Updated on: Jan 24, 2022 | 6:13 PM
ಐಪಿಎಲ್ ಮೆಗಾ ಹರಾಜು ಯಾವಾಗ ಎಂಬ ಪ್ರಶ್ನೆಗೆ ಈಗಾಗಲೇ ಬಿಸಿಸಿಐ ಉತ್ತರ ನೀಡಿದೆ. ಅದರಂತೆ ಫೆಬ್ರವರಿ 12 ಮತ್ತು 13 ರಂದು ಮೆಗಾ ಹರಾಜು ನಡೆಸಲು ನಿರ್ಧರಿಸಲಾಗಿದೆ. ಇದಾಗ್ಯೂ ಹರಾಜು ಸ್ಥಳ ಬದಲಾಗುವ ಸಾಧ್ಯತೆಯಿದೆ ಎಂಬ ಮಾಹಿತಿಯೊಂದು ಬಿಸಿಸಿಐ ಮೂಲಗಳಿಂದ ಹೊರಬಿದ್ದಿದೆ.
ಈ ಹಿಂದೆ ಬೆಂಗಳೂರಿನಲ್ಲಿ ಫೆಬ್ರವರಿ 12 ಮತ್ತು 13 ರಂದು ಮೆಗಾ ಹರಾಜು ನಡೆಸಲು ತೀರ್ಮಾನಿಸಲಾಗಿತ್ತು. ಆದರೀಗ ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಭಾನುವಾರ 26,299 ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಹರಾಜು ಸ್ಥಳವನ್ನು ಬದಲಿಸಲು ಬಿಸಿಸಿಐ ಚಿಂತಿಸಿದೆ.
ಐಪಿಎಲ್ ಹರಾಜಿಗೆ ಮೂರು ವಾರಗಳಿಗಿಂತ ಕಡಿಮೆ ಸಮಯ ಉಳಿದಿದ್ದು, ಇದಾಗ್ಯೂ ಬಿಸಿಸಿಐ ಹರಾಜಿನ ಸ್ಥಳವನ್ನು ಇನ್ನೂ ಅಂತಿಮಗೊಳಿಸಿಲ್ಲ. ಪ್ರಸ್ತುತ ಮಾಹಿತಿ ಪ್ರಕಾರ ಮುಂಬೈನಲ್ಲೇ ಮೆಗಾ ಹರಾಜು ನಡೆಸುವ ಬಗ್ಗೆ ಐಪಿಎಲ್ ಆಡಳಿತ ಮಂಡಳಿ ಚರ್ಚಿಸಿದ್ದು, ಹೀಗಾಗಿ ಬೆಂಗಳೂರಿನ ಬದಲು ಮುಂಬೈನಲ್ಲೇ ಹರಾಜು ನಡೆಯುವ ಸಾಧ್ಯತೆಯಿದೆ.
ಈ ಬಾರಿ ಮೆಗಾ ಹರಾಜಿನಲ್ಲಿ ಒಟ್ಟು 1214 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 318 ವಿದೇಶಿ ಆಟಗಾರರಿದ್ದಾರೆ. ಹಾಗೆಯೇ 896 ಭಾರತೀಯ ಆಟಗಾರರು ಈ ಪಟ್ಟಿಯಲ್ಲಿದ್ದಾರೆ.
ಇನ್ನು ಈಗಾಗಲೇ 10 ತಂಡಗಳು 33 ಆಟಗಾರರನ್ನು ರಿಟೈನ್ ಮಾಡಿಕೊಂಡಿದ್ದು, ಅದರಂತೆ ಮೆಗಾ ಹರಾಜಿನಲ್ಲಿ 217 ಆಟಗಾರರಿಗಾಗಿ ಬಿಡ್ಡಿಂಗ್ ನಡೆಯಲಿದೆ.