India vs New Zealand 2nd T20: ಭಾರತ-ನ್ಯೂಜಿಲೆಂಡ್ ನಡುವಣ 2ನೇ ಟಿ20 ಪಂದ್ಯವು ಭಾನುವಾರ ಲಕ್ನೋದಲ್ಲಿ ನಡೆಯಲಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) 21 ರನ್ಗಳಿಂದ ಸೋಲೊಪ್ಪಿಕೊಂಡಿತ್ತು. ಇದೀಗ ಸರಣಿ ಆಸೆಯನ್ನು ಜೀವಂತವಿರಿಸಿಕೊಳ್ಳಲು ಇಂದಿನ ಪಂದ್ಯವನ್ನು ಗೆಲ್ಲಲೇಬೇಕು. ಒಂದು ವೇಳೆ ಸೋತರೆ ಸರಣಿ ನ್ಯೂಜಿಲೆಂಡ್ ಪಾಲಾಗಲಿದೆ. ಅಷ್ಟೇ ಅಲ್ಲದೆ ಐಸಿಸಿ ಟಿ20 ಶ್ರೇಯಾಂಕ ಪಟ್ಟಿಯಲ್ಲೂ ಭಾರತ ತಂಡದ ಸ್ಥಾನ ಕುಸಿಯಲಿದೆ.
ಪ್ರಸ್ತುತ ಐಸಿಸಿ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದಲ್ಲಿರುವ ಟೀಮ್ ಇಂಡಿಯಾ ಒಟ್ಟು 267 ಅಂಕಗಳನ್ನು ಹೊಂದಿದೆ. ಹಾಗೆಯೇ 2ನೇ ಸ್ಥಾನದಲ್ಲಿರುವ ಇಂಗ್ಲೆಂಡ್ 266 ಪಾಯಿಂಟ್ ಕಲೆಹಾಕಿದೆ. ಒಂದು ವೇಳೆ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ ಸೋತರೆ ಉಭಯ ತಂಡಗಳ ರೇಟಿಂಗ್ ಸಮಬಲಗೊಳ್ಳಲಿದೆ. ಅಂದರೆ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡ ಸೋತರೆ 266 ಪಾಯಿಂಟ್ಗೆ ಕುಸಿಯಲಿದೆ. ಈ ಮೂಲಕ ಟಿ20 ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಇಂಗ್ಲೆಂಡ್ನೊಂದಿಗೆ ಸಮಬಲ ಹೊಂದಲಿದೆ.
ಹಾಗೆಯೇ ಮೂರನೇ ಟಿ20 ಪಂದ್ಯದಲ್ಲೂ ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ ಗೆದ್ದರೆ ಐಸಿಸಿ ರ್ಯಾಂಕಿಂಗ್ನಲ್ಲಿ ಟೀಮ್ ಇಂಡಿಯಾ 2ನೇ ಸ್ಥಾನಕ್ಕೆ ಕುಸಿಯಲಿದೆ. ಹಾಗೆಯೇ ಇಂಗ್ಲೆಂಡ್ ತಂಡವು ಅಗ್ರಸ್ಥಾನಕ್ಕೇರಲಿದೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧ ಉಳಿದಿರುವ 2 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆಲ್ಲಲೇಬೇಕು. ಅದರಲ್ಲೂ ಸರಣಿ ಉಳಿಸಿಕೊಳ್ಳಲು ಟೀಮ್ ಇಂಡಿಯಾ ಪಾಲಿಗೆ ಇಂದಿನ ಮ್ಯಾಚ್ ಮಾಡು ಇಲ್ಲವೇ ಮಡಿ ಪಂದ್ಯ.
ಇದನ್ನೂ ಓದಿ: RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
ಒಂದು ವೇಳೆ ಲಕ್ನೋದಲ್ಲಿ ಇಂದು ಭಾರತ ತಂಡ ಗೆದ್ದರೆ ಮೊಟೆರಾದಲ್ಲಿ ಟಿ20 ಸರಣಿ ನಿರ್ಧಾರವಾಗಲಿದೆ. ಹಾಗೆಯೇ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳಬಹುದು. ಹೀಗಾಗಿ ಇಂದಿನ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ಸರಣಿ ಹಾಗೂ ಐಸಿಸಿ ಶ್ರೇಯಾಂಕದ ಕಾರಣ ತುಂಬಾ ಮಹತ್ವದ್ದಾಗಿ ಮಾರ್ಪಟ್ಟಿದೆ.
ಟೀಮ್ ಇಂಡಿಯಾ ಟಿ20 ತಂಡ:
ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಶಿವಂ ಮಾವಿ, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.
ನ್ಯೂಜಿಲೆಂಡ್ ಟಿ20 ತಂಡ:
ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್ವೆಲ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಡೇನ್ ಕ್ಲೀವರ್, ಜಾಕೋಬ್ ಡಫಿ, ಲಾಕಿ ಫರ್ಗುಸನ್, ಬೆಂಜಮಿನ್ ಲಿಸ್ಟರ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮೈಕೆಲ್ ರಿಪ್ಪನ್, ಹೆನ್ರಿ ಶಿಪ್ಲಿ, ಇಶ್ ಸೋಧಿ, ಬ್ಲೇರ್ ಟಿಕ್ನರ್.