IPL 2022: ಐಪಿಎಲ್ ಸೀಸನ್ 15 ಮುಕ್ತಾಯವಾಗಿದೆ. ಈ ಬಾರಿ ಪ್ರಶಸ್ತಿ ಗೆಲ್ಲುವ ಮೂಲಕ ಗುಜರಾತ್ ಟೈಟಾನ್ಸ್ (Gujarat Titans) ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇನ್ನು ಬ್ಯಾಟಿಂಗ್ ಮೂಲಕ ಇಡೀ ಸೀಸನ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಜೋಸ್ ಬಟ್ಲರ್ (jos Buttler) ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಬೌಲಿಂಗ್ನಲ್ಲಿ 27 ವಿಕೆಟ್ ಪಡೆದ ಯುಜುವೇಂದ್ರ ಚಹಲ್ ಪರ್ಪಲ್ ಕ್ಯಾಪ್ ಪಡೆದಿದ್ದಾರೆ.
ಅದೇ ರೀತಿ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಆಟಗಾರನಿಗೆ ನೀಡಲಾಗುವ ಪ್ರಶಸ್ತಿಯನ್ನು 45 ಸಿಕ್ಸ್ ಬಾರಿಸಿದ ಜೋಸ್ ಬಟ್ಲರ್ ಪಡೆದಿದ್ದಾರೆ. ಇದಾಗ್ಯೂ ಐಪಿಎಲ್ ಸೀಸನ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಆಟಗಾರನಿಗೆ ನೀಡಲಾಗುವ ಟಾಟಾ ಕಾರ್ ಮಾತ್ರ RCB ಆಟಗಾರನ ಪಾಲಾಗಿರುವುದು ವಿಶೇಷ.
ಹೌದು, ಸೂಪರ್ ಸ್ಟ್ರೈಕರ್ಗೆ ಘೋಷಿಸಲಾಗಿದ್ದ ಟಾಟಾ ಪಂಚ್ ಕಾರ್ ಆರ್ಸಿಬಿ ತಂಡದ ದಿನೇಶ್ ಕಾರ್ತಿಕ್ ಪಾಲಾಗಿದೆ. ಆರ್ಸಿಬಿ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಡಿಕೆ ಈ ಬಾರಿ 16 ಪಂದ್ಯಗಳಿಂದ 330 ರನ್ಗಳಿಸಿದ್ದರು. ಅದು ಕೂಡ 183 ರ ಸ್ಟ್ರೈಕ್ ರೇಟ್ನಲ್ಲಿ ಎಂಬುದು ವಿಶೇಷ. ಈ ಮೂಲಕ ಈ ಸೀಸನ್ನ ಸೂಪರ್ ಸ್ಟ್ರೈಕರ್ ಆಗಿ ಡಿಕೆ ಹೊರಹೊಮ್ಮಿದ್ದಾರೆ. ಅಲ್ಲದೆ ಈ ಬಾರಿಯ ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್ ಅವಾರ್ಡ್ ದಿನೇಶ್ ಕಾರ್ತಿಕ್ ಪಡೆದಿದ್ದಾರೆ. ಅದರಂತೆ ಟಾಟಾ ಪಂಚ್ ಕಾರ್ ಕೂಡ ದಿನೇಶ್ ಕಾರ್ತಿಕ್ ಪಾಲಾಗಿದೆ. ಫೈನಲ್ ಪಂದ್ಯದ ವೇಳೆ ದಿನೇಶ್ ಕಾರ್ತಿಕ್ ಅವರ ಅನುಪಸ್ಥಿತಿಯಲ್ಲಿ ಟಾಟಾ ಪಂಚ್ ಕಾರ್ ಅವಾರ್ಡ್ನ್ನು ಹಾರ್ದಿಕ್ ಪಾಂಡ್ಯ ಪಡೆದುಕೊಂಡರು.
GT ಚೊಚ್ಚಲ ಬಾರಿಗೆ ಚಾಂಪಿಯನ್:
ಇನ್ನು ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ 22 ರನ್ ಹಾಗೂ ಜೋಸ್ ಬಟ್ಲರ್ 39 ರನ್‌ಗಳಿಸಿ ಡಕ್ಕೆ ಆಸರೆಯಾದರು. ಆದರೆ ನಂತರ ಬಂದ ನಾಯಕ ಸಂಜು ಸ್ಯಾಮ್ಸನ್(14), ಪಡಿಕ್ಕಲ್(2), ಹೆಟ್ಮಾಯೆರ್(11), ಅಶ್ವಿನ್(6), ಪರಾಗ್(15), ಬೋಲ್ಟ್(11), ಮೆಕಾಯ್(8) ಜವಾಬ್ದಾರಿಯುತ ಆಟವಾಡುವಲ್ಲಿ ವಿಫಲರಾದರು. ಪರಿಣಾಮ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 130 ರನ್‌ಗಳಿಸಿತು. ಗುಜರಾತ್ ಪರ ಅದ್ಭುತ ಬೌಲಿಂಗ್ ದಾಳಿ ನಡೆಸಿದ ಹಾರ್ದಿಕ್ ಪಾಂಡ್ಯ(3/17), ಸಾಯಿ ಕಿಶೋರ್ (2/20) ರಾಜಸ್ಥಾನ್ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಿದರು. ಶಮಿ, ಯಶ್ ದಯಾಳ್ ಹಾಗೂ ರಶೀದ್ ತಲಾ 1 ವಿಕೆಟ್ ಪಡೆದರು.
131 ರನ್ ಸಾಧಾರಣ ಗೆಲುವಿನ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡ ಕೂಡ 23 ರನ್ ಗಳಿಸುವಷ್ಟರಲ್ಲಿ ವೃದ್ದಿಮಾನ್ ಸಹಾ ಹಾಗೂ ಮ್ಯಾಥ್ಯೂ ವೇಡ್ ಅವರ ವಿಕೆಟ್ ಗಳನ್ನು ಕಳೆದುಕೊಳ್ಳುವ ಮೂಲಕ ಆತಂಕಕ್ಕೆ ಸಿಲುಕಿತ್ತು.ಈ ಹಂತದಲ್ಲಿ ಜೊತೆಯಾದ ಶುಭ್ಮನ್ ಗಿಲ್ ಅಜೇಯ 45, ಹಾರ್ದಿಕ್ ಪಾಂಡ್ಯ 34 ಹಾಗೂ ಡೇವಿಡ್ ಮಿಲ್ಲರ್ ಅಜೇಯ 32 ರನ್ ಗಳಿಸುವುದರ ಮೂಲಕ ಗುಜರಾತ್ ಟೈಟಾನ್ಸ್ ತಂಡವು ಗೆಲುವಿನ ನಗೆಯನ್ನು ಬೀರುವಂತೆ ಮಾಡಿದರು. ಕೊನೆಗೆ ಗುಜರಾತ್ ತಂಡವು 18.1 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 133 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.