AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ಏಕದಿನ ವಿಶ್ವಕಪ್‌ ಕಿರೀಟ

India Women's Cricket Team Wins 2025 World Cup: 2025ರ ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಆತಿಥೇಯ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ಬರೆದಿದೆ. ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಭಾರತ 288 ರನ್ ಗಳಿಸಿ, ಎದುರಾಳಿಗಳನ್ನು ಹಿಮ್ಮೆಟ್ಟಿಸಿ ಪ್ರಶಸ್ತಿಯನ್ನು ಎತ್ತಿಹಿಡಿಯುವಲ್ಲಿ ಯಶಸ್ವಿಯಾಗಿದೆ. ಇದು ಭಾರತ ಮಹಿಳಾ ಕ್ರಿಕೆಟ್‌ಗೆ ಒಂದು ಸ್ಮರಣೀಯ ಕ್ಷಣ.

World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ಏಕದಿನ ವಿಶ್ವಕಪ್‌ ಕಿರೀಟ
India Womens
ಪೃಥ್ವಿಶಂಕರ
|

Updated on:Nov 03, 2025 | 1:11 AM

Share

150 ಕೋಟಿ ಭಾರತೀಯರು ಬಹಳ ದಿನಗಳಿಂದ ಕಾಯುತ್ತಿದ್ದದ್ದನ್ನು ಭಾರತದ ಹೆಣ್ಣುಮಕ್ಕಳು ಮಾಡಿ ತೋರಿಸಿದ್ದಾರೆ. 2025 ರ ಮಹಿಳಾ ವಿಶ್ವಕಪ್​ನ ಫೈನಲ್ (Women’s ODI World Cup Final 2025) ಪಂದ್ಯದಲ್ಲಿ ಆತಿಥೇಯ ಭಾರತ, ದಕ್ಷಿಣ ಆಫ್ರಿಕಾ (India vs South Africa) ತಂಡವನ್ನು ಸೋಲಿಸಿ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಎತ್ತಿಹಿಡಿದಿದೆ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ವನಿತಾ ಪಡೆ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 288 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 45.3 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 246 ರನ್ ಕಲೆಹಾಕಲಷ್ಟೇ ಶಕ್ತವಾಗಿ 52 ರನ್​ಗಳಿಗೆ ಸೋಲೊಪ್ಪಿಕೊಂಡಿತು. ಈ ಮೂಲಕ ಭಾರತ ತಂಡ ಮೂರನೇ ಬಾರಿಗೆ ವಿಶ್ವಕಪ್ ಫೈನಲ್​ಗೇರಿ ಟ್ರೋಫಿಯನ್ನು ಎತ್ತಿಹಿಡಿಯುವಲ್ಲಿ ಯಶಸ್ವಿಯಾಗಿದೆ.

ಭಾರತವನ್ನು ಗೆಲ್ಲಿಸಿದ ಶಫಾಲಿ, ದೀಪ್ತಿ

ಭಾರತದ ಗೆಲುವಿನ ರೂವಾರಿ ಶಫಾಲಿ ವರ್ಮಾ ಮತ್ತು ದೀಪ್ತಿ ಶರ್ಮಾ ಎಂದರೆ ತಪ್ಪಾಗಲಾರದು. ಬದಲಿ ಆಟಗಾರ್ತಿಯಾಗಿ ವಿಶ್ವಕಪ್​ಗೆ ಎಂಟ್ರಿಕೊಟ್ಟಿದ್ದ ಶಫಾಲಿ ವರ್ಮಾ ಮೊದಲು ಬ್ಯಾಟಿಂಗ್​​ನಲ್ಲಿ ಸಿಡಿಲಬ್ಬರದ 87 ರನ್​ಗಳ ಇನ್ನಿಂಗ್ಸ್ ಆಡಿದರೆ, ಬೌಲಿಂಗ್​​ನಲ್ಲೂ ಪ್ರಮುಖ 2 ವಿಕೆಟ್ ಪಡೆದರು. ಇವರ ಜೊತೆಗೆ ನಾನು ಎಂತಹ ಆಲ್​ರೌಂಡರ್ ಎಂಬುದನ್ನು ಮತ್ತೊಮ್ಮೆ ಸಾಭೀತುಪಡಿಸಿದ ದೀಪ್ತ ಶರ್ಮಾ, ಮೊದಲು ಬ್ಯಾಟಿಂಗ್​ನಲ್ಲಿ 58 ರನ್​ಗಳ ಇನ್ನಿಂಗ್ಸ್ ಆಡಿದರೆ, ಬೌಲಿಂಗ್​ನಲ್ಲಿ ಐದು ವಿಕೆಟ್ ಪಡೆಯುವದರ ಜೊತೆಗೆ ಒಬ್ಬರನ್ನು ರನೌಟ್ ಕೂಡ ಮಾಡಿದರು.

ಮೊದಲ ವಿಕೆಟ್​ಗೆ ಶತಕದ ಜೊತೆಯಾಟ

ಇಡೀ ವಿಶ್ವಕಪ್​ನಲ್ಲಿ ಟಾಸ್ ಸೋಲುವುದಕ್ಕೆ ಹೆಸರು ವಾಸಿಯಾಗಿದ್ದ ಹರ್ಮನ್‌ಪ್ರೀತ್ ಕೌರ್, ಫೈನಲ್ ಪಂದ್ಯದಲ್ಲೂ ಟಾಸ್ ಸೋತರು. ಆದರೆ ಟಾಸ್ ಸೋತಿದ್ದು ಒಳ್ಳೆಯದ್ದು ಆಯಿತು ಎಂಬುದನ್ನು ಇಡೀ ತಂಡ ತನ್ನ ಸಾಂಘಿಕ ಪ್ರದರ್ಶನದ ಮೂಲಕ ಸಾಭೀತುಪಡಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಆರಂಭಿಕರಾದ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಉತ್ತಮ ಆರಂಭ ನೀಡಿದರು. ಈ ಇಬ್ಬರು ಮೊದಲ ವಿಕೆಟ್‌ಗೆ 104 ರನ್‌ಗಳ ಜೊತೆಯಾಟ ಆಡಿದರು.

ದೀಪ್ತಿ, ರಿಚಾ ನಿರ್ಣಾಯಕ ಇನ್ನಿಂಗ್ಸ್

ಈ ಹಂತದಲ್ಲಿ ಸ್ಮೃತಿ ಮಂಧಾನ 45 ರನ್‌ಗಳಿಸಿ ಔಟಾದರೂ, ಶಫಾಲಿ ವರ್ಮಾ ಮಾತ್ರ ತಮ್ಮ ಆಟ ಮುಂದುವರೆಸಿ 87 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಬಲಿಷ್ಠ ಸ್ಥಿತಿಯಲ್ಲಿ ಇರಿಸಿದರು. ಶಫಾಲಿ ಜೊತೆಗೆ, ದೀಪ್ತಿ ಶರ್ಮಾ ಕೂಡ ಮಧ್ಯಮ ಕ್ರಮಾಂಕದಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿ 100 ರ ಸ್ಟ್ರೈಕ್ ರೇಟ್‌ನಲ್ಲಿ 58 ರನ್‌ ಬಾರಿಸಿದರು. ವಿಕೆಟ್ ಕೀಪರ್ ರಿಚಾ ಘೋಷ್ ಕೂಡ 24 ಎಸೆತಗಳಲ್ಲಿ 34 ರನ್‌ಗಳ ಇನ್ನಿಂಗ್ಸ್ ಆಡಿದರು. ಇವರ ಆಟದಿಂದಾಗಿ ತಂಡವು 50 ಓವರ್​ಗಳಲ್ಲಿ 298 ರನ್‌ಗಳನ್ನು ಕಲೆಹಾಕಿತು.

ಲೌರಾ ವೋಲ್ವಾರ್ಡ್ ಹೋರಾಟ ವ್ಯರ್ಥ

ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 246 ರನ್‌ಗಳಿಗೆ ಆಲೌಟ್ ಆಯಿತು. ದೀಪ್ತಿ ಶರ್ಮಾ ಅವರ ಸ್ಪಿನ್ ಮ್ಯಾಜಿಕ್​ಗೆ ಮಕಾಡೆ ಮಲಗಿದ ಆಫ್ರಿಕಾ 52 ರನ್​ಗಳ ಸೋಲೊಪ್ಪಿಕೊಂಡಿತು. ಫೈನಲ್ ಪಂದ್ಯದಲ್ಲಿ ಆಲ್‌ರೌಂಡರ್ ಪ್ರದರ್ಶನ ನೀಡಿದ ದೀಪ್ತಿ ಐದು ವಿಕೆಟ್‌ಗಳನ್ನು ಪಡೆದರು. ಇತ್ತ ದಕ್ಷಿಣ ಆಫ್ರಿಕಾ ಪರ ಏಕಾಂಗಿ ಹೋರಾಟ ನಡೆಸಿದ ನಾಯಕಿ ಲೌರಾ ವೋಲ್ವಾರ್ಡ್ 101 ರನ್‌ಗಳ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಯಶಸ್ವಿಯಾಗಲಿಲ್ಲ.

ಪ್ರಶಸ್ತಿ ಬರ ನೀಗಿಸಿಕೊಂಡ ಹರ್ಮನ್

ಈ ಮೂಲಕ ಭಾರತ ವನಿತಾ ಪಡೆ 52 ವರ್ಷಗಳ ಮಹಿಳಾ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ. ಹಾಗೆಯೇ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೂ ಈ ಗೆಲುವು ತುಂಬಾ ವಿಶೇಷವಾಗಿದೆ. ಏಕೆಂದರೆ ಇದಕ್ಕೂ ಮೊದಲು 12 ಐಸಿಸಿ ಟೂರ್ನಮೆಂಟ್‌ಗಳಲ್ಲಿ ಆಡಿದ್ದ ಹರ್ಮನ್​ ಪ್ರತಿ ಬಾರಿಯೂ ಟ್ರೋಫಿ ಎತ್ತಿಹಿಡಿಯಲು ವಿಫಲರಾಗಿದ್ದರು. ಹರ್ಮನ್, 2009, 2013, 2017 ಮತ್ತು 2022 ರಲ್ಲಿ ಏಕದಿನ ವಿಶ್ವಕಪ್‌ ಪಂದ್ಯಾವಳಿಯನ್ನು ಆಡಿದ್ದರು. ಹಾಗೆಯೇ 2009, 2010, 2012, 2014, 2016, 2018, 2020 ಮತ್ತು 2023 ರಲ್ಲಿ ಟಿ20 ವಿಶ್ವಕಪ್‌ನಲ್ಲಿಯೂ ಭಾಗವಹಿಸಿದ್ದರು. ಆದರೆ ಯಾವ ಐಸಿಸಿ ಟೂರ್ನಿಯಲ್ಲೂ ಟ್ರೋಫಿ ಎತ್ತಿಹಿಡಿದಿರಲಿಲ್ಲ. ಇದೀಗ ಅವರ ಪ್ರಶಸ್ತಿ ಬರ ಕೊನೆಗೂ ನೀಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:01 am, Mon, 3 November 25