ಮಗ.. ಕನ್ನಡದಲ್ಲಿ ಮಾತನಾಡಿದ ರಾಹುಲ್- ಪ್ರಸಿದ್ಧ್; ವಿಡಿಯೋ ನೋಡಿ
ಇದಕ್ಕೆ ಒಂದು ಕಾರಣ ಲೀಡ್ಸ್ ಟೆಸ್ಟ್‌ನಲ್ಲಿ ಅವರ ಪ್ರದರ್ಶನ. ಕಳೆದ ಪಂದ್ಯದಲ್ಲಿ, ಪ್ರಸಿದ್ಧ್ 5 ವಿಕೆಟ್‌ಗಳನ್ನು ಕಬಳಿಸಿದರಾದರೂ ಪ್ರತಿ ಓವರ್‌ಗೆ 6 ರನ್‌ಗಳ ದರದಲ್ಲಿ ರನ್‌ಗಳನ್ನು ಬಿಟ್ಟುಕೊಟ್ಟರು. ಮೊದಲ ಇನ್ನಿಂಗ್ಸ್‌ನಲ್ಲಿ, ಅವರು 20 ಓವರ್‌ಗಳಲ್ಲಿ 128 ರನ್‌ಗಳನ್ನು ಬಿಟ್ಟುಕೊಟ್ಟರೆ, ಎರಡನೇ ಇನ್ನಿಂಗ್ಸ್‌ನಲ್ಲಿ 15 ಓವರ್‌ಗಳಲ್ಲಿ 92 ರನ್‌ಗಳನ್ನು ಬಿಟ್ಟುಕೊಟ್ಟರು. ಹೀಗಾಗಿ ಅವರು ಪ್ಲೇಯಿಂಗ್ -11 ರಲ್ಲಿ ಇರುವ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ