IND vs PAK: ಟೀಂ ಇಂಡಿಯಾ ಟಾಸ್ ಸೋತರೂ ಬಯಸಿದ್ದೆ ಸಿಕ್ಕಿದೆ; ಪ್ಲೇಯಿಂಗ್ 11 ಹೀಗಿದೆ
India vs Pakistan Asia Cup 2025: ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ದುಬೈನಲ್ಲಿ ಮಹತ್ವದ ಪಂದ್ಯವನ್ನು ಆಡುತ್ತಿವೆ. ಪಾಕಿಸ್ತಾನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ಜನ್ಮದಿನದಂದು ಗೆಲುವಿನ ನಿರೀಕ್ಷೆಯಿದೆ. ಎರಡೂ ತಂಡಗಳು ತಮ್ಮ ಬಲಿಷ್ಠ ಆಟಗಾರರನ್ನು ಕಣಕ್ಕಿಳಿಸಿದ್ದು, ಪಂದ್ಯದ ಫಲಿತಾಂಶ ಕುತೂಹಲ ಕೆರಳಿಸಿದೆ.

ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಏಷ್ಯಾಕಪ್ (Asia Cup 2025) ಕದನಕ್ಕೆ ವೇದಿಕೆ ಸಜ್ಜಾಗಿದೆ. ಎರಡೂ ತಂಡಗಳು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯವನ್ನು ಆಡುತ್ತಿವೆ. ಈ ಪಂದ್ಯವನ್ನು ಗೆದ್ದು ಸೂಪರ್ ಫೋರ್ ಹಂತಕ್ಕೆ ಅರ್ಹತೆ ಪಡೆಯುವ ಗುರಿ ಉಭಯ ತಂಡಗಳಿಗಿದೆ. ಹೀಗಾಗಿ ಬಲಿಷ್ಠ ಪಡೆಯನ್ನೇ ಕಟ್ಟಿಕೊಂಡು ಕಣಕ್ಕಿಳಿದಿವೆ. ಇಂದಿನ ಪಂದ್ಯ ಟೀಂ ಇಂಡಿಯಾಕ್ಕೆ ಬಹಳ ವಿಶೇಷವಾಗಿದೆ. ಏಕೆಂದರೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಇಂದು 35ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹೀಗಾಗಿ ತಂಡದ ಆಟಗಾರರು ನಾಯಕನ ಜನ್ಮ ದಿನಕ್ಕೆ ಗೆಲುವಿನ ಉಡುಗೊರೆ ನೋಡಲು ಎದುರು ನೋಡುತ್ತಿದ್ದಾರೆ. ಇನ್ನು ಈ ಪಂದ್ಯದ ಟಾಸ್ ಕೂಡ ಮುಗಿದಿದ್ದು ಟಾಸ್ ಗೆದ್ದ ಪಾಕಿಸ್ತಾನ ನಾಯಕ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಇದರೊಂದಿಗೆ ಎರಡು ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ.
ಟಾಸ್ ಗೆದ್ದ ಪಾಕಿಸ್ತಾನ
ಟಾಸ್ ಗೆದ್ದ ಪಾಕಿಸ್ತಾನ ನಾಯಕ ಸಲ್ಮಾನ್ ಆಘಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ವಾಸ್ತವವಾಗಿ ದುಬೈ ಪಿಚ್ನಲ್ಲಿ ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಾರೆ. ಏಕೆಂದರೆ ಇಲ್ಲಿ ಗುರಿ ಬೆನ್ನಟ್ಟುವುದು ಬಹಳ ಸುಲಭ. ಇದಕ್ಕೆ ಪೂರಕವಾಗಿ ಅಂಕಿ ಅಂಶಗಳು ಸಹ ಇದ್ದನ್ನೇ ಹೇಳುತ್ತವೆ. ಆದಾಗ್ಯೂ ಪಾಕ್ ನಾಯಕನ ಈ ನಿರ್ಧಾರ ಅಚ್ಚರಿ ಮೂಡಿಸಿದೆ. ಇತ್ತ ಟಾಸ್ ಸೋತ ಬಳಿಕ ಮಾತನಾಡಿದ ಟೀಂ ಇಂಡಿಯಾ ನಾಯಕ ಸೂರ್ಯ ಟಾಸ್ ಗೆದ್ದಿದ್ದರೆ ನಾನು ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದೆ ಎಂದಿದ್ದಾರೆ. ಇದರರ್ಥ ಉಭಯ ತಂಡಗಳ ನಾಯಕರು ಬಯಸಿದ್ದ ಆಯ್ಕೆಯೇ ಸಿಕ್ಕಿದೆ. ಇನ್ನು ಆಡುವ ಹನ್ನೊಂದರ ಬಳಗದ ಬಗ್ಗೆ ಹೇಳುವುದಾದರೆ. ಉಭಯ ತಂಡಗಳು ಕಳೆದ ಪಂದ್ಯದಲ್ಲಿ ಆಡಿದ್ದ 11 ಆಟಗಾರರನ್ನೇ ಕಣಕ್ಕಿಳಿಸಿವೆ.
ಮುಖಾಮುಖಿ ದಾಖಲೆ
ಭಾರತ ಮತ್ತು ಪಾಕಿಸ್ತಾನ ತಂಡಗಳು ಏಷ್ಯಾಕಪ್‌ನಲ್ಲಿ ಏಕದಿನ ಮತ್ತು ಟಿ20 ಮಾದರಿಗಳನ್ನು ಒಳಗೊಂಡಂತೆ 19 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 10 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ ಆರು ಪಂದ್ಯಗಳನ್ನು ಗೆದ್ದಿದೆ. ಮೂರು ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ. ಹಾಗೆಯೇ ಟಿ20ಯಲ್ಲಿ ಎರಡೂ ತಂಡಗಳ ನಡುವಿನ ಒಟ್ಟಾರೆ ದಾಖಲೆಯ ಬಗ್ಗೆ ಹೇಳುವುದಾದರೆ, ಭಾರತ ಮತ್ತು ಪಾಕಿಸ್ತಾನ ನಡುವೆ ಇದುವರೆಗೆ ಒಟ್ಟು 13 ಟಿ20 ಪಂದ್ಯಗಳು ನಡೆದಿವೆ. ಈ ಪೈಕಿ ಟೀಂ ಇಂಡಿಯಾ ಒಂಬತ್ತು ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ ಮೂರು ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಟೈ ಆಗಿದೆ. ಇನ್ನು ದುಬೈನಲ್ಲಿ ಉಭಯ ತಂಡಗಳ ಅಂಕಿಅಂಶಗಳನ್ನು ನೋಡುವುದಾದರೆ.. ದುಬೈನಲ್ಲಿ ಎರಡೂ ತಂಡಗಳು ಮೂರು ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ ಒಂದು ಪಂದ್ಯವನ್ನು ಗೆದ್ದರೆ, ಪಾಕಿಸ್ತಾನ ಎರಡು ಪಂದ್ಯಗಳನ್ನು ಗೆದ್ದಿದೆ.
Asia cup 2025: ಟೀಂ ಇಂಡಿಯಾವನ್ನು ಹೊಗಳಿದ ಪಾಕ್ ಮಾಜಿ ನಾಯಕ ವಾಸಿಮ್ ಅಕ್ರಮ್
ಭಾರತದ ಪ್ಲೇಯಿಂಗ್ 11: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಶುಭ್ಮನ್ ಗಿಲ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.
ಪಾಕಿಸ್ತಾನದ ಪ್ಲೇಯಿಂಗ್ 11: ಸೈಮ್ ಅಯೂಬ್, ಸಾಹಿಬ್‌ಜಾದಾ ಫರ್ಹಾನ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಫಖರ್ ಜಮಾನ್, ಸಲ್ಮಾನ್ ಆಘಾ (ನಾಯಕ), ಹಸನ್ ನವಾಜ್, ಮೊಹಮ್ಮದ್ ನವಾಜ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ಸುಫಿಯಾನ್ ಮುಕೀಮ್, ಅಬ್ರಾರ್ ಅಹ್ಮದ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:44 pm, Sun, 14 September 25
