ಮಿಂಚಿದ ಜೆಮಿಮಾ, ಅಮನ್ಜೋತ್: ಭಾರತಕ್ಕೆ ಭರ್ಜರಿ ಜಯ
India Women Vs England Women T20I: ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳ ನಡುವಣ 5 ಪಂದ್ಯಗಳ ಟಿ20 ಸರಣಿಯ ದ್ವಿತೀಯ ಪಂದ್ಯದಲ್ಲೂ ಟೀಮ್ ಇಂಡಿಯಾ ಜಯ ಸಾಧಿಸಿದೆ. ಈ ಸರಣಿಯ ಮೊದಲ ಮ್ಯಾಚ್ನಲ್ಲಿ ಭಾರತ ತಂಡವು 97 ರನ್ಗಳ ಭರ್ಜರಿ ಗೆಲುವು ದಾಖಲಿಸಿತ್ತು.

ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ ಭರ್ಜರಿ ಜಯ ಸಾಧಿಸಿದೆ. ಬ್ರಿಸ್ಟಲ್ನ ಕೌಂಟಿ ಗ್ರೌಂಡ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಸ್ಮೃತಿ ಮಂಧಾನ (13) ಹಾಗೂ ಶಫಾಲಿ ವರ್ಮಾ (3) ಬೇಗನೆ ವಿಕೆಟ್ ಒಪ್ಪಿಸಿದ್ದರು. ಇನ್ನು ನಾಯಕಿ ಹರ್ಮನ್ ಪ್ರೀತ್ ಕೌರ್ 1 ರನ್ ಗಳಿಸಿ ಔಟಾದರು.
ಕೇವಲ 31 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಟೀಮ್ ಇಂಡಿಯಾಗೆ ಆಸರೆಯಾಗಿ ನಿಂತದ್ದು ಜೆಮಿಮಾ ರೊಡ್ರಿಗಸ್ ಹಾಗೂ ಅಮನ್ಜೊತ್ ಕೌರ್. 4ನೇ ವಿಕೆಟ್ ಗೆ ಜೊತೆಗೂಡಿದ ಈ ಜೋಡಿ ಬರೋಬ್ಬರಿ 93 ರನ್ಗಳ ಜೊತೆಯಾಟವಾಡಿದರು.
ಇದರ ನಡುವೆ ಜೆಮಿಮಾ 41 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 9 ಫೋರ್ ಗಳೊಂದಿಗೆ 63 ರನ್ ಬಾರಿಸಿದರೆ, ಅಮನ್ಜೊತ್ ಕೌರ್ 40 ಎಸೆತಗಳಲ್ಲಿ 9 ಫೋರ್ ಗಳೊಂದಿಗೆ ಅಜೇಯ 63 ರನ್ ಗಳಿಸಿದರು. ಈ ಮೂಲಕ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 181 ರನ್ ಕಲೆಹಾಕಿತು.
182 ರನ್ ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು 17 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕಣಕ್ಕಿಳಿದ ಟಾಮಿ ಬ್ಯೂಮಾಂಟ್ 54 ರನ್ ಗಳಿಸಿದರೆ, ಆ್ಯಮಿ ಜೋನ್ಸ್ 32 ರನ್ ಬಾರಿಸಿದರು.
ಇದಾಗ್ಯೂ ಉಳಿದ ಬ್ಯಾಟರ್ ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಇಂಗ್ಲೆಂಡ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 157 ರನ್ ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಟೀಮ್ ಇಂಡಿಯಾ 24 ರನ್ ಗಳ ಭರ್ಜರಿ ಜಯ ಸಾಧಿಸಿದೆ.
ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್: ಸೋಫಿಯಾ ಡಂಕ್ಲಿ , ಡೇನಿಯಲ್ ವ್ಯಾಟ್-ಹಾಡ್ಜ್ , ನ್ಯಾಟ್ ಸ್ಕೀವರ್-ಬ್ರಂಟ್ (ನಾಯಕಿ) , ಟಾಮಿ ಬ್ಯೂಮಾಂಟ್ , ಆ್ಯಮಿ ಜೋನ್ಸ್ (ವಿಕೆಟ್ ಕೀಪರ್) , ಆಲಿಸ್ ಕ್ಯಾಪ್ಸೆ , ಎಮ್ ಆರ್ಲಾಟ್ , ಸೋಫಿ ಎಕ್ಲೆಸ್ಟೋನ್ , ಲಾರೆನ್ ಫೈಲರ್ , ಲಿನ್ಸೆ ಸ್ಮಿತ್ , ಲಾರೆನ್ ಬೆಲ್.
ಇದನ್ನೂ ಓದಿ: IPL 2026: ಚೆನ್ನೈ ಸೂಪರ್ ಕಿಂಗ್ಸ್ಗೆ ಸಂಜು ಸ್ಯಾಮ್ಸನ್?
ಭಾರತ ಪ್ಲೇಯಿಂಗ್ ಇಲೆವೆನ್: ಶಫಾಲಿ ವರ್ಮಾ , ಸ್ಮೃತಿ ಮಂಧಾನ , ಹರ್ಮನ್‌ಪ್ರೀತ್ ಕೌರ್ (ನಾಯಕಿ) , ಜೆಮಿಮಾ ರೊಡ್ರಿಗಸ್ , ಅಮನ್ಜೊತ್ ಕೌರ್ , ರಿಚಾ ಘೋಷ್ ( ವಿಕೆಟ್ ಕೀಪರ್ ) , ದೀಪ್ತಿ ಶರ್ಮಾ , ರಾಧಾ ಯಾದವ್ , ಅರುಂಧತಿ ರೆಡ್ಡಿ , ಸ್ನೇಹ್ ರಾಣಾ , ಶ್ರೀ ಚರಣಿ.
