ವಿಶಾಖಪಟ್ಟಣಂ ಮತ್ತೊಂದು ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ಆಯೋಜಿಸಲು ಸಜ್ಜಾಗಿದೆ. ನಾಲ್ಕು ವರ್ಷಗಳ ನಂತರ VDCA – YSR ACA ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಫೆಬ್ರವರಿ 2 ರಿಂದ ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪೂರ್ವಸಿದ್ಧತಾ ಸಭೆ ಆಯೋಜಿಸಿದ್ದ ಆಂಧ್ರ ಕ್ರಿಕೆಟ್ ಸಂಸ್ಥೆ ಪಂದ್ಯದ ವಿವರಗಳನ್ನು ಬಹಿರಂಗಪಡಿಸಿದೆ. ವಿಶೇಷವಾಗಿ ಈ ಬಾರಿ ದಿನಕ್ಕೆ 2000 ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವಿರುತ್ತದೆ ಎಂದು ಎಸಿಎ ಈ ಸಂದರ್ಭದಲ್ಲಿ ಪ್ರಕಟಿಸಿದೆ.
ಸಂಘಟನಾ ಸಮಿತಿ ಅಧ್ಯಕ್ಷ, ಜಿಲ್ಲಾಧಿಕಾರಿ ಎ. ಮಲ್ಲಿಕಾರ್ಜುನ ಈ ಕುರಿತು ವಿವರ ಬಹಿರಂಗಪಡಿಸಿ, ಪಂದ್ಯ ವೀಕ್ಷಿಸಲು ಆಗಮಿಸುವ ದೇಶ-ವಿದೇಶಿ ಅಭಿಮಾನಿಗಳಿಗೆ ಯಾವುದೇ ಅನಾನುಕೂಲವೂ ಆಗದಂತೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು. ಜತೆಗೆ ಮೂರು ಹಂತದ ಭದ್ರತೆ, ಕುಡಿಯುವ ನೀರು, ವೈದ್ಯಕೀಯ ಸೌಲಭ್ಯ, ಸಮರ್ಪಕ ಸ್ಟಾಲ್‌ಗಳನ್ನು ನಿರ್ಮಿಸಲಾಗಿದ್ದು, ರಂಜನೀಯ ವಾತಾವರಣದಲ್ಲಿ ಪಂದ್ಯ ವೀಕ್ಷಿಸಲು ಸಕಲ ವ್ಯವಸ್ಥೆ ಮಾಡಲಾಗುತ್ತಿದೆ ಎಂದಿದ್ದಾರೆ.
IND vs AFG: ಅರ್ಧಶತಕ ಸಿಡಿಸಿದ ದುಬೆ; ಅಫ್ಘಾನ್ ವಿರುದ್ಧ ಭಾರತಕ್ಕೆ 6 ವಿಕೆಟ್ಗಳ ಸುಲಭ ಜಯ
ಎಸಿಎ ಅಪೆಕ್ಸ್ ಕೌನ್ಸಿಲ್ ಕಾರ್ಯದರ್ಶಿ ಎಸ್.ಆರ್.ಗೋಪಿನಾಥ ರೆಡ್ಡಿ ಮಾತನಾಡಿ, ದೂರದ ಊರುಗಳಿಂದ ಬರುವ ಕ್ರಿಕೆಟ್ ಪ್ರೇಮಿಗಳಿಗೆ ವಿಶೇಷ ಸಾರಿಗೆ ಸೌಲಭ್ಯ ಕಲ್ಪಿಸಲಾಗುವುದು. ಇದೇ ತಿಂಗಳ 15ರಿಂದ ಟೆಸ್ಟ್ ಪಂದ್ಯದ ಟಿಕೆಟ್‌ಗಳ ಮಾರಾಟ ಆರಂಭವಾಗಲಿದೆ. Paytm ಆ್ಯಪ್ ಮೂಲಕ ಆನ್‌ಲೈನ್‌ನಲ್ಲಿ ಮಾರಾಟ ಮಾಡಲಿದ್ದು, ಈ ಬಾರಿ ಸಂಪೂರ್ಣ ಡಿಜಿಟಲ್ ಟಿಕೆಟ್‌ಗಳನ್ನು ಒದಗಿಸಲಿದೆ ಎಂದು ಹೇಳಿದರು.
ಪ್ರತಿದಿನ 100, 200, 300, 500 ರೂಪಾಯಿಗಳ ಟಿಕೆಟ್‌ಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಾಗುವುದು. ಅಲ್ಲದೆ, ಐದು ದಿನಗಳವರೆಗೆ ಒಟ್ಟಿಗೆ ಟಿಕೆಟ್ ತೆಗೆದುಕೊಳ್ಳುವವರಿಗೆ 400, 800, 1,000, 1,500 ರೂ. ವರೆಗೆ ಇರಲಿದೆ ಎಂದರು.
ಟೆಸ್ಟ್ ಪಂದ್ಯವಾದ್ದರಿಂದ ಪ್ರತಿದಿನ ಕ್ರೀಡಾಂಗಣ ಭರ್ತಿಯಾಗುವ ಸಾಧ್ಯತೆ ಇಲ್ಲ. ಕ್ರೀಡಾಂಗಣದ ಸಾಮರ್ಥ್ಯ 27 ಸಾವಿರ. ಹಾಗಾಗಿ ದಿನಕ್ಕೆ 2 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲಾಗುವುದು ಎಂದು ಗೋಪಿನಾಥ್ ವಿವರಿಸಿದರು. ಅದಕ್ಕಾಗಿ ಮೊದಲು ನೋಂದಣಿ ಮಾಡಿಕೊಳ್ಳಬೇಕು ಎಂದು ವಿವರಿಸಿದ್ದಾರೆ. ಇದಕ್ಕಾಗಿ ವೈಎಸ್ ಆರ್ ಮತ್ತು ಸ್ವರ್ಣ ಭಾರತಿ ಕ್ರೀಡಾಂಗಣಗಳಲ್ಲಿ 26 ಕೌಂಟರ್ ಗಳನ್ನು ಸ್ಥಾಪಿಸಲಾಗುವುದು ಎಂದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ