ಐಪಿಎಲ್ ಮೆಗಾ ಹರಾಜಿನಲ್ಲಿ ಒಟ್ಟು 590 ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ 370 ಭಾರತೀಯ ಕ್ರಿಕೆಟಿಗರಿದ್ದರೆ, 220 ವಿದೇಶಿ ಆಟಗಾರರಿದ್ದಾರೆ. ಈ ವಿದೇಶಿ ಆಟಗಾರರ ಪಟ್ಟಿಯಲ್ಲಿ ಶ್ರೀಲಂಕಾ 23 ಆಟಗಾರರು ಸ್ಥಾನ ಪಡೆದಿದ್ದಾರೆ. ಅದರಲ್ಲೊಬ್ಬರು 19 ವರ್ಷದ ಮಥೀಶ ಪತಿರಾನ. ಶ್ರೀಲಂಕಾ ಈ ಯುವ ಕ್ರಿಕೆಟಿಗ ಇದೀಗ ಮೆಗಾ ಹರಾಜಿಗೂ ಮುನ್ನವೇ ಎಲ್ಲರ ಗಮನ ಸೆಳೆದಿದ್ದಾರೆ. ಇದಕ್ಕೆ ಕಾರಣ ಈತನ ಬೌಲಿಂಗ್ ಶೈಲಿ. ಹೌದು, ಮಥೀಶ ಪತಿರಾನರ ಬೌಲಿಂಗ್ ಶೈಲಿಯು ಯಾರ್ಕರ್ ಮಾಂತ್ರಿಕ ಲಸಿತ್ ಮಾಲಿಂಗನ ನೆನಪಿಸುತ್ತದೆ. ವೇಗ ಹಾಗೂ ನಿಖರ ದಾಳಿ ಮೂಲಕ ಐಪಿಎಲ್ನಲ್ಲಿ 170 ವಿಕೆಟ್ ಉರುಳಿಸಿರುವ ಮಾಲಿಂಗ ಹೊಸ ಅವತಾರದಂತೆ ಇದೀಗ ಮಥೀಶ ಪತಿರಾನ ಎಂಟ್ರಿ ಕೊಟ್ಟಿದ್ದಾರೆ.
ಮಾಲಿಂಗ ರೀತಿಯಲ್ಲೇ ಚೆಂಡೆಸೆಯುವ ಮಥೀಶ ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ 20 ಲಕ್ಷ ರೂ ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಶ್ರೀಲಂಕಾದಲ್ಲಿ ಹೊಸ ಮಾಲಿಂಗ ಎಂದು ಗುರುತಿಸಿಕೊಂಡಿರುವ ಮಥೀಶ ‘ಸ್ಲಿಂಗಿ’ ಬೌಲಿಂಗ್ ಆಕ್ಷನ್‌ನಿಂದ ಹೊಸ ಸಂಚಲನ ಸೃಷ್ಟಿಸಿದ್ದಾರೆ.
ಸದ್ಯ ಐಸಿಸಿ ಅಂಡರ್-19 ಕ್ರಿಕೆಟ್ ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡವನ್ನು ಪ್ರತಿನಿಧಿಸಿರುವ ಈ ಯುವ ವೇಗಿ ಮೂರು ಪಂದ್ಯಗಳಲ್ಲಿ 25.80 ಸರಾಸರಿಯಲ್ಲಿ ಮತ್ತು ಪ್ರತಿ ಓವರ್‌ಗೆ 5.60 ರನ್‌ಗಳ ಎಕಾನಮಿ ರೇಟ್ನಲ್ಲಿ 5 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದಕ್ಕೂ ಮುನ್ನ ಕ್ಯಾಂಡಿಯ ಟ್ರಿನಿಟಿ ಕಾಲೇಜ್‌ಗಾಗಿ ಆಡಿದ ತಮ್ಮ ಚೊಚ್ಚಲ ಪಂದ್ಯದಲ್ಲಿ ಆರು ವಿಕೆಟ್‌ಗಳನ್ನು ಉರುಳಿಸಿ ಮಿಂಚಿದ್ದರು.
ಈತನ ಮಾರಕ ಬೌಲಿಂಗ್ ಕಾರಣದಿಂದಲೇ ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನೆಟ್ ಬೌಲರ್ ಆಗಿ ಕರೆಸಿಕೊಂಡಿತ್ತು. ಇದೀಗ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿರುವ ಮಥೀಶ ಪತಿರಾನ ಅವರನ್ನು ಸಿಎಸ್ಕೆ ತಂಡವೇ ಖರೀದಿಸಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಒಟ್ಟಿನಲ್ಲಿ ಐಪಿಎಲ್ನಲ್ಲಿ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿರುವ ಲಸಿತ್ ಮಾಲಿಂಗ ಶೈಲಿಯಲ್ಲೇ ಮಾರಕ ಯಾರ್ಕರ್ಗಳ ಮೂಲಕ ಗಮನ ಸೆಳೆದಿರುವ ಮಥೀಶ ಪತಿರಾನ ಫೆಬ್ರವರಿ 12 ಮತ್ತು 13 ರಂದು ನಡೆಯಲಿರುವ ಮೆಗಾ ಹರಾಜಿನಲ್ಲಿ ಯಾವುದಾದರೂ ತಂಡ ಖರೀದಿಸುವ ವಿಶ್ವಾಸದಲ್ಲಿದ್ದಾರೆ.
ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ
ಇದನ್ನೂ ಓದಿ: IPL 2022: ಮೆಗಾ ಹರಾಜಿನಲ್ಲಿ 590 ಆಟಗಾರರು: ಯಾವ ದೇಶದಿಂದ ಎಷ್ಟು ಆಟಗಾರರು? ಇಲ್ಲಿದೆ ಸಂಪೂರ್ಣ ಪಟ್ಟಿ
ಇದನ್ನೂ ಓದಿ: Jason Holder: ಡಬಲ್ ಹ್ಯಾಟ್ರಿಕ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ ಜೇಸನ್ ಹೋಲ್ಡರ್
(IPL 2022 Auction: ’New Lasith Malinga’ in town)