
ಟೆಸ್ಟ್ ಮತ್ತು ಟಿ20 ಕ್ರಿಕೆಟ್ಗೆ ವಿದಾಯ ಹೇಳಿರುವ ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾ (Rohit Sharma) ಏಕದಿನ ಕ್ರಿಕೆಟ್ನಲ್ಲಿ ಮಾತ್ರ ಆಡಲಿದ್ದಾರೆ. ಹೀಗಾಗಿ ಇವರಿಬ್ಬರನ್ನು ಮೈದಾನದಲ್ಲಿ ನೋಡಲು ಕ್ರಿಕೆಟ್ ಅಭಿಮಾನಿಗಳು ಕಾತರರಾಗಿದ್ದಾರೆ. ಅದರಂತೆ ಮುಂದಿನ ತಿಂಗಳು ಬಾಂಗ್ಲಾದೇಶ ವಿರುದ್ಧ ನಡೆಯಬೇಕಿದ್ದ ಏಕದಿನ ಸರಣಿಯಲ್ಲಿ ಈ ಇಬ್ಬರು ಆಟಗಾರರು ನೀಲಿ ಜೆರ್ಸಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಕ್ರಿಕೆಟ್ ಅಭಿಮಾನಿಗಳು ಆಶಿಸಿದ್ದರು. ಆದರೀಗ ಕೇಳಿಬಂದಿರುವ ಮಾಹಿತಿ ಪ್ರಕಾರ, ಟೀಂ ಇಂಡಿಯಾದ ಬಾಂಗ್ಲಾದೇಶ ಪ್ರವಾಸವು (Team India’s Bangladesh Tour) ರದ್ದಾಗುವ ಸಾಧ್ಯತೆಗಳಿವೆ. ವರದಿಗಳ ಪ್ರಕಾರ ಬಾಂಗ್ಲಾದೇಶದಲ್ಲಿ ಪರಿಸ್ಥಿತಿಗಳು ಚೆನ್ನಾಗಿಲ್ಲ. ಹೀಗಾಗಿ ಆಟಗಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಈ ಪ್ರವಾಸಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ಅನುಮತಿ ನೀಡುತ್ತಿಲ್ಲ.
ಈ ಮೊದಲು ನಿರ್ಧಾರವಾಗಿದ್ದಂತೆ ಟೀಂ ಇಂಡಿಯಾ ಮುಂದಿನ ತಿಂಗಳು ಬಾಂಗ್ಲಾದೇಶ ಪ್ರವಾಸ ಮಾಡಬೇಕಿತ್ತು, ಆದರೆ ಈಗ ಈ ಪ್ರವಾಸದ ಮೇಲೆ ಬಿಕ್ಕಟ್ಟಿನ ಮೋಡಗಳು ಕವಿಯಲು ಪ್ರಾರಂಭಿಸಿವೆ. ವರದಿಗಳ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶದ ಪರಿಸ್ಥಿತಿ ಉತ್ತಮವಾಗಿಲ್ಲ. ಅಧಿಕಾರ ಬದಲಾವಣೆಯ ನಂತರ, ಅಲ್ಲಿ ಅಂಶಾತಿ ಮನೆಮಾಡಿದೆ. ಹೀಗಾಗಿ ಆಟಗಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಭಾರತ ತಂಡಕ್ಕೆ ಬಾಂಗ್ಲಾದೇಶ ಪ್ರವಾಸ ಮಾಡಲು ಅನುಮತಿ ನೀಡುತ್ತಿಲ್ಲ ಎಂದು ಹೇಳಲಾಗುತ್ತುದೆ. ಅಲ್ಲದೆ ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳಬಹುದು.
ಬಾಂಗ್ಲಾದೇಶದಲ್ಲಿ ಸರ್ಕಾರ ಬದಲಾದಾಗಿನಿಂದ, ಅಲ್ಲಿ ಪ್ರತಿದಿನ ಗಲಭೆಗಳು ನಡೆಯುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ, ಕೇಂದ್ರ ಸರ್ಕಾರವು ಟೀಂ ಇಂಡಿಯಾವನ್ನು ಬಾಂಗ್ಲಾದೇಶಕ್ಕೆ ಕಳುಹಿಸುವ ಅಪಾಯವನ್ನು ಎಂದಿಗೂ ತೆಗೆದುಕೊಳ್ಳುವುದಿಲ್ಲ. ಬಾಂಗ್ಲಾದೇಶದಲ್ಲಿ, ಕಳೆದ ವರ್ಷ ಆಗಸ್ಟ್‌ನಲ್ಲಿ ಶೇಖ್ ಹಸೀನಾ ರಾಜೀನಾಮೆ ನೀಡಿದ ನಂತರ, ಮಧ್ಯಂತರ ಸರ್ಕಾರವು ದೇಶವನ್ನು ನಡೆಸುತ್ತಿದೆ. ಆದಾಗ್ಯೂ ದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡುವಲ್ಲಿ ಮಧ್ಯಂತರ ಸರ್ಕಾರ ಎಡವಿದೆ.
IND vs ENG: ಬುಮ್ರಾ ವಿಚಾರವನ್ನು ಬಹಿರಂಗಪಡಿಸಿದ್ಯಾಕೆ? ಬಿಸಿಸಿಐ ವಿರುದ್ಧ ಮಾಜಿ ಕ್ರಿಕೆಟಿಗ ಗರಂ
ಹೀಗಾಗಿ ಮುಂಬರುವ ಸರಣಿಯ ಬಗ್ಗೆ ಬಿಸಿಸಿಐ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಶೀಘ್ರದಲ್ಲೇ ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು. ಈ ಪ್ರವಾಸವನ್ನು ರದ್ದುಗೊಳಿಸುವ ಸಾಧ್ಯತೆಯಿದೆ, ಆದರೆ ಎರಡೂ ಮಂಡಳಿಗಳು ಪ್ರವಾಸವನ್ನು ರದ್ದುಗೊಳಿಸುವ ಬದಲು ಕೆಲವು ದಿನಗಳವರೆಗೆ ಅದನ್ನು ಮುಂದೂಡಲು ಒಪ್ಪಿಕೊಳ್ಳಬಹುದು. ಹೀಗಾಗಿಯೇ ಈ ಸರಣಿಯ ಮಾಧ್ಯಮ ಹಕ್ಕುಗಳ ಬಿಡ್ಡಿಂಗ್ ಅನ್ನು ಬಿಸಿಬಿ ಮುಂದೂಡಿದೆ ಎನ್ನಲಾಗಿದೆ. ಭಾರತದ ಬಾಂಗ್ಲಾದೇಶ ಪ್ರವಾಸವು ಆಗಸ್ಟ್ 17 ರಿಂದ ಪ್ರಾರಂಭವಾಗಬೇಕಿತ್ತು. ಈ ಪ್ರವಾಸದಲ್ಲಿ ಟೀಂ ಇಂಡಿಯಾ ಮೂರು ಏಕದಿನ ಮತ್ತು ಅಷ್ಟೇ ಸಂಖ್ಯೆಯ ಟಿ20 ಪಂದ್ಯಗಳ ಸರಣಿಗಳನ್ನು ಆಡಬೇಕಿತ್ತು. ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಆಡುವ ನಿರೀಕ್ಷೆಯಿತ್ತು. ಆದರೀಗ ಪ್ರವಾಸ ರದ್ದಾದರೆ, ಕೊಹ್ಲಿ ಹಾಗೂ ರೋಹಿತ್ರನ್ನು ಮೈದಾನದಲ್ಲಿ ನೋಡಲು ಅಭಿಮಾನಿಗಳು ಇನ್ನು ಕಾಯಬೇಕಾಗುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:23 pm, Fri, 4 July 25