ದಕ್ಷಿಣ ಆಫ್ರಿಕಾ ಮತ್ತು ಭಾರತ (India vs South Africa 3rd Test) ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯವು ಕೇಪ್ ಟೌನ್ ಮೈದಾನದಲ್ಲಿ ನಡೆಯಲಿದೆ. ಸೆಂಚುರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 113 ರನ್‌ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿತು. ಆದರೆ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಬಲಿಷ್ಠವಾಗಿ ಸೆಡ್ಡು ಹೊಡೆದು ಟೀಮ್ ಇಂಡಿಯಾವನ್ನು 7 ವಿಕೆಟ್‌ಗಳಿಂದ ಮಣಿಸಿತು. ಇದೀಗ ಸರಣಿ 1-1ರಲ್ಲಿ ಸಮಬಲಗೊಂಡಿದೆ. ಕೇಪ್‌ಟೌನ್‌ನಲ್ಲಿ ನಡೆಯಲಿರುವ ಪಂದ್ಯವು ಸರಣಿಯ ಫಲಿತಾಂಶವನ್ನು ನಿರ್ಧರಿಸಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಗೆದ್ದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಒಂದು ವೇಳೆ ಡ್ರಾ ಆದರೆ ದ್ವಿತೀಯ ಬಾರಿ ಸೋಲಿಲ್ಲದೆ ಟೀಮ್ ಇಂಡಿಯಾ ಹಿಂತಿರುಗಲಿದೆ. ಹೀಗಾಗಿ ಮೂರನೇ ಟೆಸ್ಟ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆಯುವ ವಿಶ್ವಾಸದಲ್ಲಿದ್ದಾರೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid).
ಟೀಮ್ ಇಂಡಿಯಾ ಪಾಲಿಗೆ ಕೇಪ್ ಟೌನ್ ಕಹಿ:
ಭಾರತ ತಂಡ (ಟೀಮ್ ಇಂಡಿಯಾ) ಇದುವರೆಗೆ ಕೇಪ್ ಟೌನ್‌ನಲ್ಲಿ 5 ಪಂದ್ಯಗಳನ್ನು ಆಡಿದೆ. ಆದರೆ ಒಮ್ಮೆಯೂ ಗೆಲುವು ದಾಖಲಿಸಲು ಸಾಧ್ಯವಾಗಿಲ್ಲ. ಇದಾಗ್ಯೂ ಈ ಮೈದಾನದಲ್ಲಿ ಭಾರತ ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಇನ್ನು ಮೂರರಲ್ಲಿ ಹೀನಾಯ ಸೋಲು ಕಂಡಿರುವುದು ವಿಶೇಷ. ಇನ್ನು ಕಳೆದ ಬಾರಿ ಅಂದರೆ 2018 ರಲ್ಲಿ ಈ ಮೈದಾನದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ದ 72 ರನ್‌ಗಳಿಂದ ಸೋಲನುಭವಿಸಿತ್ತು.
ಇನ್ನು ಭಾರತ ಮೊದಲ ಬಾರಿಗೆ ಕೇಪ್ ಟೌನ್‌ನಲ್ಲಿ ಆಡಿದ್ದು 1993 ರಲ್ಲಿ. ಜಾವಗಲ್ ಶ್ರೀನಾಥ್ ಅವರ ಮಾರಕ ಬೌಲಿಂಗ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಅರ್ಧಶತಕದಿಂದಾಗಿ ಈ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.
1997 ರಲ್ಲಿ ಸಚಿನ್ ತೆಂಡೂಲ್ಕರ್ ನಾಯಕತ್ವದಲ್ಲಿ ಭಾರತ 2ನೇ ಬಾರಿ ಕೇಪ್ ಟೌನ್ ಮೈದಾನದಲ್ಲಿ ಕಣಕ್ಕಿಳಿದಿತ್ತು. ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ (169) ಮತ್ತು ಮೊಹಮ್ಮದ್ ಅಜರುದ್ದೀನ್ (113) ಅವರ ಶತಕದ ಹೊರತಾಗಿಯೂ ಭಾರತ ತಂಡವು 282 ರನ್‌ಗಳಿಂದ ಸೋಲನುಭವಿಸಿತು.
ಹಾಗೆಯೇ ಪ್ರಸ್ತುತ ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ನಾಯಕನಾಗಿ ಇದೇ ಮೈದಾನದಲ್ಲಿ ಸೋತಿದ್ದರು. 2007 ರಲ್ಲಿ ನಡೆದ ಪಂದ್ಯದಲ್ಲಿ 211 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತವನ್ನು ದಕ್ಷಿಣ ಆಫ್ರಿಕಾ ಐದು ವಿಕೆಟ್‌ಗಳಿಂದ ಸೋಲಿಸಿತು.
ಇನ್ನು ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ತಂಡ 2011ರಲ್ಲಿ ಇದೇ ಮೈದಾನದಲ್ಲಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ 146 ರನ್ ಗಳಿಸಿದ್ದರು. ಇವರಲ್ಲದೆ ಗೌತಮ್ ಗಂಭೀರ್ ಮೊದಲ ಇನ್ನಿಂಗ್ಸ್‌ನಲ್ಲಿ 93 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 64 ರನ್ ಗಳಿಸುವ ಮೂಲಕ ಭಾರತವನ್ನು ಸೋಲಿನಿಂದ ಪಾರು ಮಾಡಿದರು.
2018ರಲ್ಲಿ ಕೇಪ್‌ಟೌನ್‌ನಲ್ಲಿ ಭಾರತ ತಂಡ ಕೊನೆಯ ಬಾರಿಗೆ ಕಳಪೆ ಪ್ರದರ್ಶನ ನೀಡಿತ್ತು. ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 209 ಮತ್ತು ಎರಡನೇ ಇನಿಂಗ್ಸ್‌ನಲ್ಲಿ 135 ರನ್‌ಗಳಿಗೆ ಆಲೌಟ್ ಆಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಹಾರ್ದಿಕ್ ಪಾಂಡ್ಯ 93 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ವಿಫಲರಾಗಿದ್ದರು.
ಇದೀಗ ಟೀಮ್ ಇಂಡಿಯಾ ನಿರ್ಣಾಯಕ ಪಂದ್ಯದಲ್ಲಿ ಕೇಪ್ ಟೌನ್‌ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಜನವರಿ 11 ರಂದು ಶುರುವಾಗಲಿರುವ ಈ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಒಂದು ವೇಳೆ ಡ್ರಾ ಮಾಡಿಕೊಂಡರೆ 10 ವರ್ಷಗಳ ಬಳಿಕ ಸರಣಿ ಸಮಬಲದೊಂದಿಗೆ ಭಾರತ ತಂಡ ಹಿಂತಿರುಗಲಿದೆ. ಇನ್ನು ಸೋತರೆ 31 ವರ್ಷಗಳಿಂದ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲ್ಲದ ತಂಡ ಎಂಬ ಹಣೆಪಟ್ಟಿ ಮುಂದುವರೆಯಲಿದೆ.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಯ ಗಾಯ, ರಾಹುಲ್ ದ್ರಾವಿಡ್ ಹೇಳಿಕೆ ಮತ್ತು 100ನೇ ಟೆಸ್ಟ್..!
ಇದನ್ನೂ ಓದಿ: Sachin Tendulkar: ಆಲ್ ಟೈಮ್ ಬೆಸ್ಟ್ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: Rohit Sharma: ಫಿಟ್ನೆಸ್ ಅಥವಾ ಇನ್ನೇನಾದರೂ? ರೋಹಿತ್ ಶರ್ಮಾ ಕೈ ಬಿಡಲು ಕಾರಣವೇನು?
ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!
(India vs South Africa 3rd Test: India’s Past Struggles in the Cape Town)