IND vs WA: ಅಭ್ಯಾಸ ಪಂದ್ಯದಲ್ಲೇ ಟೀಮ್ ಇಂಡಿಯಾಗೆ ಹೀನಾಯ ಸೋಲು
India vs Western Australia XI 2nd Match Highlights: ರಿಷಭ್ ಪಂತ್ 11 ಎಸೆತಗಳಲ್ಲಿ 9 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇದಾಗ್ಯೂ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಕೆಎಲ್ ರಾಹುಲ್ ನಿಧಾನವಾಗಿ ರನ್ ಗತಿಯನ್ನು ಹೆಚ್ಚಿಸುತ್ತಾ ಹೋದರು.
India vs Western Australia XI 2nd Match: ಪರ್ತ್ನಲ್ಲಿ ನಡೆದ ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧದ 2ನೇ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಹೀನಾಯವಾಗಿ ಸೋಲನುಭವಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ವೆಸ್ಟರ್ನ್ ಆಸ್ಟ್ರೇಲಿಯಾ ತಂಡದ ಪರ ಆರಂಭಿಕ ಆಟಗಾರ ಡಿ ಆರ್ಸಿ ಶಾರ್ಟ್ ಅತ್ಯುತ್ತಮ ಇನಿಂಗ್ಸ್ ಮೂಲಕ ಉತ್ತಮ ಆರಂಭ ಒದಗಿಸಿದ್ದರು. ಆದರೆ ಮತ್ತೋರ್ವ ಆರಂಭಿಕನನ್ನು ಔಟ್ ಮಾಡುವ ಮೂಲಕ ಭುವನೇಶ್ವರ್ ಕುಮಾರ್ ಟೀಮ್ ಇಂಡಿಯಾಗೆ 2ನೇ ಓವರ್ನಲ್ಲಿ ಮೊದಲ ಯಶಸ್ಸು ತಂದುಕೊಟ್ಟಿದ್ದರು. ಆದರೆ ಮೂರನೇ ವಿಕೆಟ್ಗೆ ಜೊತೆಯಾದ ಶಾರ್ಟ್ ಹಾಗೂ ಹಾಬ್ಸನ್ ಟೀಮ್ ಇಂಡಿಯಾ ಬೌಲರ್ಗಳ ಬೆಂಡೆತ್ತಿದರು. ಈ ಜೋಡಿಯು 3 ವಿಕೆಟ್ಗೆ 110 ರನ್ಗಳ ಜೊತೆಯಾಟವಾಡುವ ಮೂಲಕ ಬೃಹತ್ ಮೊತ್ತವನ್ನು ಪೇರಿಸುವ ಸೂಚನೆ ನೀಡಿದರು.
ಈ ಹಂತದಲ್ಲಿ 41 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 5 ಫೋರ್ನೊಂದಿಗೆ 64 ರನ್ ಬಾರಿಸಿದ್ದ ನಿಕ್ ಹಾಬ್ಸನ್ ಹರ್ಷಲ್ ಪಟೇಲ್ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ 39 ಎಸೆತಗಳಲ್ಲಿ 52 ರನ್ ಬಾರಿಸಿದ್ದ ಶಾರ್ಟ್ ಕೂಡ ರನೌಟ್ ಆದರು. ಈ ವೇಳೆ ಹಿಡಿತ ಸಾಧಿಸಿದ ಟೀಮ್ ಇಂಡಿಯಾ ಬೌಲರ್ಗಳು ರನ್ ಗತಿಯನ್ನು ನಿಯಂತ್ರಿಸಿದರು. ಅಂತಿಮವಾಗಿ ವೆಸ್ಟರ್ನ್ ಆಸ್ಟ್ರೇಲಿಯಾ ತಂಡವು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 168 ರನ್ ಕಲೆಹಾಕಿತು. ಟೀಮ್ ಇಂಡಿಯಾ ಪರ ಅಶ್ವಿನ್ 3 ವಿಕೆಟ್ ಕಬಳಿಸಿದರೆ, ಹರ್ಷಲ್ ಪಟೇಲ್ 2 ಹಾಗೂ ಅರ್ಷದೀಪ್ ಸಿಂಗ್ 1 ವಿಕೆಟ್ ಪಡೆದರು.
ಇನ್ನು 169 ರನ್ಗಳ ಸ್ಪರ್ಧಾತ್ಮಕ ಸವಾಲು ಬೆನ್ನತ್ತಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ರಿಷಭ್ ಪಂತ್ ಹಾಗೂ ಕೆಎಲ್ ರಾಹುಲ್ ನಿಧಾಗತಿಯಲ್ಲಿ ಬ್ಯಾಟ್ ಬೀಸಿದರು. ಪರಿಣಾಮ ಪವರ್ಪ್ಲೇನಲ್ಲಿ ಮೂಡಿಬಂದಿದ್ದು ಕೇವಲ 29 ರನ್ಗಳು ಮಾತ್ರ.
ಈ ನಡುವೆ ರಿಷಭ್ ಪಂತ್ 11 ಎಸೆತಗಳಲ್ಲಿ 9 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇದಾಗ್ಯೂ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಕೆಎಲ್ ರಾಹುಲ್ ನಿಧಾನವಾಗಿ ರನ್ ಗತಿಯನ್ನು ಹೆಚ್ಚಿಸುತ್ತಾ ಹೋದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೀಪಕ್ ಹೂಡ 6 ರನ್ಗಳಿಸಿ ಕ್ಯಾಚ್ ನೀಡಿ ನಿರ್ಗಮಿಸಿದರು. ಇದರ ಬೆನ್ನಲ್ಲೇ 19 ಎಸೆತಗಳಲ್ಲಿ 17 ರನ್ ಬಾರಿಸುವ ಮೂಲಕ ಹಾರ್ದಿಕ್ ಪಾಂಡ್ಯ ವಿಕೆಟ್ ಕೈಚೆಲ್ಲಿದರು.
ಆ ಬಳಿಕ ಬಂದ ಅಕ್ಷರ್ ಪಟೇಲ್ (2) ಹಾಗೂ ದಿನೇಶ್ ಕಾರ್ತಿಕ್ (10) ಬಂದ ವೇಗದಲ್ಲೇ ಹಿಂತಿರುಗಿದರು. ಇದಾಗ್ಯೂ 43 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಕೆಎಲ್ ರಾಹುಲ್ ಒಂದೆಡೆ ತಂಡಕ್ಕೆ ಆಸರೆಯಾಗಿ ನಿಂತಿದ್ದರು. ಅದರಂತೆ ಟೀಮ್ ಇಂಡಿಯಾಗೆ ಗೆಲ್ಲಲು ಕೊನೆಯ 3 ಓವರ್ಗಳಲ್ಲಿ 55 ರನ್ಗಳ ಅವಶ್ಯಕತೆಯಿತ್ತು. ಈ ವೇಳೆ ಬ್ಯಾಕ್ ಟು ಬ್ಯಾಕ್ 2 ಸಿಕ್ಸ್ ಸಿಡಿಸುವ ಮೂಲಕ ಕೆಎಲ್ ರಾಹುಲ್ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರು. ಅಲ್ಲದೆ ಕೊನೆಯ 12 ಎಸೆತಗಳಲ್ಲಿ ಟೀಮ್ ಇಂಡಿಯಾ ಮುಂದೆ 35 ರನ್ಗಳ ಗುರಿಯಿತ್ತು.
ಈ ಹಂತದಲ್ಲಿ 55 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 9 ಫೋರ್ನೊಂದಿಗೆ 74 ರನ್ ಬಾರಿಸಿದ ಕೆಎಲ್ ರಾಹುಲ್ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಟೀಮ್ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 132 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಅಭ್ಯಾಸ ಪಂದ್ಯದಲ್ಲಿ 36 ರನ್ಗಳ ಅಂತರದಿಂದ ಹೀನಾಯವಾಗಿ ಸೋಲನುಭವಿಸಿದೆ.
ಭಾರತ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ , ಕೆಎಲ್ ರಾಹುಲ್ , ದೀಪಕ್ ಹೂಡಾ , ರಿಷಭ್ ಪಂತ್ , ಹಾರ್ದಿಕ್ ಪಾಂಡ್ಯ , ದಿನೇಶ್ ಕಾರ್ತಿಕ್ , ಅಕ್ಷರ್ ಪಟೇಲ್ , ಹರ್ಷಲ್ ಪಟೇಲ್ , ರವಿಚಂದ್ರನ್ ಅಶ್ವಿನ್ , ಭುವನೇಶ್ವರ್ ಕುಮಾರ್ , ಅರ್ಷದೀಪ್ ಸಿಂಗ್.
ವೆಸ್ಟರ್ನ್ ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆನ್: ಜೋಶ್ ಫಿಲಿಪ್ , ಡಿ ಆರ್ಸಿ ಶಾರ್ಟ್ , ನಿಕ್ ಹಾಬ್ಸನ್ , ಕ್ಯಾಮರೂನ್ ಬ್ಯಾಂಕ್ರಾಫ್ಟ್ , ಆಷ್ಟನ್ ಟರ್ನರ್ , ಜೇಸನ್ ಬೆಹ್ರೆಂಡಾರ್ಫ್ , ಸ್ಯಾಮ್ ಫಾನ್ನಿಂಗ್ , ಮ್ಯಾಥ್ಯೂ ಕೆಲ್ಲಿ , ಹ್ಯಾಮಿಶ್ ಮೆಕೆಂಜಿ , ಡೇವಿಡ್ ಮೂಡಿ , ಆಂಡ್ರ್ಯೂ ಟೈ , ಲ್ಯಾನ್ಸ್ ಮೋರಿಸ್.
Published On - 2:51 pm, Thu, 13 October 22