IPL 2024 Auction: ಐಪಿಎಲ್ 2024 ಆಕ್ಷನ್ ದಿನಾಂಕ ಪ್ರಕಟ: ಇದೇ ಮೊದಲ ಬಾರಿಗೆ ವಿದೇಶದಲ್ಲಿ ಹರಾಜು
IPL 2024 mini auction to be held in Dubai: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಹರಾಜು ದಿನಾಂಕ ಪ್ರಕಟವಾಗಿದ್ದು, ಇದೇ ಡಿಸೆಂಬರ್ 19 ರಂದು ದುಬೈನಲ್ಲಿ ಆಯೋಜಿಸಲಾಗಿದೆ. ಈ ಮೂಲಕ ಮೊದಲ ಬಾರಿಗೆ ವಿದೇಶದಲ್ಲಿ ಐಪಿಎಲ್ ಆಕ್ಷನ್ ನಡೆಯುತ್ತಿದೆ. ಹರಾಜಿನಲ್ಲಿ 830 ಭಾರತೀಯ ಆಟಗಾರರು ಮತ್ತು 336 ವಿದೇಶಿ ಆಟಗಾರರು ಹೆಸರು ನೋಂದಾಯಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಹರಾಜು (IPL 2024 Auction) ದಿನಾಂಕ ಅಧಿಕೃತವಾಗಿ ಪ್ರಕಟವಾಗಿದೆ. ಇದೇ ಡಿಸೆಂಬರ್ 19 ರಂದು ದುಬೈನಲ್ಲಿ ಐಪಿಎಲ್ 2024 ಮಿನಿ ಆಕ್ಷನ್ ನಡೆಯಲಿದೆ. ಈ ಬಗ್ಗೆ ಇಂಡಿಯನ್ ಪ್ರೀಮಿಯರ್ ಲೀಗ್ ಅಧಿಕೃತವಾಗಿ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದೆ. ಈ ಮೂಲಕ ಇದೇ ಮೊದಲ ಬಾರಿಗೆ ವಿದೇಶದಲ್ಲಿ ಆಕ್ಷನ್ ನಡೆಯುತ್ತಿದೆ. ದುಬೈನಲ್ಲಿ ನಡೆಯಲಿರುವ ಹರಾಜಿನಲ್ಲಿ 830 ಭಾರತೀಯ ಆಟಗಾರರು ಮತ್ತು 336 ವಿದೇಶಿ ಆಟಗಾರರು ಹೆಸರು ನೋಂದಾಯಿಸಿದ್ದಾರೆ. ಇದರಲ್ಲಿ ಶಾರ್ಟ್‌ಲಿಸ್ಟ್ ಮಾಡಿದ ಆಟಗಾರರು ಮಾತ್ರ ಹರಾಜಿಗೆ ಪ್ರವೇಶಿಸಲು ಸಾಧ್ಯ. ಅಂದಾಜಿನ ಪ್ರಕಾರ, 70 ಸ್ಥಾನಗಳನ್ನು ತುಂಬಲು 1000 ಕ್ಕೂ ಹೆಚ್ಚು ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಈ ಬಾರಿಯ ಹರಾಜಿನಲ್ಲಿ ಟ್ರಾವಿಸ್ ಹೆಡ್, ಪ್ಯಾಟ್ ಕಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಸೇರಿದಂತೆ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾದ ಸ್ಟಾರ್ ಆಟಗಾರರು ಭಾಗವಾಗಲಿದ್ದಾರೆ. ಮೂವರೂ ತಮ್ಮ ಮೂಲ ಬೆಲೆಯನ್ನು ರೂ. 2 ಕೋಟಿ ನಿಗದಿಪಡಿಸಿದ್ದಾರೆ. ನ್ಯೂಝಿಲೆಂಡ್‌ನ ಸ್ಟಾರ್ ಯುವ ಆಲ್‌ರೌಂಡರ್ ರಚಿನ್ ರವೀಂದ್ರ ರೂ. 50 ಕೋಟಿ ಮೂಲ ಬೆಲೆಗೆ ಲಭ್ಯವಾಗಲಿದ್ದಾರೆ. ರವೀಂದ್ರ ಅವರು 2023 ರ ವಿಶ್ವಕಪ್‌ನಲ್ಲಿ ತಮ್ಮ ಅದ್ಭುತ ಪ್ರದರ್ಶನದೊಂದಿಗೆ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ. ಇವರು 10 ಪಂದ್ಯಗಳಲ್ಲಿ 543 ರನ್ ಮತ್ತು 5 ವಿಕೆಟ್ ಪಡೆದಿದ್ದರು.
𝗜𝗣𝗟 𝟮𝟬𝟮𝟰 𝗔𝘂𝗰𝘁𝗶𝗼𝗻 🔨
🗓️ 19th December
📍 𝗗𝗨𝗕𝗔𝗜 🤩
ARE. YOU. READY ❓ #IPLAuction | #IPL pic.twitter.com/TmmqDNObKR
— IndianPremierLeague (@IPL) December 3, 2023
ಐಪಿಎಲ್ ಸಂಘಟನಾ ಸಮಿತಿಯು ಆಟಗಾರರ ಪಟ್ಟಿಯನ್ನು ಶಾರ್ಟ್ ಲಿಸ್ಟ್ ಮಾಡಲಿದ್ದು, ಮುಂಬರುವ ದಿನಗಳಲ್ಲಿ ಹರಾಜಿನಲ್ಲಿ ಲಭ್ಯವಿರುವ ಆಟಗಾರರ ಪಟ್ಟಿಯನ್ನು ಪ್ರಕಟಿಸಲಿದೆ. ಐಪಿಎಲ್ 2024 ಟ್ರೇಡ್ ವಿಂಡೋ ಈಗಲೂ ತೆರೆದಿದ್ದು, ಮಿನಿ ಹರಾಜಿನ ಒಂದು ವಾರದ ಮೊದಲು ಡಿಸೆಂಬರ್ 12 ರ ವರೆಗೆ ಬದಲಾವಣೆ ಮಾಡಬಹುದಾಗಿದೆ.
IPL 2024: ಐಪಿಎಲ್ ಹರಾಜಿನಲ್ಲಿ ಎಷ್ಟು ಆಟಗಾರರಿಗೆ ಅವಕಾಶ?
ವಿದೇಶದಲ್ಲಿ ಐಪಿಎಲ್ 2024:
ಈ ಬಾರಿಯ ಐಪಿಎಲ್ ಭಾರತದಲ್ಲಿ ನಡೆಯುವುದು ಕೂಡ ಅನುಮಾನ ಎನ್ನಲಾಗುತ್ತಿದೆ. ಮಾಹಿತಿ ಪ್ರಕಾರ, ಮುಂದಿನ ವರ್ಷ ದೇಶದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ದಿನಾಂಕಗಳನ್ನು ಚುನಾವಣಾ ಆಯೋಗ ಪ್ರಕಟಿಸಿದ ನಂತರವೇ ಐಪಿಎಲ್ ಅಧಿಕಾರಿಗಳು ಟೂರ್ನಿ ಎಲ್ಲಿ ನಡೆಯಬೇಕು ಹಾಗೂ ವೇಳಾಪಟ್ಟಿ ಸಿದ್ದತೆಯನ್ನು ಆರಂಭಿಸಲಿದ್ದಾರೆ. ಸಾರ್ವತ್ರಿಕ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸುವವರೆಗೆ, ಐಪಿಎಲ್ 2024 ಪಂದ್ಯಗಳ ದಿನಾಂಕ, ಸಮಯ ಮತ್ತು ಸ್ಥಳವನ್ನು ದೃಢೀಕರಿಸಲಾಗುವುದಿಲ್ಲ. ಸಾರ್ವತ್ರಿಕ ಚುನಾವಣೆಗೆ ಭದ್ರತೆಯೇ ದೊಡ್ಡ ಸಮಸ್ಯೆಯಾಗಲಿದೆ. ಹಾಗಾಗಿ ಐಪಿಎಲ್ ಭಾರತದಲ್ಲಿ ನಡೆಯಬೇಕೋ ಅಥವಾ ದೇಶದ ಹೊರಗೆ ನಡೆಯಬೇಕೋ ಎಂಬುದನ್ನು ಐಪಿಎಲ್ ಆಡಳಿತ ಮಂಡಳಿ ಸಾರ್ವತ್ರಿಕ ಚುನಾವಣೆಯ ದಿನಾಂಕ ಪಟ್ಟಿ ಸಿದ್ಧಪಡಿಸಿದ ನಂತರವೇ ನಿರ್ಧರಿಸಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ