ಇಂಗ್ಲೆಂಡ್ ವಿರುದ್ಧ ಕ್ಲೀನ್‌ಸ್ವೀಪ್ ; ಪಿಪಿಇ ಕಿಟ್ ಧರಿಸಿ ಟೀಂ ಇಂಡಿಯಾ ವನಿತೆಯರ ಕ್ಯಾಟ್‌ವಾಕ್..! ವಿಡಿಯೋ ನೋಡಿ
ಜೆಮಿಮಾ ರಾಡ್ರಿಗಸ್ ಜೊತೆಗೆ ಜೂಲನ್ ಗೋಸ್ವಾಮಿ ಮತ್ತು ಹಾರ್ಲಿನ್ ಡಿಯೋಲ್ ಸೇರಿದಂತೆ ಇತರ ಕ್ರಿಕೆಟಿಗರು ಮಾಡೆಲ್‌ಗಳನ್ನು ಅನುಕರಣೆ ಮಾಡುತ್ತಾ ರ‍್ಯಾಂಪ್ ವಾಕ್ ಮಾಡಿದ್ದಾರೆ.
ಟೀಂ ಇಂಡಿಯಾ ಮಹಿಳಾ ತಂಡ (Indian womens Cricket team) ಬರೋಬ್ಬರಿ 23 ವರ್ಷಗಳ ಬಳಿಕ ಆಂಗ್ಲರ ನಾಡಿನಲ್ಲಿ ಇತಿಹಾಸ ಸೃಷ್ಟಿಸಿದೆ. ಅವರದ್ದೇ ನೆಲದಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್ ತಂಡವನ್ನು ಸೋಲಿಸಿ ಏಕದಿನ ಸರಣಿಯನ್ನು 3-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಹೀಗಾಗಿ ತಮ್ಮ ವೃತ್ತಿಜೀವನದ ಕೊನೆಯ ಪಂದ್ಯವನ್ನಾಡಿದ ಜೂಲನ್ ಗೋಸ್ವಾಮಿಗೆ (Jhulan Goswami) ಹರ್ಮನ್‌ಪ್ರೀತ್ ಸೇನಾ ಭರ್ಜರಿ ವಿದಾಯ ಹೇಳಿತು. ಏತನ್ಮಧ್ಯೆ, ಇಂಗ್ಲೆಂಡ್ ವಿರುದ್ಧದ ಸರಣಿಯ ನಂತರ ಹರ್ಮನ್ ಸೇನೆಗೆ ಯಾವುದೇ ಪಂದ್ಯಗಳಿಲ್ಲ. ಹೀಗಾಗಿ 2023ರ ಏಕದಿನ ವಿಶ್ವಕಪ್ವರೆಗೂ ಟೀಂ ಇಂಡಿಯಾಕ್ಕೆ ಫುಲ್ ರೆಸ್ಟ್ ಸಿಗಲಿದೆ. ಏತನ್ಮಧ್ಯೆ, ಇಂಗ್ಲೆಂಡ್ ವಿರುದ್ಧದ ಸರಣಿಯ ನಂತರ ತವರಿಗೆ ಮರಳಿದ ಟೀಂ ಇಂಡಿಯಾದ ಮಹಿಳಾ ಕ್ರಿಕೆಟಿಗರು ಲಂಡನ್ ವಿಮಾನ ನಿಲ್ದಾಣದಲ್ಲಿ ಪಿಪಿಇ ಕಿಟ್ ಧರಿಸಿ ಕ್ಯಾಟ್‌ವಾಕ್ ಮಾಡಿ ಸಂಭ್ರಮಿಸಿದ್ದಾರೆ.
ಜೆಮಿಮಾ ರಾಡ್ರಿಗಸ್ ಜೊತೆಗೆ ಜೂಲನ್ ಗೋಸ್ವಾಮಿ ಮತ್ತು ಹಾರ್ಲಿನ್ ಡಿಯೋಲ್ ಸೇರಿದಂತೆ ಇತರ ಕ್ರಿಕೆಟಿಗರು ಮಾಡೆಲ್‌ಗಳನ್ನು ಅನುಕರಣೆ ಮಾಡುತ್ತಾ ರ‍್ಯಾಂಪ್ ವಾಕ್ ಮಾಡಿದ್ದಾರೆ. ಈ ಸುಂದರ ವಿಡಿಯೋವನ್ನು ಟೀಂ ಇಂಡಿಯಾ ಮಹಿಳಾ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈಗ ಈ ವಿಡಿಯೋ ಎಲ್ಲೆಡೆ ಸಾಕಷ್ಟು ವೈರಲ್ ಆಗುತ್ತಿದೆ.
i've never loved a team more?
from @JemiRodrigues Instagram post pic.twitter.com/qE5ZsgXFeB
— s (@_sectumsempra18) September 26, 2022
ಅದ್ಧೂರಿ ಸ್ವಾಗತ
ಇದೇ ವೇಳೆ ತಾಯ್ನಾಡಿಗೆ ಆಗಮಿಸಿದ ಟೀಂ ಇಂಡಿಯಾದ ಮಹಿಳಾ ಕ್ರಿಕೆಟಿಗರಿಗೆ ಅದ್ಧೂರಿ ಸ್ವಾಗತ ಕೂಡ ದೊರೆಯಿತು. ಕ್ರಿಕೆಟ್‌ಗೆ ವಿದಾಯ ಹೇಳಿದ ಜೂಲನ್ ಗೋಸ್ವಾಮಿ ಮತ್ತು ಆಲ್‌ರೌಂಡರ್ ದೀಪ್ತಿ ಶರ್ಮಾ ಅವರನ್ನು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು.
ಏತನ್ಮಧ್ಯೆ, ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ, ದೀಪ್ತಿಶರ್ಮಾ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್ ಚಾರ್ಲಿ ಡೀನ್ ಅವರನ್ನು ಮಂಕಡಿಂಗ್ ಮಾಡಿದ್ದು, ಪಂದ್ಯದ ನಂತರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಪಂದ್ಯ ಸೋತ ನಂತರ ಚಾರ್ಲಿ ಡೀನ್ ಕಣ್ಣೀರಿಟ್ಟಿದ್ದು ಗೊತ್ತೇ ಇದೆ. ಇದರ ಪರಿಣಾಮವಾಗಿ ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳು ದೀಪ್ತಿ ಶರ್ಮಾ ಅವರ ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿ ಆಡುತ್ತಿದ್ದಾರೆ ಎಂದು ಟೀಕಿಸಿದರು. ಆದರೆ ಹಲವು ಕ್ರಿಕೆಟಿಗರು ಹಾಗೂ ಸೆಲೆಬ್ರಿಟಿಗಳು ಟೀಂ ಇಂಡಿಯಾ ಆಟಗಾರ್ತಿಗೆ ಬೆಂಬಲ ಸೂಚಿಸಿ ದೀಪ್ತಿ ನಿಯಮಾನುಸಾರ ಮಂಕಡಿಂಗ್ ಮಾಡಿದ್ದಾರೆ ಎಂದು ಹೇಳಿದ್ದರು.
ಸಾಕಷ್ಟು ಬಾರಿ ಎಚ್ಚರಿಕೆಯನ್ನು ನೀಡಿದ್ದೆವು
ಟೀಕೆಗಳಿಗೆ ಭಾರತಕ್ಕೆ ಮರಳಿದ ನಂತರ ಮಾತನಾಡಿ ದೀಪ್ತಿ ಶರ್ಮಾ ಉತ್ತರಿಸಿದ್ದು, “ಇದು ನಮ್ಮ ಯೋಜನೆಯಾಗಿತ್ತು ಏಕೆಂದರೆ ಅವರು ಇದನ್ನು ನಿರಂತರವಾಗಿ ಮಾಡುತ್ತಿದ್ದರು (ಇಂಗ್ಲೆಂಡ್ ಬ್ಯಾಟರ್ ಚಾರ್ಲಿ ಡೀನ್). ಹೀಗಾಗಿ ನಾವು ಅವರಿಗೆ ಸಾಕಷ್ಟು ಬಾರಿ ಎಚ್ಚರಿಕೆಯನ್ನು ನೀಡಿದ್ದೆವು. ಆದರೆ ಇದನ್ನು ಇಂಗ್ಲೆಂಡ್ ಬ್ಯಾಟರ್ ಗಂಭೀರವಾಗಿ ಪರಿಗಣಿಸಲಿಲ್ಲ. ಅದಕ್ಕಾಗಿಯೇ ನಾವು ಐಸಿಸಿ ನಿಯಮಗಳ ಪ್ರಕಾರ ಈ ರನೌಟ್ ಮಾಡಿದ್ದೇವೆ ಎಂದಿದ್ದಾರೆ.
ಎಂಸಿಸಿ ಹೇಳಿದ್ದೇನು?
ಈ ವಿವಾದದ ನಂತರ, ಕ್ರಿಕೆಟ್‌ನ ನಿಯಮಗಳ ರಚನೆಯ ಸಂಸ್ಥೆಯಾದ ಎಂಸಿಸಿ, ಬೌಲರ್‌ನ ಕೈಯಿಂದ ಚೆಂಡು ಬಿಡುಗಡೆಯಾಗುವವರೆಗೂ ನಾನ್‌ಸ್ಟ್ರೈಕರ್‌ನ ತುದಿಯಲ್ಲಿ ನಿಂತಿರುವ ಬ್ಯಾಟ್ಸ್‌ಮನ್ ಕ್ರೀಸ್‌ನಿಂದ ಹೊರಹೋಗುವಂತಿಲ್ಲ. ಒಂದು ವೇಳೆ ನಾನ್‌ಸ್ಟ್ರೈಕರ್ ತುದಿಯಲ್ಲಿ ನಿಂತಿರುವ ಬ್ಯಾಟರ್ ಈ ತಪ್ಪನ್ನು ಮಾಡಿದ್ದರೆ, ಬೌಲರ್ ಅವರನ್ನು ರನೌಟ್ ಮಾಡುವುದು ಕ್ರಿಕೆಟ್ ನಿಯಮಗಳ ಪ್ರಕಾರ ಸರಿಯಾದ ಕ್ರಮವಾಗಿದೆ ಎಂದು ಎಂಸಿಸಿ ಹೇಳಿದೆ.