IND vs NZ: ಭಾರತೀಯ ಬ್ಯಾಟರ್ಗಳ ಆರ್ಭಟಕ್ಕೆ ಮಳೆ ಅಡ್ಡಿ
India vs New Zealand, 1st Test: ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದರೆ, ಎರಡನೇ ಪಂದ್ಯವು ಪುಣೆಯಲ್ಲಿ ಜರುಗಲಿದೆ. ಹಾಗೆಯೇ ಮೂರನೇ ಪಂದ್ಯಕ್ಕೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆತಿಥ್ಯವಹಿಸಲಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಈ ಪಂದ್ಯದ ಮೊದಲ ದಿನದಾಟವು ಮಳೆಯ ಕಾರಣ ರದ್ದಾಗಿತ್ತು. ಇನ್ನು 2ನೇ ದಿನದಾಟದಲ್ಲಿ ಶುರುವಾದ ಪಂದ್ಯದಲ್ಲಿ ಟೀಮ್ ಇಂಡಿಯಾ ಕೇವಲ 46 ರನ್ಗಳಿಗೆ ಆಲೌಟ್ ಆಗಿತ್ತು.
ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ನ್ಯೂಝಿಲೆಂಡ್ ತಂಡವು ರಚಿನ್ ರವೀಂದ್ರ (113) ಅವರ ಶತಕದ ನೆರವಿನಿಂದ 402 ರನ್ಗಳಿಸಿ ಆಲೌಟ್ ಆಯಿತು. 356 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾಗೆ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 71 ರನ್ ಪೇರಿಸಿದ ಬಳಿಕ ಜೈಸ್ವಾಲ್ (35) ಔಟಾದರು.
ಇನ್ನು 63 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 52 ರನ್ ಬಾರಿಸಿ ರೋಹಿತ್ ಶರ್ಮಾ ಕೂಡ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಗೂಡಿದ ವಿರಾಟ್ ಕೊಹ್ಲಿ ಹಾಗೂ ಸರ್ಫರಾಝ್ ಖಾನ್ ಶತಕದ ಜೊತೆಯಾಟದ ಮೂಲಕ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು.
ಆದರೆ ಮೂರನೇ ದಿನದಾಟದ ಅಂತಿಮ ಓವರ್ನ ಕೊನೆಯ ಎಸೆತದಲ್ಲಿ ವಿರಾಟ್ ಕೊಹ್ಲಿ (70) ವಿಕೆಟ್ ಕೀಪರ್ಗೆ ಕ್ಯಾಚಿತ್ತು ನಿರಾಸೆ ಮೂಡಿಸಿದರು. ಇನ್ನು ನಾಲ್ಕನೇ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರೆಸಿದ ಸರ್ಫರಾಝ್ ಖಾನ್ 110 ಎಸೆತಗಳಲ್ಲಿ 13 ಫೋರ್ ಹಾಗೂ 3 ಸಿಕ್ಸ್ಗಳೊಂದಿಗೆ ಶತಕ ಪೂರೈಸಿದರು.
ಮತ್ತೊಂದೆಡೆ ಸರ್ಫರಾಝ್ ಖಾನ್ಗೆ ಉತ್ತಮ ಸಾಥ್ ನೀಡಿದ ರಿಷಭ್ ಪಂತ್ 56 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 53 ರನ್ ಬಾರಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ 71 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 344 ರನ್ ಕಲೆಹಾಕಿದೆ. ಸದ್ಯ ಮಳೆಯ ಕಾರಣ ಪಂದ್ಯ ಸ್ಥಗಿತಗೊಂಡಿದ್ದು, ಟೀಮ್ ಇಂಡಿಯಾ ಪರ ಸರ್ಫರಾಝ್ ಖಾನ್ (125) ಹಾಗೂ ರಿಷಭ್ ಪಂತ್ (53) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸರ್ಫರಾಝ್ ಖಾನ್, ರಿಷಭ್ ಪಂತ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್.
ಇದನ್ನೂ ಓದಿ: IPL 2025: RCB ಉಳಿಸಿಕೊಳ್ಳಲಿರುವ ಆಟಗಾರರ ಪಟ್ಟಿ ರೆಡಿ
ನ್ಯೂಝಿಲೆಂಡ್ ಪ್ಲೇಯಿಂಗ್ 11: ಟಾಮ್ ಲ್ಯಾಥಮ್ (ನಾಯಕ), ಡೆವೊನ್ ಕಾನ್ವೇ, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ವಿಲ್ ಯಂಗ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮ್ಯಾಟ್ ಹೆನ್ರಿ, ಟಿಮ್ ಸೌಥಿ, ವಿಲಿಯಂ ಒರೋಕ್, ಅಜಾಝ್ ಪಟೇಲ್.