ಇಂಗ್ಲೆಂಡ್ನಲ್ಲಿ ಇತಿಹಾಸ ನಿರ್ಮಿಸಿದ ಟೀಮ್ ಇಂಡಿಯಾ
England Women vs India Women: ಇಂಗ್ಲೆಂಡ್ನಲ್ಲಿ ನಡೆದ ಮೂರನೇ ಮಹಿಳಾ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 50 ಓವರ್ಗಳಲ್ಲಿ 318 ರನ್ ಕಲೆಹಾಕಿತು. ಈ ಕಠಿಣ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಮಹಿಳಾ ತಂಡವು 305 ರನ್ಗಳಿಗೆ ಆಲೌಟ್ ಆಗಿದ್ದಾರೆ. ಈ ಮೂಲಕ ಭಾರತ ಮಹಿಳಾ ತಂಡ 13 ರನ್ಗಳ ಜಯ ಸಾಧಿಸಿದೆ.

ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ. ವಿಶೇಷ ಎಂದರೆ ಭಾರತ ಮಹಿಳಾ ತಂಡ ಇದೇ ಮೊದಲ ಬಾರಿಗೆ ಇಂಗ್ಲೆಂಡ್ನಲ್ಲಿ ಏಕದಿನ ಹಾಗೂ ಟಿ20 ಸರಣಿಯನ್ನು ಗೆದ್ದುಕೊಂಡಿದೆ. ಈ ಮೂಲಕ ಹೊಸ ಇತಿಹಾಸ ನಿರ್ಮಿಸುವಲ್ಲಿ ಹರ್ಮನ್ಪ್ರೀತ್ ಕೌರ್ ಪಡೆ ಯಶಸ್ವಿಯಾಗಿದೆ.
ಇದಕ್ಕೂ ಮುನ್ನ ನಡೆದ 5 ಪಂದ್ಯಗಳ ಟಿ20 ಸರಣಿಯನ್ನು ಟೀಮ್ ಇಂಡಿಯಾ 3-2 ಅಂತರದಿಂದ ಗೆದ್ದುಕೊಂಡಿದ್ದರು. ಇದೀಗ ಏಕದಿನ ಸರಣಿಯಲ್ಳೂ ಆತಿಥೇಯರನ್ನು ಬಗ್ಗು ಬಡಿಯುವಲ್ಲಿ ಭಾರತೀಯ ವನಿತಾ ಪಡೆ ಯಶಸ್ವಿಯಾಗಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ 49 ವರ್ಷಗಳ ಕಾಯುವಿಕೆಯನ್ನು ಅಂತ್ಯಗೊಳಿಸಿದ್ದಾರೆ.
ಇನ್ನು ಈ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡವು 4 ವಿಕೆಟ್ಗಳ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಏಕದಿನ ಪಂದ್ಯದಲ್ಲಿ 8 ವಿಕೆಟ್ಗಳ ಗೆಲುವು ಸಾಧಿಸಿ ಇಂಗ್ಲೆಂಡ್ ಸರಣಿಯನ್ನು 1-1 ಅಂತರದಿಂದ ಸಮಬಲಗೊಳಿಸಿದ್ದರು. ಹೀಗಾಗಿ ಮೂರನೇ ಏಕದಿನ ಪಂದ್ಯವು ಫೈನಲ್ ಫೈಟ್ ಆಗಿ ಮಾರ್ಪಟ್ಟಿತು.
ಸರಣಿ ನಿರ್ಣಾಯಕ ಪಂದ್ಯ:
ಚೆಸ್ಟರ್-ಲೆ-ಸ್ಟ್ರೀಟ್ನ ರಿವರ್ಸೈಡ್ ಮೈದಾನದಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕಿ ಹರ್ಮನ್ಪ್ರೀತ್ ಕೌರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾಗೆ ಆಟಗಾರ್ತಿ ಸ್ಮೃತಿ ಮಂಧಾನ (45) ಉತ್ತಮ ಆರಂಭ ಒದಗಿಸಿದ್ದರು. ಆ ಬಳಿಕ ಬಂದ ಹರ್ಲೀನ್ ಡಿಯೋಲ್ ಕೂಡ 45 ರನ್ಗಳ ಕೊಡುಗೆ ನೀಡಿದರು.
ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ನಾಯಕಿ ಹರ್ಮನ್ಪ್ರೀತ್ ಕೌರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಹರ್ಮನ್ ಕೇವಲ 84 ಎಸೆತಗಳಲ್ಲಿ 14 ಫೋರ್ಗಳೊಂದಿಗೆ 102 ರನ್ ಚಚ್ಚಿದರು.
ಹರ್ಮನ್ಪ್ರೀತ್ ಕೌರ್ಗೆ ಉತ್ತಮ ಸಾಥ್ ನೀಡಿದ ಜೆಮಿಮಾ ರೊಡ್ರಿಗಸ್ 45 ಎಸೆತಗಳಲ್ಲಿ 50 ರನ್ ಕಲೆಹಾಕಿದರು. ಈ ಮೂಲಕ ಟೀಮ್ ಇಂಡಿಯಾ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 318 ರನ್ ಗಳಿಸಿತು.
319 ರನ್ಗಳ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ಪರ ಎಮ್ಮಾ ಲಾಂಬ್ 68 ರನ್ ಬಾರಿಸಿದರೆ, ನಾಯಕಿ ನ್ಯಾಟ್ ಸಿವರ್ ಬ್ರಂಟ್ 98 ರನ್ಗಳಿಸಿದರು. ಇನ್ನು ಸೋಫಿಯಾ ಡಂಕ್ಲಿ 34 ರನ್, ಆಲೀಸ್ ಡೇವಿಡ್ಸನ್ 44 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಇಂಗ್ಲೆಂಡ್ ತಂಡ 40 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 228 ರನ್ ಕಲೆಹಾಕಿದ್ದರು.
ಆದರೆ ಅಂತಿಮ 10 ಓವರ್ಗಳಲ್ಲಿ ಬಿಗು ದಾಳಿ ಸಂಘಟಿಸಿದ ಟೀಮ್ ಇಂಡಿಯಾ ಬೌಲರ್ಗಳು ರನ್ ಗತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಅಲ್ಲದೆ 49.5 ಓವರ್ಗಳಲ್ಲಿ 305 ರನ್ಗಳಿಗೆ ಇಂಗ್ಲೆಂಡ್ ತಂಡವನ್ನು ಆಲೌಟ್ ಮಾಡಿ 13 ರನ್ಗಳ ಗೆಲುವು ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಟೀಮ್ ಇಂಡಿಯಾ ಪರ ಯುವ ಬೌಲರ್ ಕ್ರಾಂತಿ ಗೌಡ್ 9.5 ಓವರ್ಗಳಲ್ಲಿ 52 ರನ್ ನೀಡಿ 6 ವಿಕೆಟ್ ಕಬಳಿಸಿ ಮಿಂಚಿದರು.
ಈ ಗೆಲುವಿನೊಂದಿಗೆ ಭಾರತ ತಂಡವು ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಆಂಗ್ಲರ ನಾಡಿನಲ್ಲಿ ಭಾರತ ಮಹಿಳಾ ತಂಡ ಏಕದಿನ ಹಾಗೂ ಟಿ20 ಸರಣಿ ಗೆದ್ದ ಐತಿಹಾಸಿಕ ಸಾಧನೆ ಮಾಡಿದೆ.
ಇಂಗ್ಲೆಂಡ್ ಪ್ಲೇಯಿಂಗ್ 11: ಟ್ಯಾಮಿ ಬ್ಯೂಮಾಂಟ್ , ಆ್ಯಮಿ ಜೋನ್ಸ್ (ವಿಕೆಟ್ ಕೀಪರ್) , ಎಮ್ಮಾ ಲಾಂಬ್ , ನ್ಯಾಟ್ ಸಿವರ್-ಬ್ರಂಟ್ (ನಾಯಕಿ) , ಸೋಫಿಯಾ ಡಂಕ್ಲಿ , ಆಲಿಸ್ ಡೇವಿಡ್ಸನ್ ರಿಚರ್ಡ್ಸ್ , ಷಾರ್ಲೆಟ್ ಡೀನ್ , ಸೋಫಿ ಎಕ್ಲೆಸ್ಟೋನ್ , ಲಿನ್ಸೆ ಸ್ಮಿತ್ , ಲಾರೆನ್ ಫೈಲರ್ , ಲಾರೆನ್ ಬೆಲ್.
ಇದನ್ನೂ ಓದಿ: ಹದಿನೈದಕ್ಕೆ ಐದು… ಅತ್ಯಂತ ಹೀನಾಯ ದಾಖಲೆ ಬರೆದ ಪಾಕಿಸ್ತಾನ್
ಭಾರತ ಪ್ಲೇಯಿಂಗ್ 11: ಸ್ಮೃತಿ ಮಂಧಾನ , ಪ್ರತೀಕಾ ರಾವಲ್ , ಹರ್ಲೀನ್ ಡಿಯೋಲ್ , ಹರ್ಮನ್ಪ್ರೀತ್ ಕೌರ್ (ನಾಯಕಿ) , ಜೆಮಿಮಾ ರೊಡ್ರಿಗಸ್ , ರಿಚಾ ಘೋಷ್ (ವಿಕೆಟ್ ಕೀಪರ್) , ದೀಪ್ತಿ ಶರ್ಮಾ , ರಾಧಾ ಯಾದವ್ , ಸ್ನೇಹ್ ರಾಣಾ , ಶ್ರೀ ಚರಣಿ , ಕ್ರಾಂತಿ ಗೌಡ್.
