ಐಪಿಎಲ್ (IPL 2021) ಅಂಗಳದ 31ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು-ಕೊಲ್ಕತ್ತಾ ನೈಟ್ ರೈಡರ್ಸ್ (RCB vs KKR) ಮುಖಾಮುಖಿಯಾಗುತ್ತಿದೆ. ಮೊದಲಾರ್ಧದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಆರ್ಸಿಬಿ ಈ ಪಂದ್ಯದೊಂದಿಗೆ ದ್ವಿತಿಯಾರ್ಧವನ್ನು ಆರಂಭಿಸಲಿದೆ. ಅತ್ತ ಮೊದಲಾರ್ಧದಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ಕೆಕೆಆರ್ ತಂಡವು ಅಂಕ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದು, ಹೀಗಾಗಿ ಉಳಿದಿರುವ 7 ಪಂದ್ಯಗಳಲ್ಲಿ ಆರಲ್ಲಿ ಜಯ ಸಾಧಿಸಿದರೆ ಮಾತ್ರ ಪ್ಲೇ ಆಫ್ ಆಸೆಯನ್ನು ಜೀವಂತವರಿಸಿಕೊಳ್ಳಬಹುದು. ಹಾಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ಪಾಲಿಗೆ ಪ್ರತಿಯೊಂದು ಪಂದ್ಯವು ಮಹತ್ವದ್ದಾಗಿದೆ.
ಇನ್ನು ಮೊದಲಾರ್ಧದ ಮುಖಾಮುಖಿಯಲ್ಲಿ ಆರ್ಸಿಬಿ ಕೆಕೆಆರ್ ವಿರುದ್ದ ಭರ್ಜರಿ ಜಯ ಸಾಧಿಸಿತ್ತು. ಆ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಕೊಹ್ಲಿ ಪಡೆ ಗ್ಲೆನ್ ಮ್ಯಾಕ್ಸ್ವೆಲ್ (78) ಹಾಗೂ ಎಬಿ ಡಿವಿಲಿಯರ್ಸ್ (76) ಅವರ ಸ್ಪೋಟಕ ಅರ್ಧಶತಕದ ನೆರವಿನಿಂದ 204 ರನ್ ಕಲೆಹಾಕಿತ್ತು. ಈ ಮೊತ್ತವನ್ನು ಬೆನ್ನತ್ತಿದ ಕೆಕೆಆರ್ 166 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಆ ಮೂಲಕ ಆರ್ಸಿಬಿ 38 ರನ್ಗಳ ಗೆಲುವು ದಾಖಲಿಸಿತು. ಇದೀಗ ಅದೇ ಉತ್ಸಾಹದಲ್ಲಿ ಕೆಕೆಆರ್ ವಿರುದ್ದ ಆರ್ಸಿಬಿ ಕಣಕ್ಕಿಳಿಯಲಿದೆ. ಇದಾಗ್ಯೂ ಅಬುಧಾಬಿ ಮೈದಾನದಲ್ಲಿ ಕಣಕ್ಕಿಳಿಯುವುದರಿಂದ ಕೆಕೆಆರ್ ತಂಡದಿಂದಲೂ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.
ಏಕೆಂದರೆ ಉಭಯ ತಂಡಗಳು ಇದುವರೆಗೆ 27 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಕೆಕೆಆರ್ 14 ಬಾರಿ ಜಯ ಸಾಧಿಸಿದೆ. ಇನ್ನು ಆರ್ಸಿಬಿ 13 ಬಾರಿ ವಿಜಯದ ನಗೆ ಬೀರಿದೆ. ಕೊನೆಯ 10 ಪಂದ್ಯಗಳನ್ನು ಗಣನೆಗೆ ತೆಗೆದುಕೊಂಡರೆ ಆರ್ಸಿಬಿ ಕೆಕೆಆರ್ ವಿರುದ್ದ ಕೇವಲ 4 ಬಾರಿ ಮಾತ್ರ ಗೆದ್ದಿದೆ. ಅಂದರೆ ಕೊಲ್ಕತ್ತಾ ಕೊನೆಯ 10 ಮುಖಾಮುಖಿಯಲ್ಲಿ 6 ಬಾರಿ ವಿಜಯ ಸಾಧಿಸಿದೆ. ಇದಾಗ್ಯೂ ಕಳೆದ ಸೀಸನ್ನಿಂದ ಕೆಕೆಆರ್ ವಿರುದ್ದ ಆರ್ಸಿಬಿ ಪಾರುಪತ್ಯ ಸಾಧಿಸುತ್ತಾ ಬಂದಿದೆ ಎಂಬುದು ವಿಶೇಷ.
ಇನ್ನು ಕಳೆದ ಸೀಸನ್ನಲ್ಲಿ ಯುಎಇನಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ ಕೆಕೆಆರ್ ವಿರುದ್ದದ ಮೊದಲ ಪಂದ್ಯದಲ್ಲಿ 82 ರನ್ಗಳ ಭರ್ಜರಿ ಜಯ ಸಾಧಿಸಿತ್ತು. ಹಾಗೆಯೇ 2ನೇ ಪಂದ್ಯದಲ್ಲಿ 8 ವಿಕೆಟ್ಗಳ ಜಯಗಳಿಸಿತ್ತು. ಹೀಗಾಗಿ ಯುಎಇನಲ್ಲಿ ಆರ್ಸಿಬಿ ಗೆಲುವಿನ ನಾಗಾಲೋಟ ಮುಂದುವರೆಸುವ ಸಾಧ್ಯತೆ ಹೆಚ್ಚು.
ಇನ್ನು ಆರ್ಸಿಬಿ ವಿರುದ್ದ ಅತ್ಯಂತ ಯಶಸ್ವಿ ಬ್ಯಾಟ್ಸ್ಮನ್ ಎಂದರೆ ಆ್ಯಂಡ್ರೆ ರಸೆಲ್. ರಸೆಲ್ ಇದುವರೆಗೆ ಆರ್ಸಿಬಿ ವಿರುದ್ದ10 ಇನಿಂಗ್ಸ್ಗಳಿಂದ 339 ರನ್ ಕಲೆಹಾಕಿದ್ದಾರೆ. ಹಾಗೆಯೇ ಸುನೀಲ್ ನರೈನ್ 7 ಇನಿಂಗ್ಸ್ಗಳಿಂದ 194, ಹಾಗೂ ನಿತೀಶ್ ರಾಣ 7 ಇನಿಂಗ್ಸ್ನಿಂದ 198 ರನ್ ಬಾರಿಸಿ ಆರ್ಸಿಬಿ ವಿರುದ್ದ ಉತ್ತಮ ಫಾರ್ಮ್ ಪ್ರದರ್ಶಿಸಿದ್ದಾರೆ.
ಕೆಕೆಆರ್ ವಿರುದ್ದ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಇದುವರೆಗೆ 25 ಇನಿಂಗ್ಸ್ಗಳಿಂದ ಕೊಹ್ಲಿ ಕಲೆಹಾಕಿದ್ದು 730 ರನ್ಗಳು. ಹಾಗೆಯೇ ಎಬಿಡಿ ಕೂಡ ಕೆಕೆಆರ್ ವಿರುದ್ದ 17 ಇನಿಂಗ್ಸ್ಗಳಿಂದ 464 ರನ್ ಬಾರಿಸಿದ್ದಾರೆ. ಹೀಗಾಗಿ ಈ ಪಂದ್ಯದಲ್ಲೂ ಆರ್ಸಿಬಿ ಸ್ಕೋರ್ನಲ್ಲಿ ಈ ಇಬ್ಬರ ಬ್ಯಾಟಿಂಗ್ ಪ್ರಮುಖ ಪಾತ್ರವಹಿಸಲಿದೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ನೋಡಿದರೆ, ಆರ್ಸಿಬಿ ವಿರುದ್ದ ಸುನೀಲ್ ನರೈನ್ 13 ಪಂದ್ಯಗಳಿಂದ 16 ವಿಕೆಟ್ ಉರುಳಿಸಿದ್ದಾರೆ. ಹಾಗೆಯೇ 9 ಪಂದ್ಯಗಳಿಂದ ರಸೆಲ್ 7 ವಿಕೆಟ್ ಕಬಳಿಸಿದ್ದಾರೆ. ಇತ್ತ ಕೆಕೆಆರ್ ವಿರುದ್ದ ಯುಜುವೇಂದ್ರ ಚಹಲ್ 15 ಪಂದ್ಯಗಳಿಂದ 16 ವಿಕೆಟ್ ಉರುಳಿಸಿ ಆರ್ಸಿಬಿಯ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ.
ಒಟ್ಟಾರೆ ಅಂಕಿ ಅಂಶಗಳನ್ನು ಗಮನಿಸಿದರೆ ಕೆಕೆಆರ್ ಮೇಲುಗೈ ಸಾಧಿಸಿದರೂ, ಕಳೆದ 2 ಸೀಸನ್ಗಳಿಂದ ಆರ್ಸಿಬಿ ತಂಡದ ಪ್ರದರ್ಶನಕ್ಕೆ ಕೆಕೆಆರ್ ಸರಿಸಾಟಿಯಾಗುವಂತಹ ಪ್ರದರ್ಶನ ನೀಡಿಲ್ಲ. ಹಾಗೆಯೇ ಕೆಕೆಆರ್ ತಂಡಕ್ಕಿಂತ ಆರ್ಸಿಬಿ ತಂಡವೇ ಹೆಚ್ಚು ಸಮತೋಲನದಿಂದ ಕೂಡಿದೆ. ಇದಲ್ಲದೆ ಮೊದಲಾರ್ಧದಲ್ಲಿ ಆರ್ಸಿಬಿ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಕೆಕೆಆರ್ ತಂಡಕ್ಕಿಂತ ಆರ್ಸಿಬಿ ಎಲ್ಲಾ ರೀತಿಯಲ್ಲೂ ಬಲಿಷ್ಠವಾಗಿದೆ ಎಂದು ಹೇಳಬಹುದು.
ಪಂದ್ಯದ ಸಮಯ: 7.30
ಸ್ಥಳ: ಶೇಖ್ ಝಾಯೆದ್ ಸ್ಟೇಡಿಯಂ-ಅಬುಧಾಬಿ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ ಹಾಟ್ ಸ್ಟಾರ್ಸ್
ಇದನ್ನೂ ಓದಿ: IPL 2021: 5 ತಂಡಗಳಲ್ಲಿ 10 ಹೊಸ ವಿದೇಶಿ ಆಟಗಾರರು
ಇದನ್ನೂ ಓದಿ: IPL 2021: RCB ತಂಡದ ಗೇಮ್ ಚೇಂಜರ್ ಆಗಲಿದ್ದಾರೆ ಟಿಮ್ ಡೇವಿಡ್
ಇದನ್ನೂ ಓದಿ: ಗೂಗಲ್ ಬಿಗ್ ಆಫರ್: ಸ್ಮಾರ್ಟ್ಫೋನ್ ಜೊತೆ ಕೇವಲ 1 ರೂ.ಗೆ ಸ್ಮಾರ್ಟ್ ಸ್ಪೀಕರ್
(IPL 2021: KKR vs RCB- Head to Head Records)