Ayush Badoni IPL 2022: ಅಂದು ಜೀರೋ.. ಇಂದು ಹೀರೋ; ಐಪಿಎಲ್​ನ ಬೇಬಿ ಎಬಿಡಿ ಆಯುಷ್ ಬದೋನಿ

Ayush Badoni IPL 2022: ಅಂದು ಜೀರೋ.. ಇಂದು ಹೀರೋ; ಐಪಿಎಲ್​ನ ಬೇಬಿ ಎಬಿಡಿ ಆಯುಷ್ ಬದೋನಿ
ಬದೋನಿ

Ayush Badoni IPL 2022: ಯಂಗ್ ಹೀರೋ ಆಯುಷ್ ಬದೋನಿ ರಾಷ್ಟ್ರ ರಾಜಧಾನಿ ಡೆಲ್ಲಿ ಮೂಲದ ಆಟಗಾರ. ಆದರೆ ದೆಹಲಿಯ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೊಸಿಯೇಶನ್ ಆಯುಷ್ ಬದೋನಿ ಸಾಮರ್ಥ್ಯವನ್ನು ಹುಡುಕುವಲ್ಲಿ ಸಂಪೂರ್ಣವಾಗಿ ವಿಫಲವಾಗಿತ್ತು.

TV9kannada Web Team

| Edited By: pruthvi Shankar

Apr 01, 2022 | 4:37 PM

ಐಪಿಎಲ್ 2022 (IPL 2022) ಪ್ರಾರಂಭವಾಗುವ ಮೊದಲು, ಅನೇಕ ಯುವ ಆಟಗಾರರ ಬಗ್ಗೆ ಮಾತುಗಳು ಕೇಳಿಬರುತ್ತಿದ್ದವು. ಇದರಲ್ಲಿ ಭಾರತವನ್ನು 5ನೇ ಬಾರಿಗೆ 19 ವರ್ಷದೊಳಗಿನವರ ವಿಶ್ವಕಪ್​ನಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಿದ ಆಟಗಾರರ ಹೆಸರುಗಳಷ್ಟೇ ಅಲ್ಲ, ‘ಬೇಬಿ ಎಬಿ’ ಎಂದೇ ಖ್ಯಾತರಾಗಿರುವ ದಕ್ಷಿಣ ಆಫ್ರಿಕಾದ ಯುವ ಭರವಸೆಯ ಆಟಗಾರ ಡೆವಾಲ್ಡ್ ಬ್ರೆವಿಸ್ ಅವರ ಹೆಸರೂ ಸೇರಿತ್ತು. ಆದರೆ ಯಾರ ನಾಲಿಗೆಯಲ್ಲೂ ಆಯುಷ್ ಬದೋನಿ (Ayush Badoni) ಹೆಸರಿರಲಿಲ್ಲ. ಅಷ್ಟಕ್ಕೂ ಬದೋನಿ ಬಗ್ಗೆ ಮಾತನಾಡಲು ಈ ಮುಂಚೆ ಅವರು ಅಂತಹ ಹೇಳಿಕೊಳ್ಳುವಂತಹ ಆಟವನ್ನೇನೂ ಪ್ರದರ್ಶಿಸಿರಲಿಲ್ಲ. ಐಪಿಎಲ್‌ನ ಮೊದಲ 5 ಟಿ20 ಪಂದ್ಯಗಳಲ್ಲಿ ಅವರ ಖಾತೆಯಲ್ಲಿ ಕೇವಲ 8 ರನ್‌ಗಳು ದಾಖಲಾಗಿದ್ದವು. ಆದರೆ, ಆ 5 ಟಿ20ಗಳಲ್ಲಿ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿತ್ತು ಎಂಬುದಂತೂ ಸತ್ಯ. ಆದರೆ ಈಗ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ಬಳಸಿಕೊಂಡಿರುವ ಬದೋನಿ ರಾತ್ರೋರಾತ್ರಿ ಬೇಬಿ ಎಬಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಜೊತೆಗೆ ಲಕ್ನೋ ತಂಡದ ಮ್ಯಾಚ್ ವಿನ್ನರ್ ಎಂಬ ಹೆಗ್ಗಳಿಕೆ ಅವರ ಪಾಲಾಗಿದೆ.

ಐಪಿಎಲ್ 2022 ರ ಕೇವಲ 2 ಪಂದ್ಯಗಳಲ್ಲಿ ತನ್ನ ಹೆಸರನ್ನು ಇಡೀ ಭಾರತಕ್ಕೆ ಪರಿಚಯಿಸುವ ಮೂಲಕ ಆಯುಷ್ ಬದೋನಿ ತನ್ನ ಬಳಿ ಎಂತಹ ಪ್ರತಿಭೆಯಿದೆ ಎಂಬುದನ್ನು ಇಡೀ ಕ್ರಿಕೆಟ್ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಪ್ರತಿಭೆ ಒಂದೇ ಅಲ್ಲ, ಈ ಆಟಗಾರನ ಬಳಿ ವಿಭಿನ್ನ ಶೈಲಿಯ ಬ್ಯಾಟಿಂಗ್ ರೂಪಕಗಳಿವೆ. ಆ ರೂಪಕ ಹೊರಗೆ ಬರವುದು ಪಂದ್ಯದ ಪರಿಸ್ಥಿತಿ ಮೇಲೆ ಅವಲಂಬಿತವಾಗಿರುತ್ತದೆ.

200 ಪ್ಲಸ್ ಸ್ಟ್ರೈಕ್ ರೇಟ್‌ 22ರ ಹರೆಯದ ಯುವಕ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತನ್ನ ಆಟದ ಮನಸ್ಥಿತಿಯ ಇತ್ತೀಚಿನ ಉದಾಹರಣೆಯನ್ನು ಪ್ರಸ್ತುತಪಡಿಸಿದರು. ಲಕ್ನೋ ಸೂಪರ್ ಜೈಂಟ್ಸ್‌ಗೆ 16 ಎಸೆತಗಳಲ್ಲಿ 40 ರನ್‌ಗಳ ಅಗತ್ಯವಿದ್ದಾಗ ಆಯುಷ್ ಕ್ರೀಸ್‌ಗಿಳಿದಿದ್ದ. ಎಲ್ಲರು ಪಂದ್ಯ ಲಕ್ನೋ ಕೈತಪ್ಪಿದೆ ಅಂತಲೇ ಭಾವಿಸಿದ್ದರು. ಆದರೆ ಈ ಪಂದ್ಯದಲ್ಲಿ ತಂಡಕ್ಕೆ ಗೆಲುವು ಅನಿವಾರ್ಯವಾಗಿತ್ತು. ಆ ಗೆಲುವಿಗೆ ಆಯುಷ್ ಬದೋನಿ ಬೆನ್ನೇಲುಬಾಗಿ ನಿಂತರು. ಚೆನ್ನೈನ ಬೌಲಿಂಗ್ ಎಷ್ಟು ಅನುಭವದಿಂದ ಕೂಡಿದ್ದರು, ಅವರ್ಯಾರು ಬದೋನಿ ಮುಂದೆ ಚಮತ್ಕಾರ ಮಾಡಲಾಗಲಿಲ್ಲ. ನನ್ನ ಪಾಲುದಾರ ಎವಿನ್ ಲೆವಿಸ್ ಜೊತೆ ಪಾಲುದಾರಿಕೆಯೊಂದಿಗೆ ಬದೋನಿ ಲಕ್ನೋಗೆ ಗೆಲುವಿನ ಉಡುಗೂರೆ ನೀಡಿದ್ದಾರೆ. 200 ಪ್ಲಸ್ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸಿ 9 ಎಸೆತಗಳಲ್ಲಿ ಅಜೇಯ 19 ರನ್ ಗಳಿಸಿ ಗೆಲುವನ್ನು ತಂಡದ ಮಡಿಲಿಗೆ ಹಾಕಿದರು.

ಗುಜರಾತ್ ವಿರುದ್ಧ 41 ಎಸೆತಗಳಲ್ಲಿ 54 ರನ್ ಇದಕ್ಕೂ ಮುನ್ನ ಗುಜರಾತ್ ಟೈಟಾನ್ಸ್ ವಿರುದ್ಧದ ಲಕ್ನೋ ಸೂಪರ್ ಜೈಂಟ್ಸ್​ನ ಮೊದಲ ಪಂದ್ಯದಲ್ಲಿ 29 ರನ್ ಗಳಿಗೆ ತಂಡದ 4 ವಿಕೆಟ್ ಪತನಗೊಂಡಾಗ ಕ್ರೀಸ್​ಗೆ ಬಂದಿದ್ದ ಬದೋನಿ, ಅಂದು ಕೂಡ ತಂಡದ ಹೀರೋ ಆಗಿದ್ದರು. ವಿಕೆಟ್ ಉರುಳುತ್ತಿದ್ದರು ತಲೆ ಕೆಡಿಸಿಕೊಳ್ಳದ ಬದೋನಿ ಅಂದು ಸವಾಲಿನ ಇನ್ನಿಂಗ್ಸ್ ಆಡಿದ್ದರು. ವಿಕೆಟ್ ಪತನದ ನಡುವೆಯೂ ಅವರು 41 ಎಸೆತಗಳಲ್ಲಿ 54 ರನ್‌ಗಳ ಇನ್ನಿಂಗ್ಸ್ ಆಡಿದರು. ಆದರೆ, ಈ ಇನ್ನಿಂಗ್ಸ್ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಆದರೆ, ಈ ಸೋಲಿನಲ್ಲೂ ಆಯುಷ್ ಬದೋನಿ ತನ್ನ ಪ್ರತಿಭೆಯನ್ನು ಇಡೀ ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದರು.

ಬದೋನಿ ಬಗ್ಗೆ ಒಂದಿಷ್ಟು ಯಂಗ್ ಹೀರೋ ಆಯುಷ್ ಬದೋನಿ ರಾಷ್ಟ್ರ ರಾಜಧಾನಿ ಡೆಲ್ಲಿ ಮೂಲದ ಆಟಗಾರ. ಆದರೆ ದೆಹಲಿಯ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೊಸಿಯೇಶನ್ ಆಯುಷ್ ಬದೋನಿ ಸಾಮರ್ಥ್ಯವನ್ನು ಹುಡುಕುವಲ್ಲಿ ಸಂಪೂರ್ಣವಾಗಿ ವಿಫಲವಾಗಿತ್ತು. ಅದು ಎಷ್ಟರ ಮಟ್ಟಿಗೆಯೆಂದರೆ ದೆಹಲಿ ರಣಜಿ ತಂಡಕ್ಕೂ ಆಯುಷ್ ಬದೋನಿ ಆಯ್ಕೆಯಾಗಿರಲಿಲ್ಲ. ಇದೀಗ ಐಪಿಎಲ್‌ನಲ್ಲಿ ಅಬ್ಬರಿಸುವ ಮೂಲಕ ಬದೋನಿ, ತನ್ನ ಸಾಮಥ್ರ್ಯವನ್ನು ಡೆಲ್ಲಿ ಕ್ರಿಕೆಟ್ ಮಂಡಳಿಗೆ ಪರಿಚಯಿಸಿದ್ದಾರೆ. ಜೊತೆಗೆ ಎಲ್ಲರಿಗೂ ಬ್ಯಾಟ್ ಮೂಲಕವೇ ಉತ್ತರ ನೀಡುವಲ್ಲಿ ಸಫಲವಾಗಿದ್ದಾರೆ. ಈಗ ಐಪಿಎಲ್​ನಲ್ಲಿ ಮಿಂಚುತ್ತಿರುವ ಯುವ ಸ್ಟಾರ್​ಗೆ ಮುಂದೆ ಭಾಗ್ಯದ ಬಾಗಿಲು ತೆರೆಯುವ ನೀರಿಕ್ಷೆಗಳಿವೆ.

ಇದನ್ನೂ ಓದಿ:IND vs WI: ಇಂಗ್ಲೆಂಡ್ ಬಳಿಕ ವಿಂಡೀಸ್ ಪ್ರವಾಸ ಮಾಡಲಿದೆ ಭಾರತ! ದೊಡ್ಡಣ್ಣನ ನಾಡಲ್ಲಿ ಟಿ20 ಸರಣಿ ಆಯೋಜನೆ?

Follow us on

Related Stories

Most Read Stories

Click on your DTH Provider to Add TV9 Kannada