ಐಸಿಸಿ ಟಿ20 ವಿಶ್ವಕಪ್ 2022 (T20 World Cup) ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ರೋಚಕ ಗೆಲುವು ಸಾಧಿಸಿ ಶುಭಾರಂಭ ಮಾಡಿದ ಭಾರತ ಕ್ರಿಕೆಟ್ ತಂಡ ಇದೀಗ ಮತ್ತೊಂದು ಕದನಕ್ಕೆ ಸಜ್ಜಾಗಿದೆ. ಇಂದು ಸಿಡ್ನಿಯ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಟೀಮ್ ಇಂಡಿಯಾ ನೆದರ್ಲೆಂಡ್ಸ್ (India vs Netherlands) ವಿರುದ್ಧ ತನ್ನ ದ್ವಿತೀಯ ಪಂದ್ಯವನ್ನು ಆಡಲಿದೆ. ಮೊದಲ ಪಂದ್ಯವನ್ನು ಗೆದ್ದು ಆತ್ಮವಿಶ್ವಾಸದಲ್ಲಿರುವ ರೋಹಿತ್ (Rohit Sharma) ಪಡೆ ಈ ಮ್ಯಾಚ್ ಅನ್ನೂ ಜಯಿಸುವ ಯೋಜನೆಯಲ್ಲಿದೆ. ಅತ್ತ ನೆದರ್ಲೆಂಡ್ಸ್ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಗೆಲುವಿನ ಅಂಚಿನಲ್ಲಿ ಎಡವಿತ್ತು. ಸೋತ ಪರಿಣಾಮ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಭಾರತ ದ್ವಿತೀಯ ಸ್ಥಾನಕ್ಕೆ ಕುಸಿದಿದೆ. ಹೀಗಾಗಿ ಉಭಯ ತಂಡಗಳಿಗೆ ಇಂದಿನ ಪಂದ್ಯ ಮಹತ್ವದ್ದಾಗಿದೆ.
ಈಗಾಗಲೇ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಟೀಮ್ ಇಂಡಿಯಾ ಹಾಗೂ ನೆದರ್ಲೆಂಡ್ಸ್ ತಂಡದ ಆಟಗಾರರು ಭರ್ಜರಿ ಅಭ್ಯಾಸ ಮಾಡುತ್ತಿದ್ದಾರೆ. ಮೆಲ್ಬೋರ್ನ್ಗೆ ಹೋಲಿಸಿದರೆ ಸಿಡ್ನಿ ಪಿಚ್ ವಿಶೇಷವಾಗಿದೆ. ಇದುಕೂಡ ದೊಡ್ಡ ಮೈದಾನ ಆಗಿರುವುದರಿಂದ 160+ ರನ್ ಕಲೆಹಾಕುವುದು ಸುಲಭವಲ್ಲ. ಹೀಗಾಗಿ ಇದುಕೂಡ ಲೋ ಸ್ಕೋರ್ನ ಹೈವೋಲ್ಟೇಜ್ ಪಂದ್ಯ ಆಗುವ ನಿರೀಕ್ಷೆಯಿದೆ.
ನೆದರ್ಲೆಂಡ್ಸ್ ಭಾರತಕ್ಕೆ ಹೋಲಿಸಿದರೆ ದುರ್ಬಲ ಎಂದು ಹೇಳಬಹುದು. ಆದರೆ, ಬಾಂಗ್ಲಾದೇಶದ ವಿರುದ್ಧ ಅವರು ಯಾವ ರೀತಿ ಆಡಿದರು ಎನ್ನುವುದನ್ನು ಗಮನಿಸ ಬೇಕಿದೆ. ಯಾವುದೇ ತಂಡವನ್ನು ಹಗುರವಾಗಿ ಪರಿಣಿಸಲು ಸಾಧ್ಯವಿಲ್ಲದ ಕಾರಣ, ಭಾರತವು ಇನ್ನೂ ಜಾಗರೂಕತೆಯಿಂದ ಕೂಡಿರಬೇಕು. ಸೆಮಿಫೈನಲ್‌ಗೆ ಪೈಪೋಟಿ ಬಿಗಿಯಾಗಿರುವುದರಿಂದ, ನೆದರ್ಲೆಂಡ್ಸ್ ವಿರುದ್ಧ ಹೆಚ್ಚಿನ ಅಂತರದಲ್ಲಿ ಗೆಲ್ಲುವ ಮೂಲಕ ರನ್‌ರೇಟ್ ಉತ್ತಮಪಡಿಸಿಕೊಳ್ಳ ಬೇಕಿದೆ.
ಟೀಮ್ ಇಂಡಿಯಾ ಬ್ಯಾಟಿಂಗ್ ವಿಭಾಗದಲ್ಲಿ ಸುಧಾರಣೆ ಕಾಣಬೇಕಿದೆ. ಓಪನರ್ಗಳಾದ ಕೆಎಲ್ ರಾಹುಲ್ ಹಾಗೂ ನಾಯಕ ರೋಹಿತ್ ಶರ್ಮಾ ತಂಡಕ್ಕೆ ಉತ್ತಮ ಆರಂಭ ಒದಗಿಸಬೇಕಿದೆ. ಸೂರ್ಯಕುಮಾರ್ ಯಾದವ್ ಕೂಡ ಎಚ್ಚರಿಕೆಯಿಂದ ಬ್ಯಾಟ್ ಬೀಸಬೇಕಿದೆ. ಕೊಹ್ಲಿ ಹಾರ್ದಿಕ್ ಉತ್ತಮ ಫಾರ್ಮ್ನಲ್ಲಿದ್ದಾರೆ. ದಿನೇಶ್ ಕಾರ್ತಿಕ್ ಕೊಡುಗೆ ತಂಡಕ್ಕೆ ಇನ್ನೂ ಬೇಕಾಗಿದೆ. ಬೌಲಿಂಗ್ ವಿಭಾಗದಲ್ಲಿ ಕೂಡ ಭಾರತ ಬಿಗಿಯಾಗಬೇಕಿದೆ. ಯುಜ್ವೇಂದ್ರ ಚಹಲ್, ಹರ್ಷಲ್ ಪಟೇಲ್, ರಿಷಭ್ ಪಂತ್, ದೀಪಕ್ ಹೂಡ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಆದರೆ, ಟೀಮ್ ಇಂಡಿಯಾದಲ್ಲಿ ಬದಲಾವಣೆ ಅನುಮಾನ.
ಭಾರತ ಮತ್ತು ನೆದರ್ಲೆಂಡ್ಸ್ ನಡುವಿನ ಪಂದ್ಯ ಮಧ್ಯಾಹ್ನ 12:30ಕ್ಕೆ ಆರಂಭವಾಗಲಿದೆ. 12 ಗಂಟೆಗೆ ಟಾಸ್ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ವಿವಿಧ ಚಾನೆಲ್‌ಗಳಲ್ಲಿ ಭಾರತ ಮತ್ತು ನೆದರ್ಲೆಂಡ್ಸ್ ನಡುವಿನ ಪಂದ್ಯದ ನೇರ ಪ್ರಸಾರವಾಗಲಿದೆ. ಲೈವ್ ಸ್ಟ್ರೀಮಿಂಗ್ ಅನ್ನು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು. ಹಾಗೆಯೇ TV9Kannada.com ನಲ್ಲಿ ಈ ಪಂದ್ಯದ ಲೈವ್ ನವೀಕರಣಗಳನ್ನು ಸಹ ಓದಬಹುದು.
ಸಂಭಾವ್ಯ ತಂಡ:
ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್/ಯುಜ್ವೇಂದ್ರ ಚಹಲ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್.
ನೆದರ್ಲೆಂಡ್ಸ್: ಸ್ಕಾಟ್ ಎಡ್ವರ್ಡ್ಸ್ (ನಾಯಕ), ಮ್ಯಾಕ್ಸ್ ಓಡೌಡ್, ವಿಕ್ರಮಜಿತ್ ಸಿಂಗ್, ಬಾಸ್ ಡಿ ಲೀಡೆ, ಕಾಲಿನ್ ಅಕರ್ಮನ್, ಟಾಮ್ ಕೂಪರ್, ಟಿಮ್ ಪ್ರಿಂಗಲ್, ಪಾಲ್ ವ್ಯಾನ್ ಮೀಕೆರೆನ್, ಲೋಗನ್ ವ್ಯಾನ್ ಬೀಕ್, ಫ್ರೆಡ್ ಕ್ಲಾಸೆನ್, ಶರೀಜ್ ಅಹ್ಮದ್.
Published On - 7:51 am, Thu, 27 October 22