
ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಿನ ಏಕದಿನ ಸರಣಿಗಾಗಿ ಬಿಸಿಸಿಐ ಇತ್ತೀಚೆಗಷ್ಟೇ ಭಾರತ ಏಕದಿನ ತಂಡವನ್ನು ಪ್ರಕಟಿಸಿತ್ತು. ಶುಭ್ಮನ್ ಗಿಲ್ ನಾಯಕತ್ವದಲ್ಲಿ 15 ಸದಸ್ಯರ ಬಲಿಷ್ಠ ತಂಡವನ್ನು ಇಂಗ್ಲೆಂಡ್ ಪ್ರವಾಸಕ್ಕೆ ಬಿಸಿಸಿಐ ಆಯ್ಕೆ ಮಾಡಿತ್ತು. ಈ 15 ಸದಸ್ಯರ ಪಟ್ಟಿಯಲ್ಲಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಕೂಡ ಸೇರಿದ್ದರು. ಆದರೆ ಕೊಹ್ಲಿ ಸರಣಿಯಲ್ಲಿ ಆಡುವುದು ಅವರ ಫಿಟ್ನೆಸ್ ಫಲಿತಾಂಶವನ್ನು ಅವಲಂಬಿಸಿರುತ್ತದೆ ಎಂದು ಬಿಸಿಸಿಐ ತಿಳಿಸಿತ್ತು. ಅದರಂತೆ ವಿರಾಟ್ ಕೊಹ್ಲಿ ಜೂನ್ 22 ರಂದು ಬೆಂಗಳೂರಿನಲ್ಲಿರುವ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರು. ಇದೀಗ ಅವರ ಫಿಟ್ನೆಸ್ ಫಲಿತಾಂಶವೂ ಹೊರಬಿದ್ದಿದ್ದು, ಕೊಹ್ಲಿ ಸಂಪೂರ್ಣವಾಗಿ ಫಿಟ್ ಆಗಿದ್ದು, ಏಕದಿನ ಸರಣಿಯಲ್ಲಿ ಆಡಲು ಗ್ರೀನ್ ಸಿಗ್ನಲ್ ಸಿಕ್ಕಿದೆ.
2026 ರ ಐಪಿಎಲ್ ಫೈನಲ್ ಪಂದ್ಯದ ವೇಳೆ ಕೊಹ್ಲಿ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯನ್ನು ಆಡಿರಲಿಲ್ಲ. ಅದಾದ ಬಳಿಕ ಇಂಗ್ಲೆಂಡ್ ಪ್ರವಾಸಕ್ಕೆ ಕೊಹ್ಲಿಯನ್ನು ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಗಾಯದಿಂದ ಬಳಲುತ್ತಿರುವ ವಿರಾಟ್ ಈ ಸರಣಿಯಿಂದಲೂ ಹೊರಗುಳಿಯಬಹುದೆಂದು ಅಭಿಮಾನಿಗಳು ಚಿಂತಿತರಾಗಿದ್ದರು. ಆದರೆ ಕೊಹ್ಲಿ ಸಂಪೂರ್ಣವಾಗಿ ಫಿಟ್ ಆಗಿದ್ದು, ಆಂಗ್ಲರ ನೆಲದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 54 ಶತಕಗಳನ್ನು ಗಳಿಸಿದ್ದಾರೆಯಾದರೂ ಇಂಗ್ಲೆಂಡ್ ನೆಲದಲ್ಲಿ ಕೇವಲ ಒಂದು ಏಕದಿನ ಶತಕವನ್ನಷ್ಟೇ ಬಾರಿಸಿದ್ದಾರೆ. ವಿರಾಟ್ ಕೊಹ್ಲಿ ಕೊನೆಯದಾಗಿ ಇಂಗ್ಲೆಂಡ್‌ನಲ್ಲಿ 15 ವರ್ಷಗಳ ಹಿಂದೆ ಅಂದರೆ, 2011 ರಲ್ಲಿ ಏಕದಿನ ಶತಕ ಬಾರಿಸಿದ್ದರು. ಕಾರ್ಡಿಫ್‌ನಲ್ಲಿ ನಡೆದ ಆ ಪಂದ್ಯದಲ್ಲಿ, ವಿರಾಟ್ ಕೊಹ್ಲಿ 93 ಎಸೆತಗಳಲ್ಲಿ 107 ರನ್ ಬಾರಿಸಿದರಾದರೂ ಟೀಂ ಇಂಡಿಯಾ ಆ ಪಂದ್ಯವನ್ನು ಸೋತಿತು. ಡಕ್ವರ್ತ್-ಲೂಯಿಸ್ ವಿಧಾನದ ಪ್ರಕಾರ, ಇಂಗ್ಲೆಂಡ್ ಆ ಪಂದ್ಯವನ್ನು ಗೆದ್ದಿತು. ಆದರೆ ಈಗ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಶತಕ ಸಿಡಿಸುವ ಮೂಲಕ ತಮ್ಮ ಏಕದಿನ ಶತಕದ ಬರವನ್ನು ನೀಗಿಸಿಕೊಳ್ಳುವುದರ ಜೊತೆಗೆ ತಂಡವನ್ನು ಸರಣಿ ಗೆದ್ದುಕೊಡುವ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಇಂಗ್ಲೆಂಡ್‌ನಲ್ಲಿ ವಿರಾಟ್ ಕೊಹ್ಲಿ ದಾಖಲೆ ಅದ್ಭುತವಾಗಿದೆ. ಇಂಗ್ಲೆಂಡ್‌ನಲ್ಲಿ ಒಟ್ಟು 33 ಏಕದಿನ ಪಂದ್ಯಗಳನ್ನು ಆಡಿದ್ದಾರುವ ಕೊಹ್ಲಿ, 51.88 ಸರಾಸರಿಯಲ್ಲಿ 1349 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 12 ಅರ್ಧಶತಕಗಳು ಸೇರಿವೆ. ಇದಲ್ಲದೆ ವಿರಾಟ್ ಕೊಹ್ಲಿ ಇಂಗ್ಲೆಂಡ್‌ನಲ್ಲಿ ಎರಡು ಬಾರಿ ಶೂನ್ಯಕ್ಕೂ ಔಟಾಗಿದ್ದಾರೆ.
ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಪ್ರಸ್ತತ ಅದ್ಭುತ ಫಾರ್ಮ್ನಲ್ಲಿದ್ದಾರೆ. ಕಳೆದ ಏಳು ಏಕದಿನ ಪಂದ್ಯಗಳಲ್ಲಿ ಅವರು ಮೂರು ಶತಕ ಮತ್ತು ಮೂರು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಈ ವರ್ಷ ಅವರು 80 ರ ಸರಾಸರಿಯಲ್ಲಿ 240 ರನ್ ಗಳಿಸಿದ್ದಾರೆ. ಕಳೆದ ವರ್ಷ ವಿರಾಟ್ 65.1 ರ ಸರಾಸರಿಯಲ್ಲಿ 651 ರನ್ ಕಲೆಹಾಕಿದ್ದರು.
IND vs ENG: ಕೊಹ್ಲಿ ಇನ್, ಹಾರ್ದಿಕ್ ಔಟ್; ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಏಕದಿನ ತಂಡ ಪ್ರಕಟ
ಭಾರತದ ತಂಡ: ಶುಭ್ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಕುಲ್ದೀಪ್ ಯಾದವ್, ಜಸ್ಪ್ರಿತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಗುರ್ನೂರ್ ಬ್ರಾರ್.