IPL 2022: ಈ ಬಾರಿಯ ಐಪಿಎಲ್ ಪ್ರಾಯೋಕತ್ವದಿಂದ ಬಿಸಿಸಿಐ ಗಳಿಸುವ ಆದಾಯ ಎಷ್ಟು ಗೊತ್ತಾ?
IPL 2022: ಮುಂಬರುವ ಎರಡು ಸೀಸನ್ಗಳಲ್ಲಿನ ಪಂದ್ಯಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ ಐಪಿಎಲ್ 2022ಕ್ಕಾಗಿ 484 ಕೋಟಿ ರೂ ಮತ್ತು IPL 2023 ಗಾಗಿ 512 ಕೋಟಿಗಳನ್ನು ಪಾವತಿಸಲು ವಿವೋ ಕಂಪೆನಿ ಒಪ್ಪಿಕೊಂಡಿತ್ತು.
ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ರಂಗೇರಲು ಇನ್ನು ದಿನಗಳು ಮಾತ್ರ ಉಳಿದಿವೆ. ಈಗಾಗಲೇ ಅಭಿಮಾನಿಗಳು ಮಾರ್ಚ್ 26 ರಿಂದ ಐಪಿಎಲ್ ವೀಕ್ಷಿಸಲು ಉತ್ಸುಕರಾಗಿದ್ದಾರೆ. ಇದರ ಜೊತೆಗೆ ಬಿಸಿಸಿಐ ಕೂಡ ಈ ಬಾರಿ ಟೂರ್ನಿ ಆಯೋಜಿಸುವಲ್ಲಿ ಅತ್ಯುತ್ಸಾಹ ಹೊಂದಿದೆ. ಇದಕ್ಕೆ ಕಾರಣ ಈ ಬಾರಿ ಐಪಿಎಲ್ ಮೂಲಕ ಬಿಸಿಸಿಐ ದಾಖಲೆಯ ಮೊತ್ತ ಪಡೆಯಲಿದೆ. ಈ ವರ್ಷವೇ ಐಪಿಎಲ್ ಪ್ರಾಯೋಜಕತ್ವದ ಒಪ್ಪಂದದಿಂದ ಬಿಸಿಸಿಐ 800 ಕೋಟಿ ರೂ.ಗೂ ಹೆಚ್ಚು ಆದಾಯ ಗಳಿಸಲಿದೆ ಎಂದು ವರದಿಯಾಗಿದೆ. ಇದು ಈವರೆಗಿನ ಲೀಗ್ ಇತಿಹಾಸದಲ್ಲೇ ಗರಿಷ್ಠ ಮೊತ್ತವಾಗಿದೆ. BCCI ಈ ವರ್ಷ ಹೊಸ IPL ಶೀರ್ಷಿಕೆ ಪ್ರಾಯೋಜಕರಾಗಿ (TATA IPL 2022) ಟಾಟಾ ಕಂಪೆನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದರೊಂದಿಗೆ ಎರಡು ಹೊಸ ಅಸೋಸಿಯೇಟ್ ಪ್ರಾಯೋಜಕರು ಸಹ ಐಪಿಎಲ್ ಪ್ರಾಯೋಜಕತ್ವಕ್ಕೆ ಸಹಿ ಹಾಕಿದ್ದಾರೆ.
ಐಪಿಎಲ್ ಆಡಳಿತ ಮಂಡಳಿಯು ಇತ್ತೀಚೆಗೆ ರುಪೇ ಮತ್ತು ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನೊಂದಿಗೆ ಹೊಸ ಒಪ್ಪಂದವನ್ನು ಮಾಡಿಕೊಂಡಿದೆ. ಈಗ ಐಪಿಎಲ್‌ನ ಪ್ರಾಯೋಜಕರಾಗಿ 9 ದೊಡ್ಡ ಬ್ರ್ಯಾಂಡ್‌ಗಳಿದ್ದು, ಈ ಮೂಲಕ ಬಿಸಿಸಿಐ ಮೊದಲ ಬಾರಿಗೆ IPL ಅಧಿಕೃತ ಪಾಲುದಾರರ ಎಲ್ಲಾ ಸ್ಲಾಟ್‌ಗಳನ್ನು ಭರ್ತಿ ಮಾಡಿದೆ. ಈ ಮೂಲಕ ಈ ಹಿಂದಿಗಿಂತ ಈ ಬಾರಿ ಹೆಚ್ಚಿನ ಆದಾಯಗಳಿಸುತ್ತಿದೆ.
ಮಾಹಿತಿಯ ಪ್ರಕಾರ, ಬಿಸಿಸಿಐ ಐಪಿಎಲ್ ಪ್ರಾಯೋಜಕತ್ವದ ಹೆಸರಿನಲ್ಲಿ ರುಪೇ ಜೊತೆಗೆ 42 ಕೋಟಿ ಮತ್ತು ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನೊಂದಿಗೆ ವಾರ್ಷಿಕ 44 ಕೋಟಿ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದವು ಐಪಿಎಲ್ ಬ್ರಾಂಡ್ ಅನ್ನು ಎತ್ತಿ ತೋರಿಸುತ್ತಿದೆ. ಹೊಸ ಪ್ರಾಯೋಜಕತ್ವದ ಒಪ್ಪಂದದಿಂದ ನಮಗೆ ತುಂಬಾ ಸಂತೋಷವಾಗಿದೆ. ನಾನು ಒಪ್ಪಂದದ ಮೊತ್ತವನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ ಈ ವರ್ಷ ನಾವು ಐಪಿಎಲ್ ಪ್ರಾಯೋಜಕತ್ವದಿಂದ ದೊಡ್ಡ ಆದಾಯವನ್ನು ಪಡೆಯುತ್ತೇವೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.
ಬಿಸಿಸಿಐ 800 ಕೋಟಿ ಗಳಿಸುವುದು ಹೇಗೆ ? ಅಷ್ಟಕ್ಕೂ ಬಿಸಿಸಿಐ ಆದಾಯ ಹೇಗೆ ಹೆಚ್ಚುತ್ತದೆ ಎಂಬುದಕ್ಕೆ ಎರಡು ಮೂಲಗಳಿವೆ. ಮೊದಲನೆಯದಾಗಿ ಐಪಿಎಲ್ 15ನೇ ಸೀಸನ್ ಗೆ ಪ್ರಾಯೋಜಕರ ಸಂಖ್ಯೆ ಹೆಚ್ಚಿದೆ. ಆದಾಯದ ಎರಡನೇ ಪ್ರಮುಖ ಮೂಲವೆಂದರೆ IPL 2022 ರ ಶೀರ್ಷಿಕೆ ಪ್ರಾಯೋಜಕತ್ವದ ಒಪ್ಪಂದ . ಈ ಬಾರಿಯ ಐಪಿಎಲ್‌ನ ಟೈಟಲ್ ಪ್ರಾಯೋಜಕರು ಟಾಟಾ. ಆದಾಗ್ಯೂ, ಟಾಟಾ ಸಮೂಹವು ಹಿಂದಿನ ವಿವೋ ಶೀರ್ಷಿಕೆ ಪ್ರಾಯೋಜಕತ್ವದ ಒಪ್ಪಂದದಲ್ಲಿ 440 ಕೋಟಿ ರೂಪಾಯಿಗಳಿಗೆ ಬದಲಾಗಿ ಪ್ರತಿ ವರ್ಷ 335 ಕೋಟಿ ರೂಪಾಯಿಗಳನ್ನು ಪಾವತಿಸುತ್ತದೆ. ಅಂದರೆ, ಹಿಂದಿನ ಒಪ್ಪಂದಕ್ಕೆ ಹೋಲಿಸಿದರೆ ಪ್ರತಿ ವರ್ಷ 105 ಕೋಟಿಗಳಷ್ಟು ಕಡಿಮೆ ಲಭ್ಯವಿರುತ್ತದೆ. ಆದರೂ, ಬಿಸಿಸಿಐನ ಹೊಸ ಒಪ್ಪಂದವು ಹೆಚ್ಚು ಗಳಿಸಲಿದೆ. ಹೇಗೆಂದರೆ…
VIVO ಡೀಲ್: ಪ್ರತಿ ಸೀಸನ್‌ಗೆ 440 ಕೋಟಿ ರೂ.
TATA ಗ್ರೂಪ್ ಡೀಲ್: ಪ್ರತಿ ಸೀಸನ್‌ಗೆ 335 ಕೋಟಿ ರೂ.
ಡೀಲ್ ನಷ್ಟ: 105 ಕೋಟಿ ರೂ.
2 ಸೀಸನ್‌ಗಳಿಂದ ಒಟ್ಟು ನಷ್ಟ: 210 ಕೋಟಿ ರೂ.
ಆದರೆ ಇಲ್ಲಿ ವಿವೋ ಬಿಸಿಸಿಐ ಜೊತೆ 2023 ರವರೆಗೆ ಒಪ್ಪಂದ ಮಾಡಿಕೊಂಡಿತ್ತು ಎಂಬುದೇ ವಿಶೇಷ. 2018 ರಲ್ಲಿ ವಿವೋ ಕಂಪೆನಿ ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಪ್ರತಿ ಸೀಸನ್‌ಗೆ 440 ಕೋಟಿ ರೂ. ಒಪ್ಪಂದ ಮಾಡಿಕೊಂಡಿತ್ತು. ಈ ಪ್ರಾಯೋಜಕತ್ವದ ಒಪ್ಪಂದವು ಐಪಿಎಲ್ 2023 ರ ನಂತರ ಮುಕ್ತಾಯಗೊಳ್ಳಬೇಕಿತ್ತು. ಆದರೆ ಬಿಸಿಸಿಐ ಹಾಗೂ ವಿವೋ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಪ್ರಾಯೋಜಕತ್ವ ಬದಲಾಗುತ್ತಿದೆ.
ಮುಂಬರುವ ಎರಡು ಸೀಸನ್ಗಳಲ್ಲಿನ ಪಂದ್ಯಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ ಐಪಿಎಲ್ 2022ಕ್ಕಾಗಿ 484 ಕೋಟಿ ರೂ ಮತ್ತು IPL 2023 ಗಾಗಿ 512 ಕೋಟಿಗಳನ್ನು ಪಾವತಿಸಲು ವಿವೋ ಕಂಪೆನಿ ಒಪ್ಪಿಕೊಂಡಿತ್ತು. ಅದರಂತೆ 2 ಸೀಸನ್ಗಾಗಿ ವಿವೋ 996 ಕೋಟಿ ರೂ. ಪಾವತಿಸಲು ಮುಂದಾಗಿತ್ತು. ಇದಾಗ್ಯೂ ಬಿಸಿಸಿಐ-ವಿವೋ ನಡುವೆ ಡೀಲ್ ಕುದುರದ ಕಾರಣ ಪ್ರಾಯೋಜಕತ್ವದಿಂದ ವಿವೋ ಹಿಂದೆ ಸರಿಯಲು ನಿರ್ಧರಿಸಿದೆ. ಈಗ ಅದೇ ಅವಧಿಗೆ ಟಾಟಾ ಗ್ರೂಪ್ ಕೇವಲ 670 ಕೋಟಿ ರೂ.ಗಳನ್ನು ಪಾವತಿಸಲಿದೆ. ಈ ಹಿಂದಿನ ಒಪ್ಪಂದದ ಷರತ್ತಿನಂತೆ ಉಳಿದ ಮೊತ್ತವನ್ನು (ವರ್ಗಾವಣೆ ಶುಲ್ಕ) ವಿವೋ ಕಂಪೆನಿ ಭರಿಸಬೇಕಿದೆ.
ಈ ಹಿಂದೆ OPPO ಕಂಪೆನಿಯು ತಮ್ಮ ಹಕ್ಕುಗಳನ್ನು BYJU ಸಂಸ್ಥೆಗೆ ವರ್ಗಾಯಿಸಿದಾಗ ಒಪ್ಪಂದ ‘ವರ್ಗಾವಣೆ ಶುಲ್ಕ’ ವನ್ನು ಬಿಸಿಸಿಐಗೆ ಪಾವತಿಸಿತ್ತು. ಇದೀಗ ಅದೇ ಮಾದರಿಯಲ್ಲಿ ಒಪ್ಪಂದ ಷರತ್ತಿನ ಅನ್ವಯ ವಿವೋ ಕಂಪೆನಿ ಕೂಡ ಟಾಟಾ ಗ್ರೂಪ್ ನೀಡುತ್ತಿರುವ 670 ಕೋಟಿಗಳ ಪಾವತಿಯ ಮೇಲೆ ಸುಮಾರು 450 ಕೋಟಿ ರೂ. ಬಿಸಿಸಿಐಗೆ ಪಾವತಿಸಬೇಕಿದೆ. ಇದರಿಂದಾಗಿ ಬಿಸಿಸಿಐಗೆ ಸುಮಾರು 120 ಕೋಟಿ ರೂ. ಅಧಿಕ ಮೊತ್ತ ಸಿಗಲಿದೆ. ಅಂದರೆ ಈ ಹಿಂದೆ ವಿವೋ ಎರಡು ಸೀಸನ್ಗಾಗಿ 996 ಕೋಟಿ ರೂ. ನೀಡಲು ಒಪ್ಪಿಗೆ ಸೂಚಿಸಿತ್ತು. ಇದೀಗ ಟಾಟಾ 670 ಕೋಟಿ + ವಿವೋ ವರ್ಗಾವಣೆ ಶುಲ್ಕವಾಗಿ 450 ಕೋಟಿ ರೂ. ಪಾವತಿಸಬೇಕಿದೆ. ಇದರಿಂದ ಬಿಸಿಸಿಐಗೆ ಈ ಹಿಂದೆ ವಿವೋ ಮುಂದಿಟ್ಟಿದ್ದ 996 ಕೋಟಿಗಿಂತ ಹೆಚ್ಚುವರಿ 124 ಕೋಟಿ ರೂ. ಸಿಗಲಿದೆ.
ಈ ಮೂಲಕ ಬಿಸಿಸಿಐ ಎರಡು ಸೀಸನ್ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವದಿಂದ 1120 ಕೋಟಿ ರೂ. ಅನ್ನು ಪಡೆಯಲಿದೆ. ಒಟ್ಟಿನಲ್ಲಿ ವಿವೋ ಟೈಟಲ್ ಸ್ಪಾನ್ಸರ್ಶಿಪ್ನಿಂದ ಹಿಂದೆ ಸರಿದರೂ, ಟಾಟಾ ಗ್ರೂಪ್ ಶೀರ್ಷಿಕೆ ಪ್ರಾಯೋಕತ್ವಕ್ಕೆ ಕಡಿಮೆ ಪಾವತಿಸಿದರೂ…ಬಿಸಿಸಿಐ ಮಾತ್ರ 124 ಕೋಟಿ ರೂ. ಅಧಿಕ ಲಾಭ ಪಡೆಯುತ್ತಿರುವುದು ವಿಶೇಷ.
ಇದನ್ನೂ ಓದಿ: IPL 2022: ಐಪಿಎಲ್ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?
(IPL 2022: BCCI to earn highest ever 800 crore revenue from sponsorship this season)