T20 World Cup 2022: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಭಾನುವಾರ ನಡೆಯಲಿರುವ ಭಾರತದ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಪಾಕಿಸ್ತಾನ್ (India vs Pakistan) ತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ತಂಡದ ಮಧ್ಯಮ ಕ್ರಮಾಂಕದ ಸ್ಟಾರ್ ಬ್ಯಾಟ್ಸ್ಮನ್ ಫಖರ್ ಝಮಾನ್ ಟೀಮ್ ಇಂಡಿಯಾ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದಾರೆ. ಕಳೆದ ಕೆಲ ದಿನಗಳಿಂದ ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಫಖರ್ ಭಾರತದ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ಪಾಕ್ ತಂಡದ ನಾಯಕ ಬಾಬರ್ ಆಜಂ ಸ್ಪಷ್ಟಪಡಿಸಿದ್ದಾರೆ.
ಇದಾಗ್ಯೂ ಅಭ್ಯಾಸ ಪಂದ್ಯದ ವೇಳೆ ಗಾಯಗೊಂಡಿದ್ದ ಮತ್ತೋರ್ವ ಆಟಗಾರ ಶಾನ್ ಮಸೂದ್ ಚೇತರಿಸಿಕೊಂಡಿದ್ದಾರೆ. ಅಲ್ಲದೆ ಭಾರತದ ವಿರುದ್ಧದ ಪಂದ್ಯಕ್ಕೆ ಅವರ ಅಗತ್ಯವಿದ್ದರೆ ಆಡಲು ಲಭ್ಯರಿರಲಿದ್ದಾರೆ ಎಂದು ಬಾಬರ್ ಆಜಂ ತಿಳಿಸಿದರು. ಆದರೆ
ಟೀಮ್ ಇಂಡಿಯಾ ವಿರುದ್ಧ ಅನುಭವಿ ಎಡಗೈ ದಾಂಡಿಗ ಫಖರ್ ಝಮಾನ್ ಕಣಕ್ಕಿಳಿಯುವುದಿಲ್ಲ ಎಂಬುದು ಖಚಿತವಾಗಿದೆ.
2017 ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಫಖರ್ ಶತಕ ಬಾರಿಸಿದ್ದರು. ಅಲ್ಲದೆ ಅಂದು ಭಾರತ ತಂಡವನ್ನು ಮಣಿಸಿ ಪಾಕ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೀಗ ಟೀಮ್ ಇಂಡಿಯಾ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಆಟಗಾರನೇ ತಂಡದಿಂದ ಹೊರಗುಳಿದಿರುವುದು ಪಾಕ್ ತಂಡಕ್ಕೆ ದೊಡ್ಡ ಹಿನ್ನಡೆಯನ್ನುಂಟು ಮಾಡಲಿದೆ. ಇದಾಗ್ಯೂ ಬಲಿಷ್ಠ ಪ್ಲೇಯಿಂಗ್ ಇಲೆವೆನ್ನೊಂದಿಗೆ ಕಣಕ್ಕಿಳಿಯುವುದಾಗಿ ಬಾಬರ್ ಆಜಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತ ತಂಡ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಪಾಕಿಸ್ತಾನ ತಂಡ ಹೀಗಿದೆ:
ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫಖರ್ ಝಮಾನ್, ಆಸಿಫ್ ಅಲಿ, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಶಾನ್ ಮಸೂದ್, ಮೊಹಮ್ಮದ್ ನವಾಜ್, ಶಾಹೀನ್ ಶಾ ಆಫ್ರಿದಿ, ಖುಷ್ದಿಲ್ ಶಾ , ಮೊಹಮ್ಮದ್ ವಾಸಿಂ, ನಸೀಮ್ ಶಾ, ಮೊಹಮ್ಮದ್ ಹಸ್ನೈನ್.