IND vs SA: ಕೈಕೊಟ್ಟ ಟಾಪ್ ಆರ್ಡರ್, ಹಾರ್ದಿಕ್ ಏಕಾಂಗಿ ಹೋರಾಟ; ಆಫ್ರಿಕಾ ಗೆಲುವಿಗೆ ಸ್ಪರ್ಧಾತ್ಮಕ ಗುರಿ
IND vs SA 1st T20: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಭಾರತ 176 ರನ್ ಗಳಿಸಿದೆ. ಕಟಕ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ದುಕೊಂಡಿತು. ಟಾಪ್ ಆರ್ಡರ್ ವೈಫಲ್ಯದ ನಡುವೆಯೂ, ಹಾರ್ದಿಕ್ ಪಾಂಡ್ಯ ಕೇವಲ 28 ಎಸೆತಗಳಲ್ಲಿ ಸ್ಫೋಟಕ 59 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್‌ಗಿಡಿ 3 ಪ್ರಮುಖ ವಿಕೆಟ್ ಪಡೆದು ಮಿಂಚಿದರು.

ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಟಾಪ್ ಆರ್ಡರ್ ವೈಫಲ್ಯದಿಂದಾಗಿ ನಿಗಧಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು 176 ರನ್ ಗಳಿಸಿದೆ. ತಂಡದ ಪರ ಕೆಳಕ್ರಮಾಂಕದಲ್ಲಿ ಅಬ್ಬರಿಸಿದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಕೇವಲ 28 ಎಸೆತಗಳಲ್ಲಿ ಸ್ಫೋಟಕ 59 ರನ್ ಕಲೆಹಾಕಿದರು. ಇತ್ತ ದಕ್ಷಿಣ ಆಫ್ರಿಕಾ ಪರ ಬೌಲಿಂಗ್‌ನಲ್ಲಿ ಮಿಂಚಿದ ಲುಂಗಿ ಎನ್‌ಗಿಡಿ ಪ್ರಮುಖ 3 ವಿಕೆಟ್ ಕಬಳಿಸಿದರು.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಉಪನಾಯಕ ಶುಭ್ಮನ್ ಗಿಲ್ ಮೊದಲ ಓವರ್ನಲ್ಲೇ ಕೇವಲ 4 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಆ ನಂತರ ಬಂದ ನಾಯಕ ಸೂರ್ಯಕುಮಾರ್ ಯಾದವ್ ಕೂಡ 3ನೇ ಓವರ್ನಲ್ಲಿ 12 ರನ್ಗಳಿಸಿ ಪೆವಿಲಿಯನ್ ಸೇರಿಕೊಂಡರು. ಅಭಿಷೇಕ್ ಶರ್ಮಾ ಆಟವೂ 17 ರನ್ಗಳಿಗೆ ಅಂತ್ಯವಾಯಿತು. ಹೀಗಾಗಿ ಟೀಂ ಇಂಡಿಯಾ 50 ರನ್ಗಳ ಒಳಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿತು.
ಆ ನಂತರ ಜೊತೆಯಾದ ತಿಲಕ್ ವರ್ಮಾ ಹಾಗೂ ಅಕ್ಷರ್ ಪಟೇಲ್ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸಿದರಾದರೂ ವೇಗವಾಗಿ ರನ್ಗಳಿಸಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ಒತ್ತಡಕ್ಕೊಳಗಾದ ಇಬ್ಬರು ಆಟಗಾರರು ದೊಡ್ಡ ಹೊಡೆತಕ್ಕೆ ಕೈಹಾಕಿ ವಿಕೆಟ್ ಒಪ್ಪಿಸಿದರು. ತಿಲಕ್ 32 ಎಸೆತಗಳಲ್ಲಿ ಕೇವಲ 26 ರನ್ ಗಳಿಸಿ ಔಟಾದರು. ಅಕ್ಷರ್ ಪಟೇಲ್ ಕೂಡ 21 ಎಸೆತಗಳಲ್ಲಿ 23 ರನ್ ಬಾರಿಸಿ ಔಟಾದರು.
ಆದಾಗ್ಯೂ ಭಾರತದ ಪರ ಏಕಾಂಗಿ ಹೋರಾಟ ನಡೆಸಿದ ಹಾರ್ದಿಕ್ ಪಾಂಡ್ಯ 59 ರನ್ (28 ಎಸೆತ) ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಕೇವಲ 25 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಪಾಂಡ್ಯ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 100 ಸಿಕ್ಸರ್‌ಗಳನ್ನು ಸಹ ಪೂರ್ಣಗೊಳಿಸಿದರು. ಪಾಂಡ್ಯ ಹೊರತುಪಡಿಸಿ ತಿಲಕ್ ವರ್ಮಾ 26 ಮತ್ತು ಅಕ್ಷರ್ ಪಟೇಲ್ 23 ರನ್ ಗಳಿಸಿದರು. ಅಭಿಷೇಕ್ ಶರ್ಮಾ 17 ಮತ್ತು ನಾಯಕ ಸೂರ್ಯಕುಮಾರ್ ಯಾದವ್ 12 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್‌ಗಿಡಿ ಮೂರು ವಿಕೆಟ್ ಪಡೆದರೆ, ಲುಥೊ ಸಿಪಾಮ್ಲಾ ಎರಡು ವಿಕೆಟ್, ಡೊನೊವನ್ ಫೆರೇರಾ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:46 pm, Tue, 9 December 25
