ಹೀನಾಯ ಅತೀ ಹೀನಾಯ… ಭಾರತ ತಂಡದ್ದು ಅಂತಿಂಥ ಸೋಲಲ್ಲ!
India vs South Africa: ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಬರೋಬ್ಬರಿ 408 ರನ್ ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ಪ್ರಥಮ ಇನಿಂಗ್ಸ್ ನಲ್ಲಿ 489 ರನ್ ಕಲೆಹಾಕಿದರೆ, ಟೀಮ್ ಇಂಡಿಯಾ 201 ರನ್ ಗಳಿಸಿತು. ಇನ್ನು 288 ರನ್ ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆಡಿದ ಸೌತ್ ಆಫ್ರಿಕಾ 260 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು. ಅದರಂತೆ ಕೊನೆಯ ಇನಿಂಗ್ಸ್ ನಲ್ಲಿ 549 ರನ್ ಗಳ ಗುರಿ ಪಡೆದ ಟೀಮ್ ಇಂಡಿಯಾ ಕೇವಲ 140 ರನ್ ಗಳಿಸಿ ಆಲೌಟ್ ಆಗಿದೆ.

ಗುವಾಹಟಿಯಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲೂ ಟೀಮ್ ಇಂಡಿಯಾ ಸೋತಿದೆ. ಕೊಲ್ಕತ್ತಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 30 ರನ್ ಗಳ ಸೋಲನುಭವಿಸಿದ್ದ ಟೀಮ್ ಇಂಡಿಯಾ ಈ ಬಾರಿ ಪರಾಜಯಗೊಂಡಿದ್ದು ಬರೋಬ್ಬರಿ 408 ರನ್ ಗಳ ಅಂತರದಿಂದ.
ಅಂದರೆ 93 ವರ್ಷಗಳ ಟೆಸ್ಟ್ ಇತಿಹಾಸದಲ್ಲೇ ಭಾರತ ತಂಡವು ಇದೇ ಮೊದಲ ಬಾರಿಗೆ 400+ ರನ್ ಗಳ ಅಂತರದಿಂದ ಸೋಲನುಭವಿಸಿದೆ. ಈ ಮೂಲಕ ಅತ್ಯಂತ ಹೀನಾಯ ಸೋಲನ್ನು ತನ್ನದಾಗಿಸಿಕೊಂಡಿದೆ.
ಇದಕ್ಕೂ ಮುನ್ನ ಟೀಮ್ ಇಂಡಿಯಾ ಅತ್ಯಧಿಕ ರನ್ ಗಳ ಅಂತರದಿಂದ ಸೋತಿದ್ದು ಆಸ್ಟ್ರೇಲಿಯಾ ವಿರುದ್ಧ. 2004 ರಲ್ಲಿ ನಾಗಪುರದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಟೀಮ್ ಇಂಡಿಯಾಗೆ 543 ರನ್ ಗಳ ಗುರಿ ನೀಡಿದ್ದರು.
ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಕೇವಲ 200 ರನ್ ಗಳಿಗೆ ಆಲೌಟ್ ಆಗಿ ಬರೋಬ್ಬರಿ 342 ರನ್ ಗಳಿಂದ ಸೋಲೊಪ್ಪಿಕೊಂಡಿದ್ದರು.
ಇದೀಗ ಸೌತ್ ಆಫ್ರಿಕಾ ತಂಡವು ಟೀಮ್ ಇಂಡಿಯಾವನ್ನು ಬರೋಬ್ಬರಿ 408 ರನ್ ಗಳ ಅಂತರದಿಂದ ಬಗ್ಗು ಬಡಿದಿದೆ. ಈ ಮೂಲಕ ಭಾರತ ತಂಡಕ್ಕೆ ಟೆಸ್ಟ್ ಇತಿಹಾಸದಲ್ಲೇ ಹೀನಾಯ ಸೋಲುಣಿಸಿದ ಹಿರಿಮೆಯನ್ನು ತನ್ನದಾಗಿಸಿಕೊಂಡಿದೆ.
ಅಷ್ಟೇ ಅಲ್ಲದೆ 25 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲುವಲ್ಲಿಯೂ ಸೌತ್ ಆಫ್ರಿಕಾ ತಂಡ ಯಶಸ್ವಿಯಾಗಿದೆ. ಅದು ಕೂಡ 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಮೂಲಕ ಎಂಬುದು ವಿಶೇಷ.
ಒಟ್ಟಿನಲ್ಲಿ ಟೆಸ್ಟ್ ಇತಿಹಾಸದಲ್ಲಿ ತವರಿನ ಹುಲಿಗಳೆಂದೇ ಗುರುತಿಸಿಕೊಂಡಿದ್ದ ಟೀಮ್ ಇಂಡಿಯಾ ಇದೀಗ ಅತ್ಯಂತ ಹೀನಾಯ ಸೋಲಿನೊಂದಿಗೆ ಭಾರೀ ಮುಖಭಂಗಕ್ಕೆ ಒಳಗಾಗಿದೆ.
ಸೌತ್ ಆಫ್ರಿಕಾ ಪ್ಲೇಯಿಂಗ್ 11: ಐಡೆನ್ ಮಾರ್ಕ್ರಾಮ್, ರಯಾನ್ ರಿಕೆಲ್ಟನ್, ವಿಯಾನ್ ಮುಲ್ಡರ್, ಟೆಂಬಾ ಬವುಮಾ (ನಾಯಕ), ಟೋನಿ ಡಿ ಝೋರ್ಝಿ, ಟ್ರಿಸ್ಟನ್ ಸ್ಟಬ್ಸ್, ಕೈಲ್ ವೆರ್ರೆನ್ (ವಿಕೆಟ್ ಕೀಪರ್), ಮಾರ್ಕೊ ಯಾನ್ಸೆನ್, ಸೆನುರಾನ್ ಮುತ್ತುಸಾಮಿ, ಸೈಮನ್ ಹಾರ್ಮರ್, ಕೇಶವ್ ಮಹಾರಾಜ್.
ಇದನ್ನೂ ಓದಿ: IND vs SA: ಟೀಮ್ ಇಂಡಿಯಾದಿಂದ 8 ಆಟಗಾರರು ಔಟ್
ಭಾರತ ಪ್ಲೇಯಿಂಗ್ 11: ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಧ್ರುವ ಜುರೆಲ್, ರಿಷಭ್ ಪಂತ್ (ನಾಯಕ), ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
