IND vs SL: ವಾವ್.. ವಾವ್.. ವಾಂಡರ್ಸೆ..! ಟೀಂ ಇಂಡಿಯಾ ವಿರುದ್ಧ ಶ್ರೀಲಂಕಾಕ್ಕೆ ಅರ್ಹ ಗೆಲುವು
IND vs SL: ಈ ಪಂದ್ಯದಲ್ಲಿ ಮತ್ತೊಮ್ಮೆ ಭಾರತದ ಬ್ಯಾಟಿಂಗ್ ವಿಫಲವಾಗಿದ್ದು, ಶ್ರೀಲಂಕಾದ ಸ್ಪಿನ್ನರ್ ಜೆಫ್ರಿ ವಾಂಡರ್ಸೆ ಅಚ್ಚರಿಯ ಪ್ರದರ್ಶನ ನೀಡಿ ಬರೋಬ್ಬರಿ 6 ವಿಕೆಟ್ ಪಡೆದರು. ವಾಂಡರ್ಸೆ ಅವರ ಈ ಪ್ರದರ್ಶನದಿಂದಾಗಿ ಭಾರತದ ನಾಯಕ ರೋಹಿತ್ ಶರ್ಮಾ ಅವರ ಅದ್ಭುತ ಅರ್ಧಶತಕದ ಇನ್ನಿಂಗ್ಸ್ ಕೂಡ ವ್ಯರ್ಥವಾಯಿತು.
ಪ್ರಸ್ತುತ ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಮೊದಲು ನಡೆದ ಟಿ20 ಸರಣಿಯಲ್ಲಿ ಏಕಪಕ್ಷೀಯ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಹಲವು ಅನುಭವಿಗಳಿಂದ ಕೂಡಿರುವ ಭಾರತ ಏಕದಿನ ತಂಡ, ಏಕದಿನ ಸರಣಿಯಲ್ಲಿ ಮಾತ್ರ ನಿರಾಸೆಯ ಪ್ರದರ್ಶನ ನೀಡುತ್ತಿದೆ. ಮೊದಲ ಏಕದಿನ ಪಂದ್ಯದಲ್ಲಿ ತನ್ನ ಗೆಲುವನ್ನು ಕೈಯಾರೆ ಕೈಚೆಲ್ಲಿದ್ದ ಟೀಂ ಇಂಡಿಯಾ ಗೆಲುವಿನ ಸನಿಹಕ್ಕೆ ಬಂದು ‘ಟೈ’ಗೆ ತೃಪ್ತಿಪಟ್ಟುಕೊಂಡಿತ್ತು. ಆದರೆ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾದ ಸ್ಪಿನ್ ಬಲೆಗೆ ಸಿಲುಕಿ ಸೋಲಿನ ಆಘಾತ ಎದುರಿಸಿದೆ. ಇತ್ತ ಬಲಿಷ್ಠ ಭಾರತವನ್ನು ಮಣಿಸಿದ ಶ್ರೀಲಂಕಾ ತಂಡ ಎರಡನೇ ಪಂದ್ಯದಲ್ಲಿ 32 ರನ್‌ಗಳ ಜಯ ಸಾಧಿಸಿದ್ದು, ಇದರೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಈ ಪಂದ್ಯದಲ್ಲಿ ಮತ್ತೊಮ್ಮೆ ಭಾರತದ ಬ್ಯಾಟಿಂಗ್ ವಿಫಲವಾಗಿದ್ದು, ಶ್ರೀಲಂಕಾದ ಸ್ಪಿನ್ನರ್ ಜೆಫ್ರಿ ವಾಂಡರ್ಸೆ ಅಚ್ಚರಿಯ ಪ್ರದರ್ಶನ ನೀಡಿ ಬರೋಬ್ಬರಿ 6 ವಿಕೆಟ್ ಪಡೆದರು. ವಾಂಡರ್ಸೆ ಅವರ ಈ ಪ್ರದರ್ಶನದಿಂದಾಗಿ ಭಾರತದ ನಾಯಕ ರೋಹಿತ್ ಶರ್ಮಾ ಅವರ ಅದ್ಭುತ ಅರ್ಧಶತಕದ ಇನ್ನಿಂಗ್ಸ್ ಕೂಡ ವ್ಯರ್ಥವಾಯಿತು. ಈ ಪಂದ್ಯದಲ್ಲಿ ಶ್ರೀಲಂಕಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 240 ರನ್ ಗಳಿಸಿತು. ಉತ್ತರವಾಗಿ ಭಾರತ ತಂಡ 42.2 ಓವರ್‌ಗಳಲ್ಲಿ 208 ರನ್ ಗಳಿಸಿ ಆಲೌಟ್ ಆಯಿತು.
ಮೊದಲ ಎಸೆತದಲ್ಲೇ ಸಿರಾಜ್ಗೆ ವಿಕೆಟ್
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬೌಲಿಂಗ್ ಮಾಡಿದ ಭಾರತಕ್ಕೆ ಮೊಹಮ್ಮದ್ ಸಿರಾಜ್ ಪಂದ್ಯದ ಮೊದಲ ಎಸೆತದಲ್ಲಿಯೇ ಪಾತುಮ್ ನಿಸ್ಸಾಂಕ ಅವರ ವಿಕೆಟ್ ಪಡೆದು ಉತ್ತಮ ಆರಂಭ ನೀಡಿದರು. ನಂತರ ಅವಿಷ್ಕ ಫೆರ್ನಾಂಡೋ ಮತ್ತು ಕುಸಾಲ್ ಮೆಂಡಿಸ್ 74 ರನ್‌ಗಳ ಉತ್ತಮ ಜೊತೆಯಾಟ ಆಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಆದರೆ ಸುಂದರ್ ಸತತ ಎರಡು ಓವರ್‌ಗಳಲ್ಲಿ ಇಬ್ಬರನ್ನೂ ಪೆವಿಲಿಯನ್‌ಗಟ್ಟುವ ಮೂಲಕ ಈ ಜೊತೆಯಾಟವನ್ನು ಮುರಿದರು. ಇದಾದ ನಂತರವೂ ಶ್ರೀಲಂಕಾ ತಂಡ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಹೀಗಾಗಿ 35 ನೇ ಓವರ್ ಮುಗಿಯುವ ವೇಳೆ ಲಂಕಾ ತಂಡದ ಸ್ಕೋರ್ 6 ವಿಕೆಟ್ ನಷ್ಟಕ್ಕೆ 136 ರನ್ ಆಗಿತ್ತು.
ಇಲ್ಲಿಂದ ಶ್ರೀಲಂಕಾ 200 ರನ್ ತಲುಪುವ ಸಾಧ್ಯತೆಯೂ ಇರಲಿಲ್ಲ. ಆದರೆ ಕಳೆದ ಪಂದ್ಯದ ಸ್ಟಾರ್ ದುನಿತ್ ವೆಲ್ಲಾಲಗೆ ಈ ಪಂದ್ಯದಲ್ಲೂ ಭಾರತದ ಬೌಲರ್ಗಳನ್ನು ಕಾಡಿದರು. ಇವರಿಗೆ ಜೊತೆಯಾದ ಕಮಿಂದು ಮೆಂಡಿಸ್ 72 ರನ್‌ಗಳ ಅಮೋಘ ಜೊತೆಯಾಟ ನಡೆಸಿದರು. ಇವರಿಬ್ಬರ ಇನ್ನಿಂಗ್ಸ್ ಆಧಾರದ ಮೇಲೆ ಶ್ರೀಲಂಕಾ 9 ವಿಕೆಟ್ ಕಳೆದುಕೊಂಡು 240 ರನ್ ಗಳಿಸಿತು.
ಭಾರತಕ್ಕೆ ಬಿರುಸಿನ ಆರಂಭ
ಶ್ರೀಲಂಕಾ ಇನ್ನಿಂಗ್ಸ್‌ನಂತೆ ಭಾರತದ ಇನ್ನಿಂಗ್ಸ್‌ನ ಆರಂಭವೂ ಹಿಂದಿನ ಪಂದ್ಯದಂತೆಯೇ ಇತ್ತು. ಮತ್ತೊಮ್ಮೆ ನಾಯಕ ರೋಹಿತ್ ಶರ್ಮಾ ಪವರ್‌ಪ್ಲೇಯಲ್ಲಿ ಶ್ರೀಲಂಕಾ ಬೌಲರ್‌ಗಳ ಬೆವರಿಳಿಸಿ ಕೇವಲ 29 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ದಾಖಲಿಸಿದರು. ಅಲ್ಲದೆ ಶುಭಮನ್ ಗಿಲ್ ಅವರೊಂದಿಗೆ 97 ರನ್‌ಗಳ ಜೊತೆಯಾಟವನ್ನು ಮಾಡಿದರು. ಇದರಲ್ಲಿ ರೋಹಿತ್ ಒಬ್ಬರೇ 64 ರನ್ ಗಳಿಸಿದರು. ಆದರೆ ರೋಹಿತ್ ವಿಕೆಟ್ ಪತನದ ಬಳಿಕ ಜೆಫ್ರಿ ವಾಂಡರ್ಸೆ ದಾಳಿಗೆ ನಲುಗಿದ ಭಾರತದ ಬ್ಯಾಟಿಂಗ್ ಆರ್ಡರ್ ಪೆವಿಲಿಯನ್ ಪರೇಡ್ ನಡೆಸಿತು. ರೋಹಿತ್ ನಂತರ ಶುಭ್‌ಮನ್ ಗಿಲ್, ಶಿವಂ ದುಬೆ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಒಬ್ಬೊಬ್ಬರಾಗಿ ಬಲಿಯಾದರು.
ವಾಂಡರ್ಸೆ ವಂಡರ್
ವನಿಂದು ಹಸರಂಗ ಗಾಯಗೊಂಡ ನಂತರ ತಂಡಕ್ಕೆ ಸೇರ್ಪಡೆಗೊಂಡಿದ್ದ ಲೆಗ್ ಸ್ಪಿನ್ನರ್ ವಾಂಡರ್ಸೆ ಈ ಹಿಂದೆ ಯಾವುದೇ ಮಾದರಿಯಲ್ಲಿ ಭಾರತದ ವಿರುದ್ಧ ವಿಕೆಟ್ ಪಡೆದಿರಲಿಲ್ಲ. ಆದರೆ ಈ ಬಾರಿ ಟೀಂ ಇಂಡಿಯಾದ ಮೊದಲ 6 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಹೀಗಾಗಿ ಟೀಂ ಇಂಡಿಯಾ ಕೇವಲ 147 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಹೆಚ್ಚು ಹೊತ್ತು ಕ್ರೀಸ್ ನಲ್ಲಿದ್ದ ಅಕ್ಷರ್ ಪಟೇಲ್ ಮತ್ತು ಸುಂದರ್ ಜೋಡಿ ಮೇಲೆ ಕೊನೆಯ ಭರವಸೆ ಇತ್ತು. ಆದರೆ ಇವರಿಬ್ಬರನ್ನೂ ಶ್ರೀಲಂಕಾ ನಾಯಕ ಚರಿತ್ ಅಸಲಂಕಾ ಸತತ ಎರಡು ಓವರ್‌ಗಳಲ್ಲಿ ಪೆವಿಲಿಯನ್ಗಟ್ಟಿದರು. ಅಂತಿಮವಾಗಿ ಭಾರತ ತಂಡ 42.2 ಓವರ್‌ಗಳಲ್ಲಿ ಕೇವಲ 208 ರನ್‌ಗಳಿಗೆ ಆಲೌಟ್ ಆಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:07 pm, Sun, 4 August 24