IPL 2022: ಐಪಿಎಲ್​ನಲ್ಲಿ ಕಠಿಣ ನಿಯಮ ಜಾರಿ ಮಾಡಲು ಮುಂದಾದ ಬಿಸಿಸಿಐ

| Updated By: ಝಾಹಿರ್ ಯೂಸುಫ್

Updated on: Mar 29, 2022 | 4:26 PM

IPL 2022: ಗುಜರಾತ್ ಟೈಟನ್ಸ್ ತಂಡದ ಆರಂಭಿಕನಾಗಿದ್ದ ಜೇಸನ್ ರಾಯ್ ಹಾಗೂ ಕೆಕೆಆರ್ ತಂಡಕ್ಕೆ ಆರಂಭಿಕನಾಗಿ ಅಲೆಕ್ಸ್ ಹೇಲ್ಸ್ ಆಯ್ಕೆಯಾಗಿದ್ದರು.

IPL 2022: ಐಪಿಎಲ್​ನಲ್ಲಿ ಕಠಿಣ ನಿಯಮ ಜಾರಿ ಮಾಡಲು ಮುಂದಾದ ಬಿಸಿಸಿಐ
IPL 2022
Follow us on

ಐಪಿಎಲ್ ಸೀಸನ್ 15 (IPL 2022) ಶುರುವಾಗಿದೆ. ಈಗಾಗಲೇ ಬಹುತೇಕ ತಂಡಗಳ ಮೊದಲ ಪಂದ್ಯ ಮುಗಿದಿದೆ. ಇದಾಗ್ಯೂ ಅನೇಕ ವಿದೇಶಿ ಆಟಗಾರರು ಇನ್ನೂ ಕೂಡ ಐಪಿಎಲ್​ನಲ್ಲಿ ಕಾಣಿಸಿಕೊಂಡಿಲ್ಲ. ರಾಷ್ಟ್ರೀಯ ತಂಡಗಳಲ್ಲಿರುವ ಆಟಗಾರರು ಇನ್ನಷ್ಟೇ ಐಪಿಎಲ್​ಗೆ ಆಗಮಿಸಬೇಕಿದೆ. ಆದರೆ ಈ ಆಟಗಾರರು ಬಂದೇ ಬರಲಿದ್ದಾರೆ ಎಂಬುದಕ್ಕೆ ಯಾವುದೇ ಖಚಿತತೆ ಇಲ್ಲ. ಹೀಗಾಗಿಯೇ ಈ ಬಗ್ಗೆ ಫ್ರಾಂಚೈಸಿಗಳು ಅಸಮಾಧಾನ ಹೊಂದಿದ್ದಾರೆ. ಏಕೆಂದರೆ ಈಗಾಗಲೇ ಮೆಗಾ ಹರಾಜಿನ ಮೂಲಕ ಖರೀದಿಸಲಾಗಿದ್ದ ಇಂಗ್ಲೆಂಡ್​ ಆಟಗಾರರಾದ ಅಲೆಕ್ಸ್ ಹೇಲ್ಸ್ ಹಾಗೂ ಜೇಸನ್ ರಾಯ್ ಐಪಿಎಲ್​ನಿಂದ ಹಿಂದೆ ಸರಿದಿದ್ದಾರೆ. ಇನ್ನೇನು ಟೂರ್ನಿ ಆರಂಭವಾಗಲಿದೆ ಅನ್ನುವಷ್ಟರಲ್ಲಿ ಟೂರ್ನಿಯಿಂದ ಹಿಂದೆ ಸರಿಯುತ್ತಿರುವ ಪ್ರವೃತ್ತಿ ಇದೇ ಮೊದಲೇನಲ್ಲ. ಹೀಗಾಗಿ ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಫ್ರಾಂಚೈಸಿಗಳು ಬಯಸಿದೆ.

ಗುಜರಾತ್ ಟೈಟನ್ಸ್ ತಂಡದ ಆರಂಭಿಕನಾಗಿದ್ದ ಜೇಸನ್ ರಾಯ್ ಹಾಗೂ ಕೆಕೆಆರ್ ತಂಡಕ್ಕೆ ಆರಂಭಿಕನಾಗಿ ಅಲೆಕ್ಸ್ ಹೇಲ್ಸ್ ಆಯ್ಕೆಯಾಗಿದ್ದರು. ದಿಢೀರಣೆ ಈ ಇಬ್ಬರು ಆಟಗಾರರು ಐಪಿಎಲ್​ನಿಂದ ಹಿಂದೆ ಸರಿದಿದ್ದು ತಂಡದ ಸಮತೋಲನ ಮೇಲೆ ಪರಿಣಾಮ ಬೀರಿದೆ ಎಂದು ಫ್ರಾಂಚೈಸಿಗಳು ತಿಳಿಸಿದ್ದಾರೆ. ಹೀಗೆ ಹರಾಜಿನಲ್ಲಿ ಕಡಿಮೆ ಮೊತ್ತ ಸಿಕ್ಕಿದಾಗ ಟೂರ್ನಿಯಿಂದ ಹಿಂದೆ ಸರಿಯುವ ಪ್ರವೃತ್ತಿಯ ಬಗ್ಗೆ ಕೆಲವು ಫ್ರಾಂಚೈಸಿಗಳು ಕಳವಳ ವ್ಯಕ್ತಪಡಿಸಿವೆ.

ಫ್ರಾಂಚೈಸಿಗಳು ಸಾಕಷ್ಟು ಯೋಜನೆಗಳ ನಂತರ ಆಟಗಾರನನ್ನು ಬಿಡ್ ಮಾಡುತ್ತಾರೆ. ಆಟಗಾರನು ಹೊರನಡೆದರೆ ಅವರ ಲೆಕ್ಕಾಚಾರಗಳು ತಲೆಕೆಳಗಾಗುತ್ತದೆ. ಇದು ತಂಡದ ಸಮತೋಲನವನ್ನು ಕೂಡ ತಪ್ಪಿಸುತ್ತಿದೆ ಎಂದು ಫ್ರಾಂಚೈಸಿ ಅಧಿಕಾರಿಯೊಬ್ಬರು ಐಪಿಎಲ್​ ಗವರ್ನರ್​ ಕೌನ್ಸಿಲ್​ಗೆ ಮುಂದೆ ಅಸಮಾಧಾನ ಹೊರಹಾಕಿದ್ದಾರೆ.

ಹೀಗಾಗಿ ಐಪಿಎಲ್​ನಿಂದ ಹಿಂದೆ ಸರಿಯುವ ಆಟಗಾರರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಬಿಸಿಸಿಐ ಬಯಸಿದೆ. ಅದರಂತೆ ಯಾವುದಾದರೂ ಆಟಗಾರರು ವಿನಾಕಾರಣ ಅಥವಾ ಸಾಮಾನ್ಯ ಕಾರಣಗಳನ್ನು ಮುಂದಿಟ್ಟು ಹಿಂದೆ ಸರಿದರೆ ಅವರನ್ನು ಬಿಸಿಸಿಐ ಬ್ಲ್ಯಾಕ್​ ಲೀಸ್ಟ್​ನಲ್ಲಿಡುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಅಂದರೆ ಹೀಗೆ ಬ್ಲ್ಯಾಕ್​ ಲೀಸ್ಟ್​ನಲ್ಲಿರುವ ಆಟಗಾರರನ್ನು ಒಂದು ವರ್ಷದವರೆಗೆ ಐಪಿಎಲ್​ನಿಂದ ನಿಷೇಧಿಸಬಹುದು. ಅಥವಾ ಮೆಗಾ ಹರಾಜಿನಲ್ಲಿ ಅವರನ್ನು ಬ್ಲ್ಯಾಕ್ ಲೀಸ್ಟ್​ನಲ್ಲಿಡುವ ಮೂಲಕ ಅವರ ಖರೀದಿಗೆ ಒಂದಷ್ಟು ನಿಯಮಗಳನ್ನು ರೂಪಿಸಬಹುದು. ಇದರಿಂದ ಫ್ರಾಂಚೈಸಿಗಳು ಕೂಡ ಅಂತಹ ಆಟಗಾರರ ಖರೀದಿ ಬಗ್ಗೆ ಎಚ್ಚರವಹಿಸುತ್ತಾರೆ. ಇಂತಹ ಕಠಿಣ ನಿಯಮಗಳನ್ನು ಜಾರಿಗೊಳಿಸುವ ಬಗ್ಗೆ ಬಿಸಿಸಿಐ ಚಿಂತಿಸಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಐಪಿಎಲ್​ನಲ್ಲಿ ಆಯ್ಕೆಯಾದ ವಿದೇಶಿ ಆಟಗಾರರು ಅರ್ಧದಲ್ಲೇ ಟೂರ್ನಿಗೆ ಕೈಕೊಡುವುದು ತಪ್ಪಲಿದೆ.

ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?

ಇದನ್ನೂ ಓದಿ:  IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು