IPL 2021: ಮುಂಬೈ ಇಂಡಿಯನ್ಸ್ ತಂಡಕ್ಕೆ ಕನ್ನಡಿಗ ವಿನಯ್ ಕುಮಾರ್ ಸೇರ್ಪಡೆ
ಟೀಮ್ ಇಂಡಿಯಾ ಪರ 31 ಏಕದಿನ ಪಂದ್ಯವನ್ನಾಡಿದ ವಿನಯ್ ಕುಮಾರ್ 38 ವಿಕೆಟ್ ಉರುಳಿಸಿದ್ದರು. ಹಾಗೆಯೇ 9 ಟಿ20 ಪಂದ್ಯಗಳಿಂದ 10 ವಿಕೆಟ್ ಪಡೆದಿದ್ದರು.
ಕರ್ನಾಟಕ ಕ್ರಿಕೆಟ್ ತಂಡದ ಮಾಜಿ ನಾಯಕ ವಿನಯ್ ಕುಮಾರ್ ಮತ್ತೊಮ್ಮೆ ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಈ ಬಾರಿ ಆಟಗಾರನಾಗಿ ಅಲ್ಲ ಎಂಬುದು ವಿಶೇಷ. ಹೌದು, ಮುಂಬೈ ಇಂಡಿಯನ್ಸ್ ತಂಡದ ಪ್ರತಿಭಾನ್ವೇಷಣೆಯ (ಟ್ಯಾಲೆಂಟ್ ಸ್ಕೌಟ್) ಸದಸ್ಯರಾಗಿ ವಿನಯ್ ಕುಮಾರ್ ಆಯ್ಕೆಯಾಗಿದ್ದಾರೆ.
2015 ಮತ್ತು 2017ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ವಿನಯ್ ಕುಮಾರ್ ರೋಹಿತ್ ಶರ್ಮಾ ಪಡೆ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಮತ್ತದೇ ತಂಡಕ್ಕಾಗಿ ಹೊಸ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಟ್ಯಾಲೆಂಟ್ ಸ್ಕೌಟ್ ಆಗಿ ಆಯ್ಕೆಯಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ವಿನಯ್, ಹಳೆಯ ತಂಡವನ್ನು ಮತ್ತೆ ಸೇರಿಕೊಂಡಿರುವುದು ಖುಷಿ ನೀಡಿದೆ ಎಂದಿದ್ದಾರೆ.
17 ವರ್ಷಗಳ ಕಾಲದ ಕ್ರಿಕೆಟ್ ವೃತ್ತಿಜೀವನದಲ್ಲಿ ತಮ್ಮ ನಾಯಕತ್ವದಲ್ಲಿ ವಿನಯ್ ಕುಮಾರ್ ಕರ್ನಾಟಕಕ್ಕೆ ಎರಡು ಬಾರಿ ರಣಜಿ ಟ್ರೋಫಿ ಗೆದ್ದುಕೊಟ್ಟಿದ್ದರು. ಟೀಮ್ ಇಂಡಿಯಾ ಪರ 31 ಏಕದಿನ ಪಂದ್ಯವನ್ನಾಡಿದ ವಿನಯ್ ಕುಮಾರ್ 38 ವಿಕೆಟ್ ಉರುಳಿಸಿದ್ದರು. ಹಾಗೆಯೇ 9 ಟಿ20 ಪಂದ್ಯಗಳಿಂದ 10 ವಿಕೆಟ್ ಪಡೆದಿದ್ದರು. ಇನ್ನು 2008 ರಿಂದ 2018ರವರೆಗೆ ಐಪಿಎಲ್ನಲ್ಲಿ ಕಾಣಿಸಿಕೊಂಡಿದ್ದ ಕರ್ನಾಟಕದ ವೇಗಿ 105 ಪಂದ್ಯಗಳಿಂದ 105 ವಿಕೆಟ್ ಪಡೆದು ಮಿಂಚಿದ್ದರು.
ಈ ವರ್ಷಾರಂಭದಲ್ಲಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ವಿನಯ್ ಸದ್ಯ ಮುಂಬೈ ಇಂಡಿಯನ್ಸ್ ಟ್ಯಾಲೆಂಟ್ ಸ್ಕೌಟ್ನ ಭಾಗವಾಗಿದ್ದು, ಈ ಮಂಡಳಿಯ ಮುಖ್ಯ ಸದಸ್ಯರಾಗಿ ಪಾರ್ಥಿವ್ ಪಟೇಲ್ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ಮದ್ಯಪಾನ ಮಾಡಿ ಶತಕ ಸಿಡಿಸಿದ್ದ ಗ್ಯಾರಿ ಸೋಬರ್ಸ್..!
ಇದನ್ನೂ ಓದಿ: ಸೂರ್ಯಕುಮಾರ್ ಯಾದವ್ಗೆ ಅವಕಾಶ ಕೈತಪ್ಪುವ ಆತಂಕ
(IPL 2021: Vinay Kumar joins Mumbai Indians talent scout team)