
ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಆಪರೇಷನ್ ಸಿಂಧೂರ್ (Operation Sindoor) ಮೂಲಕ ಸೇಡು ತೀರಿಸಿಕೊಂಡಿದೆ. ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Attack) ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಹತರಾಗಿದ್ದರು. ಇದಕ್ಕೆ ಪ್ರತಿಯಾಗಿ ಇದೀಗ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಶುರು ಮಾಡಿದ್ದು, ಅದರಂತೆ ಮೇ 7 ರ ನಸುಕಿನಲ್ಲಿ ಪಾಕ್ ಮೇಲೆ ಪ್ರತೀಕಾರದ ದಾಳಿ ನಡೆಸಿದೆ. ಈ ದಾಳಿ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನ್ ನಡುವೆ ಯುದ್ಧದ ಭೀತಿ ಎದುರಾಗಿದೆ. ಉಭಯ ದೇಶಗಳ ನಡುವಣ ಉದ್ವಿಗ್ನತೆ ಹೆಚ್ಚಾದ ಹಿನ್ನಲೆಯಲ್ಲಿ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ ಮೇಲೂ ಕಾರ್ಮೋಡ ಆವರಿಸಿದೆ.
ಭಾರತವು ಮಧ್ಯರಾತ್ರಿ ಪಿಒಕೆಯಲ್ಲಿನ 9 ಭಯೋತ್ಪಾದಕ ಅಡಗುತಾಣಗಳ ಮೇಲೆ ದಾಳಿ ಮಾಡಿದೆ. ಈ ವೇಳೆ ಐಪಿಎಲ್ 2025 ರ 56ನೇ ಪಂದ್ಯ ಮುಗಿದಿತ್ತು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವು ಮುಗಿದ ಕೆಲವೇ ಗಂಟೆಗಳ ಬಳಿಕ ಭಾರತವು ಪಿಒಕೆಯಲ್ಲಿನ ಉಗ್ರರ ಅಡುಗುತಾಣಗಳ ಮೇಲೆ ದಾಳಿ ನಡೆಸಿದೆ.
ಭಾರತ ಮತ್ತು ಪಾಕಿಸ್ತಾನ್ ನಡುವೆ ಯುದ್ಧ ಆರಂಭವಾದರೆ, ಐಪಿಎಲ್ಗೆ ಬ್ರೇಕ್ ಬೀಳಲಿದೆ. ಈಗಾಗಲೇ ಬಿಸಿಸಿಐ ಮತ್ತು ಐಪಿಎಲ್ ವ್ಯವಸ್ಥಾಪಕರು ಈ ಬಗ್ಗೆ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ. ಐಪಿಎಲ್ ವ್ಯವಸ್ಥಾಪಕರು ಸದ್ಯದ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ಕೇಂದ್ರ ಸರ್ಕಾರ ಸೂಚನೆ ನೀಡಿದರೆ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಿದ್ದಾರೆ.
ಪ್ರಸ್ತುತ ಪರಿಸ್ಥಿತಿ ಸಾಮಾನ್ಯವಾಗಿದ್ದು, ಹೀಗಾಗಿ ಐಪಿಎಲ್‌ನ ಉಳಿದ ಪಂದ್ಯಗಳು ನಿಗದಿತ ವೇಳಾಪಟ್ಟಿಯಂತೆ ನಡೆಯಲಿವೆ. ಅಂದರೆ ಸದ್ಯದ ಪರಿಸ್ಥಿತಿಯಲ್ಲಿ ಟೂರ್ನಿಯನ್ನು ನಿಲ್ಲಿಸಲಾಗುತ್ತಿಲ್ಲ. ಬದಲಾಗಿ ಕೇಂದ್ರ ಸರ್ಕಾರ ಅಥವಾ ಇಂಡಿಯನ್ ಆರ್ಮಿ ಸೂಚನೆ ನೀಡಿದರೆ ಮಾತ್ರ ಟೂರ್ನಿಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ವಿರಾಟ್ ಕೊಹ್ಲಿ ಕೋಡಂಗಿ… ಅವನ ಅಭಿಮಾನಿಗಳು ಅದಕ್ಕಿಂತ ದೊಡ್ಡ ಕೋಡಂಗಿಗಳು!
ಇಂಡಿಯನ್ ಪ್ರೀಮಿಯರ್ ಲೀಗ್ನ ಲೀಗ್ ಹಂತದ 56 ಪಂದ್ಯಗಳು ಮುಗಿದಿವೆ. ಇನ್ನೂ 18 ಪಂದ್ಯಗಳು ಬಾಕಿಯಿದೆ. ಅಲ್ಲದೆ ಟೂರ್ನಿಯು ಮೇ 25 ರಂದು ಮುಗಿಯಲಿದೆ. ಒಂದು ವೇಳೆ ಭಾರತ-ಪಾಕಿಸ್ತಾನ್ ನಡುವೆ ಯುದ್ಧ ನಡೆದರೆ, ಐಪಿಎಲ್ ಪಂದ್ಯಾವಳಿಯನ್ನು ಮುಂದೂಡಲಾಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರದ ಸೂಚನೆಯನ್ನು ಐಪಿಎಲ್ ವ್ಯವಸ್ಥಾಪಕರು ಎದುರು ನೋಡುತ್ತಿದ್ದು, ಅದುವರೆಗೆ ಐಪಿಎಲ್ ಪಂದ್ಯಾವಳಿ ಮುಂದುವರೆಸಲು ನಿರ್ಧರಿಸಲಾಗಿದೆ.
Published On - 9:04 am, Wed, 7 May 25