ಐಪಿಎಲ್ ಮೆಗಾ ಹರಾಜಿಗಾಗಿ (IPL 2022 Mega Auction) ಎಲ್ಲಾ ಫ್ರಾಂಚೈಸಿಗಳು ಭರ್ಜರಿ ಸಿದ್ದತೆಯಲ್ಲಿದೆ. ಈಗಾಗಲೇ 10 ತಂಡಗಳು ಒಟ್ಟು 33 ಆಟಗಾರರನ್ನು ಉಳಿಸಿಕೊಂಡಿದೆ. ಅದರಂತೆ 590 ಆಟಗಾರರಲ್ಲಿ ಒಟ್ಟು 217 ಆಟಗಾರರಿಗಾಗಿ ಬಿಡ್ಡಿಂಗ್ ನಡೆಯಲಿದೆ. ಇಲ್ಲಿ ಒಂದು ತಂಡದ ಬಿಡ್ಡಿಂಗ್ ಮೊತ್ತ 90 ಕೋಟಿ ರೂ. ಆದರೆ ಈ ಬಿಡ್ಡಿಂಗ್ ಮೊತ್ತದಿಂದ ಈಗಾಗಲೇ ಉಳಿಸಿಕೊಂಡಿರುವ ಆಟಗಾರರಿಗೆ ನೀಡಲಾದ ಮೊತ್ತವನ್ನು ಕಳೆಯಲಾಗುತ್ತೆ. ಉದಾಹರಣೆಗೆ ಆರ್ಸಿಬಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಸಿರಾಜ್ಗೆ ಒಟ್ಟು 33 ಕೋಟಿ ರೂ. ನೀಡಿದೆ. ಈ ಮೊತ್ತವನ್ನು 90 ಕೋಟಿಯಿಂದ ಕಳೆದರೆ ಆರ್ಸಿಬಿ ಬಳಿ ಇರುವುದು 57 ಕೋಟಿ ರೂ. ಮಾತ್ರ. ಈ ಮೊತ್ತದಲ್ಲಿ ಉಳಿದ ಆಟಗಾರರನ್ನು ಖರೀದಿಸಬೇಕಾಗುತ್ತದೆ.
ಇಲ್ಲಿ ಮತ್ತೊಂದು ಅಂಶವೆಂದರೆ ಒಂದು ತಂಡವು ಕನಿಷ್ಠ 18 ಆಟಗಾರರನ್ನು ಖರೀದಿಸಬೇಕು. ಅಂದರೆ ಒಂದು ತಂಡದಲ್ಲಿ 18 ಆಟಗಾರರು ಇರಲೇಬೇಕು. ಇನ್ನು ಗರಿಷ್ಠ 25 ಆಟಗಾರರನ್ನು ಆಯ್ಕೆ ಮಾಡಬಹುದು. ಇದಕ್ಕಿಂತ ಕಡಿಮೆ ಅಥವಾ ಜಾಸ್ತಿ ಆಟಗಾರರನ್ನು ಆಯ್ಕೆ ಮಾಡುವಂತಿಲ್ಲ.
ಅದರಂತೆ ಈ ಬಾರಿ ಒಟ್ಟು 217 ಆಟಗಾರರಿಗೆ ಬಿಡ್ಡಿಂಗ್ ನಡೆಯಲಿದೆ. ಆದರೆ ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ 217 ಆಟಗಾರರಿಗೂ ಅವಕಾಶ ಸಿಗಬೇಕೆಂದಿಲ್ಲ. ಏಕೆಂದರೆ ಕೆಲ ತಂಡಗಳು ತನ್ನೆಲ್ಲಾ ಮೊತ್ತವನ್ನು ವ್ಯಯಿಸಿ 18 ಆಟಗಾರರನ್ನು ಖರೀದಿಸಬಹುದು. ಅಥವಾ 20, 22 ಆಟಗಾರರಿಗೆ ದೊಡ್ಡ ಮೊತ್ತ ನೀಡಿ ತಂಡ ಕಟ್ಟಬಹುದು. ಇಲ್ಲಿ 18 ರಿಂದ 25 ಆಟಗಾರರನ್ನು ಖರೀದಿಸುವ ಅವಕಾಶ ಇರುವುದರಿಂದ ಒಂದು ತಂಡವು ತನಗೆ ಬೇಕಾದಷ್ಟು (18 ರಿಂದ 25) ಆಟಗಾರರನ್ನು ಖರೀದಿಸಬಹುದು.
ಉದಾಹರಣೆಗೆ ಕಳೆದ ಸೀಸನ್ನಲ್ಲಿ ಆರ್ಸಿಬಿ ತಂಡದಲ್ಲಿ ಕೇವಲ 22 ಆಟಗಾರರು ಮಾತ್ರ ಇದ್ದರು. ಇಲ್ಲಿ ಗರಿಷ್ಠ 25 ಆಟಗಾರರನ್ನು ಖರೀದಿಸುವ ಅವಕಾಶವಿದ್ದರೂ ಅದಾಗಲೇ 22 ಆಟಗಾರರನ್ನು ಖರೀದಿಸುವ ವೇಳೆಗೆ ಆರ್ಸಿಬಿ ತನ್ನೆಲ್ಲಾ ಮೊತ್ತವನ್ನು ಖರ್ಚು ಮಾಡಿತ್ತು. ಹೀಗಾಗಿ ಈ ಬಾರಿ ಕೂಡ ಪ್ರತಿ ತಂಡಗಳು ಎಷ್ಟು ಮೊತ್ತ ಖರ್ಚು ಮಾಡುತ್ತೆ ಅದರ ಮೇಲೆ ಆಟಗಾರರಿಗೆ ಅವಕಾಶ ಸಿಗಲಿದೆ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ, ತಂಡದ ಹರಾಜು ಮೊತ್ತ 90 ಕೋಟಿಯಲ್ಲಿ 67.5 ಕೋಟಿಯನ್ನು ಖರ್ಚು ಮಾಡಲೇಬೇಕು. ಇದಾದ ಬಳಿಕ ಆಯಾ ಫ್ರಾಂಚೈಸಿಗೆ ಬಿಟ್ಟಿದ್ದು. ಅಂದರೆ ಉದಾಹರಣೆಗೆ, ಸಿಎಸ್ಕೆ ತಂಡವು 68 ಕೋಟಿ ಖರ್ಚು ಮಾಡಿ ತನಗೆ ಬೇಕಾದ 18 ಆಟಗಾರರನ್ನು ಖರೀದಿಸಿದ ಬಳಿಕ ಉಳಿದ ಮೊತ್ತವನ್ನು ಬಿಡ್ಡಿಂಗ್ನಿಂದ ಹಿಂದೆ ಸರಿಯಬಹುದು. ಹಾಗಾಗಿ ಪ್ರತಿ ತಂಡಗಳು 90 ಕೋಟಿ ರೂ.ವರೆಗೂ ಬಿಡ್ಡಿಂಗ್ ಮಾಡಲಿದೆ ಎಂದೇಳಲಾಗುವುದಿಲ್ಲ. ತಮಗೆ ಬೇಕಾದ ಆಟಗಾರರು ಸಿಕ್ಕರೆ 67.5 ಕೋಟಿಯ ಬಳಿಕ ಬಿಡ್ಡಿಂಗ್ ನಿಲ್ಲಿಸುವ ಅವಕಾಶ ಕೂಡ ಫ್ರಾಂಚೈಸಿಗಳಿಗೆ ಇದೆ.
ಇನ್ನು ಈ ಬಾರಿ ಮೆಗಾ ಹರಾಜಿನಲ್ಲಿ 370 ಭಾರತೀಯ ಮತ್ತು 220 ವಿದೇಶಿ (ಒಟ್ಟು 590) ಆಟಗಾರರಿದ್ದಾರೆ. ಈ ಪೈಕಿ 228 ಮಂದಿ ಅಂತರರಾಷ್ಟ್ರೀಯ ಕ್ರಿಕೆಟ್ ಆಟಗಾರರು. ಈ 590 ಆಟಗಾರರಲ್ಲಿ ಮೊದಲ ಸುತ್ತಿನಲ್ಲಿ 10 ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಮೊದಲ ರೌಂಡ್ನಲ್ಲಿ ಡೇವಿಡ್ ವಾರ್ನರ್, ಶ್ರೇಯಸ್ ಅಯ್ಯರ್, ಶಿಖರ್ ಧವನ್, ಕಗಿಸೊ ರಬಾಡಾ, ಕ್ವಿಂಟನ್ ಡಿಕಾಕ್, ಪ್ಯಾಟ್ ಕಮಿನ್ಸ್, ಟ್ರೆಂಟ್ ಬೌಲ್ಟ್, ರವಿ ಅಶ್ವಿನ್, ಮೊಹಮ್ಮದ್ ಶಮಿ ಅವರ ಬಿಡ್ಡಿಂಗ್ ನಡೆಯಲಿದೆ. ಹಾಗೆಯೇ ಮೊದಲ ದಿನ (ಶನಿವಾರ) ಒಟ್ಟು 161 ಆಟಗಾರರ ಹರಾಜು ನಡೆಯಲಿದೆ. ಉಳಿದ ಆಟಗಾರರ ಬಿಡ್ಡಿಂಗ್ ಭಾನುವಾರ ನಡೆಯಲಿದೆ.
ಯಾವ ತಂಡದ ಬಳಿ ಎಷ್ಟು ಮೊತ್ತವಿದೆ?
ಚೆನ್ನೈ ಸೂಪರ್ ಕಿಂಗ್ಸ್ [CSK]: INR 48 ಕೋಟಿ
ಮುಂಬೈ ಇಂಡಿಯನ್ಸ್ [MI]: INR 48 ಕೋಟಿ
ದೆಹಲಿ ಕ್ಯಾಪಿಟಲ್ಸ್ [DC]: INR 47.5 ಕೋಟಿ
ಕೋಲ್ಕತ್ತಾ ನೈಟ್ ರೈಡರ್ಸ್ [KKR]: INR 48 ಕೋಟಿ
ಗುಜರಾತ್ ಟೈಟಾನ್ಸ್ [GL]: INR 52 ಕೋಟಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು [RCB]: INR 57 ಕೋಟಿ
ಲಕ್ನೋ ಸೂಪರ್‌ಜೈಂಟ್ [LSG]: INR 59 ಕೋಟಿ
ರಾಜಸ್ಥಾನ್ ರಾಯಲ್ಸ್ [RR]: INR 62 ಕೋಟಿ
ಸನ್ ರೈಸರ್ಸ್ ಹೈದರಾಬಾದ್ [SRH]: INR 68 ಕೋಟಿ
ಪಂಜಾಬ್ ಕಿಂಗ್ಸ್ [PBKS]: INR 72 ಕೋಟಿ
ಒಟ್ಟಿನಲ್ಲಿ ಈ ಬಾರಿಯ ಐಪಿಎಲ್ ಹಲವು ಕಾರಣಗಳಿಂದ ಕ್ರಿಕೆಟ್ ಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿದ್ದು, ಅದರಂತೆ ಯಾವ ತಂಡ ಎಷ್ಟು ಆಟಗಾರರನ್ನು ಖರೀದಿಸಲಿದೆ ಕಾದು ನೋಡಬೇಕಿದೆ.
ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ
ಇದನ್ನೂ ಓದಿ: IPL 2022: ಐಪಿಎಲ್ ಹರಾಜಿನಲ್ಲಿ ಅತೀ ಹೆಚ್ಚು ಮೊತ್ತ ಖರ್ಚು ಮಾಡಿದ ತಂಡ ಯಾವುದು ಗೊತ್ತಾ?
ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದ ಹಿಟ್ಮ್ಯಾನ್ ರೋಹಿತ್ ಶರ್ಮಾ