ಈ ವರ್ಷ ಇನ್ನೂ 15 ಟಿ20 ಪಂದ್ಯಗಳನ್ನಾಡಲಿದೆ ಟೀಮ್ ಇಂಡಿಯಾ
Team India's Schedule 2025: ಭಾರತ ತಂಡವು ಈ ವರ್ಷ ಕನಿಷ್ಠ 15 ಟಿ20 ಪಂದ್ಯಗಳನ್ನಾಡಲಿದೆ. ಆದರೆ ಟೀಮ್ ಇಂಡಿಯಾದ ಮುಂದಿನ ಟಿ20 ಸರಣಿ ನಡೆಯುವುದು ಆಗಸ್ಟ್ನಲ್ಲಿ. ಇದಾದ ಬಳಿಕ ಏಷ್ಯಾಕಪ್ ಕೂಡ ಆಡಲಿದೆ. ವಿಶೇಷ ಎಂದರೆ ಈ ಬಾರಿ ಏಷ್ಯಾಕಪ್ ನಡೆಯಲಿರುವುದು ಟಿ20 ಸ್ವರೂಪದಲ್ಲಿ. ಹೀಗಾಗಿ ಈ ವರ್ಷ ಟೀಮ್ ಇಂಡಿಯಾ ಕನಿಷ್ಠ 15 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿಯುವುದು ಖಚಿತ.

ಭಾರತ ಮತ್ತು ಇಂಗ್ಲೆಂಡ್ ನಡುವಣ ಟಿ20 ಸರಣಿ ಮುಕ್ತಾಯಗೊಂಡಿದೆ. 5 ಪಂದ್ಯಗಳ ಈ ಸರಣಿಯನ್ನು ಟೀಮ್ ಇಂಡಿಯಾ 4-1 ಅಂತರದಿಂದ ಗೆದ್ದುಕೊಂಡಿದೆ. ಈ ಗೆಲುವಿನೊಂದಿಗೆ ಇದೀಗ ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ಸಜ್ಜಾಗುತ್ತಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ 3 ಏಕದಿನ ಪಂದ್ಯಗಳನ್ನಾಡಲಿದೆ.
ಇದಾದ ಬಳಿಕ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಡಲಿದೆ. ಫೆಬ್ರವರಿ 19 ರಿಂದ ಶುರುವಾಗಲಿರುವ ಈ ಟೂರ್ನಿ ಮುಗಿಯುವುದು ಮಾರ್ಚ್ 9 ಕ್ಕೆ. ಆ ನಂತರ ಟೀಮ್ ಇಂಡಿಯಾ ಆಟಗಾರರು ಐಪಿಎಲ್ನತ್ತ ಮುಖ ಮಾಡಲಿದ್ದಾರೆ. ಐಪಿಎಲ್ ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲಿದೆ. ಈ ಸರಣಿಯು ಜುಲೈ 20 ರಿಂದ ಶುರುವಾಗಲಿದೆ.
ಮತ್ತೆ ಟಿ20 ಸರಣಿ ಯಾವಾಗ?
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಬೆನ್ನಲ್ಲೇ ಟೀಮ್ ಇಂಡಿಯಾ ಮತ್ತೆ ಟಿ20 ಸರಣಿಗಾಗಿ ಸಜ್ಜಾಗಲಿದೆ. ಆಗಸ್ಟ್ನಲ್ಲಿ ನಡೆಯಲಿರುವ 3 ಪಂದ್ಯಗಳ ಈ ಸರಣಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶ್ ತಂಡಗಳು ಮುಖಾಮುಖಿಯಾಗಲಿದೆ.
ಈ ಸರಣಿ ಬಳಿಕ ಏಷ್ಯಾಕಪ್ ಟಿ20 ಟೂರ್ನಿ ಜರುಗಲಿದೆ. ಈ ಟೂರ್ನಿಗೆ ಈ ಬಾರಿ ಭಾರತ ಆತಿಥ್ಯವಹಿಸಲಿದೆ. ಸೆಪ್ಟೆಂಬರ್ನಲ್ಲಿ ನಡೆಯಲಿರುವ ಏಷ್ಯಾಕಪ್ ಬಳಿಕ ಟೀಮ್ ಇಂಡಿಯಾ ಮತ್ತೆ ಟಿ20 ಸರಣಿಯಲ್ಲಿ ಕಣಕ್ಕಿಳಿಯಲಿದೆ.
ಅಕ್ಟೋಬರ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಇನ್ನು ಡಿಸೆಂಬರ್ನಲ್ಲಿ ಸೌತ್ ಆಫ್ರಿಕಾ ತಂಡವನ್ನು ಎದುರಿಸಲಿದ್ದು, ಈ ಸರಣಿಯಲ್ಲಿ ಒಟ್ಟು 5 ಟಿ20 ಪಂದ್ಯಗಳನ್ನು ಆಡಲಾಗುತ್ತದೆ. ಅಂದರೆ ಇಲ್ಲಿ ಏಷ್ಯಾಕಪ್ ಟೂರ್ನಿಯನ್ನು ಹೊರತುಪಡಿಸಿ, ಟೀಮ್ ಇಂಡಿಯಾ 3 ಸರಣಿಗಳೊಂದಿಗೆ ಈ ವರ್ಷ ಒಟ್ಟು 13 ಟಿ20 ಪಂದ್ಯಗಳನ್ನಾಡಲಿದೆ.
ಇನ್ನು ಏಷ್ಯಾಕಪ್ನಲ್ಲಿ ಮೊದಲ ಸುತ್ತಿನಲ್ಲಿ ಟೀಮ್ ಇಂಡಿಯಾ 2 ಪಂದ್ಯಗಳನ್ನಾಡುವುದು ಖಚಿತ. ಇದನ್ನು ಸೇರಿಸಿದರೆ ಭಾರತ ತಂಡವು ಕನಿಷ್ಠ 15 ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ ಎನ್ನಬಹುದು.
ಭಾರತದ ಮುಂಬರುವ ಟಿ20 ಸರಣಿಗಳು:
- ಭಾರತ vs ಬಾಂಗ್ಲಾದೇಶ್- ಆಗಸ್ಟ್ (ಬಾಂಗ್ಲಾದೇಶದಲ್ಲಿ)- 3 ಟಿ20
- ಭಾರತ vs ಆಸ್ಟ್ರೇಲಿಯಾ, ಅಕ್ಟೋಬರ್ (ಆಸ್ಟ್ರೇಲಿಯಾದಲ್ಲಿ)- 5 ಟಿ20
- ಭಾರತ vs ಸೌತ್ ಆಫ್ರಿಕಾ, ಡಿಸೆಂಬರ್ (ಭಾರತದಲ್ಲಿ)- 5 ಟಿ20
ಭಾರತ ತಂಡದ ಮುಂದಿನ ಸರಣಿ ವೇಳಾಪಟ್ಟಿ:
ದಿನಾಂಕ | ಪಂದ್ಯ ಮತ್ತು ಸ್ಥಳ | ಸಮಯ |
ಫೆಬ್ರವರಿ 06, ಗುರುವಾರ | ಭಾರತ vs ಇಂಗ್ಲೆಂಡ್, ಮೊದಲ ಏಕದಿನ ಪಂದ್ಯ (ನಾಗ್ಪುರ) | 01:30 PM IST |
ಫೆಬ್ರವರಿ 09, ಭಾನುವಾರ | ಭಾರತ vs ಇಂಗ್ಲೆಂಡ್, ಎರಡನೇ ಏಕದಿನ ಪಂದ್ಯ ( ಕಟಕ್) | 01:30 PM IST |
ಫೆಬ್ರವರಿ 12, ಬುಧವಾರ | ಭಾರತ vs ಇಂಗ್ಲೆಂಡ್, ಮೂರನೇ ಏಕದಿನ ಪಂದ್ಯ (ಅಹಮದಾಬಾದ್) | 01:30 PM IST |
ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ:
- ಭಾರತ vs ಬಾಂಗ್ಲಾದೇಶ್: ಫೆಬ್ರವರಿ 20 (ದುಬೈ)
- ಭಾರತ vs ಪಾಕಿಸ್ತಾನ್: ಫೆಬ್ರವರಿ 23 (ದುಬೈ)
- ಭಾರತ vs ನ್ಯೂಝಿಲೆಂಡ್: ಮಾರ್ಚ್ 2 (ದುಬೈ)
- ಸೆಮಿಫೈನಲ್ (ಅರ್ಹತೆ ಪಡೆದರೆ): ಮಾರ್ಚ್ 4 (ದುಬೈ)
- ಫೈನಲ್ (ಅರ್ಹತೆ ಪಡೆದರೆ): ಮಾರ್ಚ್ 9 (ದುಬೈ)
Published On - 7:18 am, Tue, 4 February 25