Virat Kohli: ಬ್ರ್ಯಾಂಡ್ ವ್ಯಾಲ್ಯೂನಲ್ಲಿ ಬಾಲಿವುಡ್ ಸ್ಟಾರ್ಗಳನ್ನೇ ಹಿಂದಿಕ್ಕಿದ ವಿರಾಟ್ ಕೊಹ್ಲಿ
Virat Kohli: ಭಾರತದ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಸದ್ಯ ವೆಸ್ಟ್ ಇಂಡೀಸ್ನಲ್ಲಿದ್ದಾರೆ. ಟಿ20 ವಿಶ್ವಕಪ್ನ ಸೂಪರ್-8 ಪಂದ್ಯಗಳಿಗಾಗಿ ಕಿಂಗ್ ಕೊಹ್ಲಿ ಸಜ್ಜಾಗುತ್ತಿದ್ದಾರೆ. ಇನ್ನು ಭಾರತ ತಂಡವು ದ್ವಿತೀಯ ಸುತ್ತಿನಲ್ಲಿ ತನ್ನ ಮೊದಲ ಪಂದ್ಯವನ್ನು ಜೂನ್ 20 ರಂದು ಆಡಲಿದ್ದು, ಈ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡವನ್ನು ಎದುರಿಸಲಿದೆ.
ಭಾರತದ ಅತೀ ಮೌಲ್ಯಯುತ ಸೆಲೆಬ್ರಿಟಿಗಳ ಪಟ್ಟಿ ಹೊರಬಿದ್ದಿದೆ. ಈ ಬಾರಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿರುವುದು ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಎಂಬುದು ವಿಶೇಷ. ಬಾಲಿವುಡ್ ಸ್ಟಾರ್ಗಳಾದ ಶಾರುಖ್ ಖಾನ್, ರಣವೀರ್ ಸಿಂಗ್ ಸೇರಿದಂತೆ ಪ್ರಮುಖರನ್ನು ಹಿಂದಿಕ್ಕಿರುವ ಕೊಹ್ಲಿ ಬ್ರ್ಯಾಂಡ್ ವ್ಯಾಲ್ಯೂನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ ಎಂದು ಕ್ರೋಲ್ ವರದಿ ತಿಳಿಸಿದೆ.
ಕಳೆದ ವರ್ಷ ವಿರಾಟ್ ಕೊಹ್ಲಿ ಅವರ ಮೌಲ್ಯವು ಕುಸಿದಿತ್ತು. ಆದರೆ ಇತ್ತೀಚಿನ ‘ಸೆಲೆಬ್ರಿಟಿ ಬ್ರಾಂಡ್ ಮೌಲ್ಯಮಾಪನ’ ವರದಿಯಲ್ಲಿ ವಿರಾಟ್ ಕೊಹ್ಲಿ ಬ್ರ್ಯಾಂಡ್ ಮೌಲ್ಯವನ್ನು ಮತ್ತು ಜನಪ್ರಿಯತೆಯನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಲಿವುಡ್ ತಾರೆಯರು ಮತ್ತು ಕ್ರೀಡಾಪಟುಗಳು ಸೇರಿದಂತೆ ಭಾರತದ ಪ್ರಮುಖ 25 ಸೆಲೆಬ್ರಿಟಿಗಳು 2023 ರಲ್ಲಿ ಅವರ ಸಾಮೂಹಿಕ ಬ್ರ್ಯಾಂಡ್ ಮೌಲ್ಯವು ಸರಿಸುಮಾರು $1.9 ಶತಕೋಟಿಗೆ ಏರಿಕೆ ಕಂಡಿದೆ. ಇದು ಹಿಂದಿನ ವರ್ಷಕ್ಕಿಂತ 15.5% ಹೆಚ್ಚಳವನ್ನು ಸೂಚಿಸುತ್ತದೆ. ಇದೇ ವೇಳೆ ವಿರಾಟ್ ಕೊಹ್ಲಿ ಅವರು 28.9% ಬೆಳವಣಿಗೆಯೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ವಿರಾಟ್ ಕೊಹ್ಲಿಯ ಬ್ರ್ಯಾಂಡ್ ಮೌಲ್ಯ ಹೆಚ್ಚಳ:
ಈ ಹಿಂದಿನ ವರ್ಷಗಳಲ್ಲಿ ವಿರಾಟ್ ಕೊಹ್ಲಿ ಅವರ ಬ್ರ್ಯಾಂಡ್ ವ್ಯಾಲ್ಯೂ ಇಳಿಕೆಯತ್ತ ಸಾಗಿತ್ತು. ಆದರೆ ಇತ್ತೀಚಿನ ‘ಸೆಲೆಬ್ರಿಟಿ ಬ್ರ್ಯಾಂಡ್ ಮೌಲ್ಯಮಾಪನ’ದಲ್ಲಿ ಕೊಹ್ಲಿಯ ಬ್ರ್ಯಾಂಡ್ ಮೌಲ್ಯವು ಏರಿಕೆಯತ್ತ ಸಾಗಿರುವುದು ಕಂಡು ಬಂದಿದೆ.
2022 ರಲ್ಲಿ ವಿರಾಟ್ ಕೊಹ್ಲಿಯ ಬ್ರ್ಯಾಂಡ್ ವ್ಯಾಲ್ಯೂ USD 176.9 ಮಿಲಿಯನ್ ಇದ್ದರೆ, 2023 ರಲ್ಲಿ ಇದು USD 227.9 ಮಿಲಿಯನ್‌ಗೆ ತಲುಪಿದೆ. ಅಂದರೆ ಗಮನಾರ್ಹ 28.9% ರಷ್ಟು ಹೆಚ್ಚಾಗಿದೆ ಎಂದು ಬ್ರ್ಯಾಂಡ್ ವ್ಯಾಲ್ಯೂ ಸಲಹಾ ಸಂಸ್ಥೆ ಕ್ರೋಲ್ ಹೇಳಿದೆ.
ಕಿಂಗ್ ಖಾನ್ನ ಹಿಂದಿಕ್ಕಿದ ಕಿಂಗ್ ಕೊಹ್ಲಿ:
ಶಾರುಖ್ ಖಾನ್ ಅವರ ಬ್ರ್ಯಾಂಡ್ ಮೌಲ್ಯವು 2020 ರಲ್ಲಿ USD 51.1 ಮಿಲಿಯನ್‌ನಿಂದ 2023 ರಲ್ಲಿ USD 120.7 ಮಿಲಿಯನ್‌ಗೆ 116.6% ರಷ್ಟು ಏರಿಕೆಯಾಗಿದೆ, ಆದಾಗ್ಯೂ, ಅವರ ಬ್ರ್ಯಾಂಡ್ ಮೌಲ್ಯವು ವಿರಾಟ್ ಕೊಹ್ಲಿಗಿಂತ ಕಡಿಮೆ ಇರುವುದು ವಿಶೇಷ.
ಇದನ್ನೂ ಓದಿ: Lockie Ferguson: ಟಿ20 ವಿಶ್ವಕಪ್ನಲ್ಲಿ ವಿಶ್ವ ದಾಖಲೆ ಬರೆದ ಲಾಕಿ ಫರ್ಗುಸನ್
ಇಲ್ಲಿ ಕಿಂಗ್ ಖಾನ್ USD 120.7 ಮಿಲಿಯನ್ ಬ್ರ್ಯಾಂಡ್ ವ್ಯಾಲ್ಯೂ ಹೊಂದಿದ್ದರೆ, ಕಿಂಗ್ ಕೊಹ್ಲಿ ಅವರ ಬ್ರ್ಯಾಂಡ್ ವ್ಯಾಲ್ಯೂ USD 227.9 ಮಿಲಿಯನ್‌ಗೆ ತಲುಪಿದೆ. ಇನ್ನು ವಿರಾಟ್ ಕೊಹ್ಲಿಯ ನಂತರದ ಸ್ಥಾನದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಇದ್ದು, ಒಟ್ಟು USD 203.1 ಮಿಲಿಯನ್ ಬ್ರ್ಯಾಂಡ್ ವ್ಯಾಲ್ಯೂ ಹೊಂದಿದ್ದಾರೆ.
ಕ್ರೋಲ್- ಸೆಲೆಬ್ರಿಟಿ ಬ್ರ್ಯಾಂಡ್ ವ್ಯಾಲ್ಯೂ ಶ್ರೇಯಾಂಕ:
- ವಿರಾಟ್ ಕೊಹ್ಲಿ
- ರಣವೀರ್ ಸಿಂಗ್
- ಶಾರುಖ್ ಖಾನ್
- ಅಕ್ಷಯ್ ಕುಮಾರ್
- ಆಲಿಯಾ ಭಟ್
- ದೀಪಿಕಾ ಪಡುಕೋಣೆ
- ಎಂಎಸ್ ಧೋನಿ
- ಸಚಿನ್ ತೆಂಡೂಲ್ಕರ್
- ಅಮಿತಾಬ್ ಬಚ್ಚನ್
- ಸಲ್ಮಾನ್ ಖಾನ್
- ಹೃತಿಕ್ ರೋಷನ್
- ಕಿಯಾರಾ ಅಡ್ವಾಣಿ
- ರಣಬೀರ್ ಕಪೂರ್
- ಅನುಷ್ಕಾ ಶರ್ಮಾ
- ಕರೀನಾ ಕಪೂರ್ ಖಾನ್
- ಆಯುಷ್ಮಾನ್ ಖುರಾನಾ
- ಕಾರ್ತಿಕ್ ಆರ್ಯನ್
- ರೋಹಿತ್ ಶರ್ಮಾ
- ಹಾರ್ದಿಕ್ ಪಾಂಡ್ಯ
- ರಶ್ಮಿಕಾ ಮಂದಣ್ಣ
- ನೀರಜ್ ಚೋಪ್ರಾ
- ಅಲ್ಲು ಅರ್ಜುನ್
- ಸಾರಾ ಅಲಿ ಖಾನ್
- ವರುಣ್ ಧವನ್
- ಕತ್ರಿನಾ ಕೈಫ್